ಕಲಬುರಗಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಙನ ಪ್ರತಿಮೆ ವಿರೂಪಗೊಳಿಸಿ ಅವಮಾನಿಸಿದ ಘಟನೆ ಕಲಬುರಗಿ ನಗರದ ಸಿಟಿ ಬಸ್ ಸ್ಟ್ಯಾಂಡ್ ಬಳಿ ಭಾನುವಾರ (ಜ.05) ಸಂಜೆ ಸಂಭವಿಸಿದೆ.
ಸಿಟಿ ಬಸ್ ಸ್ಟ್ಯಾಂಡ್ ಬಳಿಯ ರಾಯಣ್ಣ ಸರ್ಕಲ್ ನಲ್ಲಿರುವ ರಾಯಣ್ಣ ಪ್ರತಿಮೆಯ ಕೈಯಲ್ಲಿನ ಖಡ್ಗವನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ.
ಕಿಡಿಗೇಡಿಗಳ ಕೃತ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಮತ್ತು ಕುರುಬ ಸಮಾಜ ಬಾಂಧವರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ ಜಗತ್ ಸರ್ಕಲ್ ನಲ್ಲಿ ಟಯರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆ ಮೂಲಕ ಮಿಂಚಿನ ಪ್ರತಿಭಟನೆ ನಡೆಸಿದರು. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು. ಭಗ್ನಗೊಂಡಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪುನರ್ ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಏಕಾಏಕಿ ದಿಢೀರ್ ರಸ್ತೆ ತಡೆಯಿಂದಾಗಿ ಜಗತ್ ಸರ್ಕಲ್ ವೃತ್ತದಲ್ಲಿ ವಾಹನ ಸವಾರರು ತೀವ್ರ ಪರದಾಟ ನಡೆಸುವಂತಾಯಿತು.