ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಕಿಂಗ್‌ಸರ್ಕಲ್‌ನ ಶ್ರೀ ಸುಕೃತೀಂದ್ರ ನಗರದಲ್ಲಿ ಆ. 25 ರಿಂದ ನಡೆಯಲಿರುವ ಗಣೇಶೋತ್ಸವದ ಪೂರ್ವಭಾವಿ ಸಭೆಯು ಆ. 19ರಂದು ಕಿಂಗ್‌ಸರ್ಕಲ್‌ನ ಗಣೇಶೋತ್ಸವ ಮಂಟಪದಲ್ಲಿ ಜರಗಿತು.
ಪ್ರಾರಂಭದಲ್ಲಿ ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್ ಅವರು ಪ್ರಾರ್ಥನೆಗೈದರು. ಸಹ ಸಂಚಾಲಕ ಜಿ. ಡಿ. ರಾವ್ ಸಭೆಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಕಳೆದ ಬಾರಿಯ ಸಭೆಯ ವರದಿ ವಾಚಿಸಿ ಗಣೇಶೋತ್ಸವಕ್ಕಾಗಿ ಸಂಗ್ರಹಿಸಿದ ಧನ ಸಂಗ್ರಹದ ವಿವರ ನೀಡಿದರು.
ಮಂಟಪ ಸಮಿತಿಯ ಮುಖ್ಯಸ್ಥ ಸತೀಶ್ ರಾಮ ನಾಯಕ್ ಅವರು ಮಾತನಾಡಿ, ಗಣೇಶೋತ್ಸವ ಸಂದರ್ಭದಲ್ಲಿ ಹುಂಡಿಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚು ಧನ ಸಂಗ್ರಹವಾಗುತ್ತಿದೆ. ಇದಕ್ಕೆ ಗಣಪತಿ ಭಕ್ತರಲ್ಲಿ ಇರುವ ಭಕ್ತಿ ಹಾಗೂ ವಿಶ್ವಾಸ ಕಾರಣವಾಗಿದೆ. ಈ ವರ್ಷ ಗಣಪತಿ ವಿಸರ್ಜನ ಟ್ರಾಲಿಯನ್ನು ಮಾಡಲಾಗಿದೆ. ನವೀನ ವಿನ್ಯಾಸವನ್ನು ಹೊಂದಿರುವ ಟ್ರಾಲಿಯು ಆಳ ಸಮುದ್ರದಲ್ಲಿ ಗಣಪತಿಯನ್ನು ವಿಸರ್ಜಿಸಲಿದೆ ಎಂದರು.
ಸೇವಾ ಮಂಡಳದ ಪ್ರಧಾನ ಅರ್ಚಕ, ಸ್ವಯಂ ಸೇವಕರ ಮುಖಂಡ ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್ ಅವರು ಮಾತನಾಡಿ, ವಾಲ್ಕೇಶ್ವರ ಶ್ರೀ ಕಾಶೀ ಮಠದಲ್ಲಿ ಮಾಧವೇಂದ್ರ ತೀರ್ಥ ಸ್ವಾಮೀಜಿ ಅವರಿಗೆ ಪ್ರಾರ್ಥನೆ ಸಲ್ಲಿಸಿ, ಅನಂತರ ಗಣೇಶೋತ್ಸವದ ಧನ ಸಂಗ್ರಹ ಪ್ರಾರಂಭಿಸುತ್ತಿದ್ದೇವೆ. ಈ ಸಂಗ್ರಹವು ಹೆಚ್ಚುತ್ತಾ ಬಂದಿದೆ. ಕೆಲವೊಮ್ಮೆ ಸದಸ್ಯೆಗಳು ಬರುವುದು ಸಹಜ. ಆದರೆ ಗಣಪತಿ ಆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತಾನೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ಸೇವಾ ಮಂಡಳದ ಅಧ್ಯಕ್ಷ ಯಶವಂತ್ ಕಾಮತ್ ಅವರು ಮಾತನಾಡಿ, ಧನ ಸಂಗ್ರಹದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಮಂಡಳದ ಕಾರ್ಯಕಾರಿ ಸಮಿತಿಯ ಸದಸ್ಯ ಪ್ರಶಾಂತ್ ಮಲ್ಯ ಅವರು ಪರಿಚಯ ಪತ್ರವನ್ನು ಪಡೆಯದ ಸ್ವಯಂ ಸೇವಕರು ಆ. 23ರೊಳಗೆ ಪರಿಚಯ ಪತ್ರವನ್ನು ಪಡೆಯುವಂತೆ ವಿನಂತಿಸಿದರು.
ಸಹ ಸಂಚಾಲಕ ಜಿ. ಯು. ಪ್ರಭು ಅವರು ಮಾತನಾಡಿ, ಗಣೇಶೋತ್ಸವ ಮಂಟಪದಲ್ಲಿ ಶುದ್ಧ ನೀರಿನ ಅತ್ಯುತ್ತಮ ವ್ಯವಸ್ಥೆ ಮಾಡಿರುವ ಬಗ್ಗೆ ವಿವರವಾಗಿ ತಿಳಿಸಿದರು. ಮಂಡಳದ ಮಾಜಿ ಅಧ್ಯಕ್ಷ ಆರ್. ಜಿ. ಭಟ್ ಅವರು ಗಣೇಶೋತ್ಸವದ ಐದು ದಿನಗಳ ಅವಧಿಗೆ ಸುರಕ್ಷತೆಗಾಗಿ ಭಕ್ತರಿಗೆ ಸೊತ್ತುಗಳಿಗೆ, ಸ್ವಯಂ ಸೇವಕರಿಗೆ, ಮಂಟಪದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ 264 ಕೋ. 40 ಲಕ್ಷ ರೂ. ಗಳ ವಿಮೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ದಿಲೀಪ್ ಪೈ ಅವರು ಭದ್ರತಾ ವ್ಯವಸ್ಥೆಯ ಬಗ್ಗೆ ತಿಳಿಸಿ, ಈಗಾಗಲೇ ಸ್ಥಳೀಯ ಭದ್ರತಾ ಅಧಿಕಾರಿಗಳು ಮಂಟಪದಲ್ಲಿ ಮಾಡಲಾದ ಸೂಕ್ತ ವ್ಯವಸ್ಥೆಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು. ಸೇವಾ ಮಂಡಳದ ಕಾರ್ಯದರ್ಶಿ ರಾಮನಾಥ ಕಿಣಿ ಅವರು ವಂದಿಸಿದರು.