Advertisement
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ “ಶಾದಿ ಭಾಗ್ಯ’ ಯೋಜನೆಯ ನೆರವು ಪಡೆಯಲು ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಅಗತ್ಯ ವಸ್ತುಗಳ ಬೆಲೆಯೂ ಏರಿಕೆ ಯಾಗಿರುವುದರಿಂದ ಯೋಜನೆಯ ಮೊತ್ತ 50 ಸಾವಿರ ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂಬ “ಬೇಡಿಕೆ’ ಇದೆ.
Related Articles
Advertisement
ವಧುವಿಗೆ 18 ವರ್ಷ, ವರನಿಗೆ 21 ವರ್ಷ ಆಗಿರಬೇಕು ಎಂಬ ನಿಯಮ ಇದ್ದರೂ ಅದಕ್ಕಿಂತ ಕಡಿಮೆ ವಯಸ್ಸಿನವರು ಅರ್ಜಿ ಸಲ್ಲಿಸಿರುವುದು ಪರಿಶೀಲನೆ ಸಂದರ್ಭ ದಲ್ಲಿ ಬಯಲಾಗಿದೆ. ಯೋಜನೆಯ ದುರ್ಬಳಕೆ ತಡೆಗಟ್ಟಲು ಅಲ್ಪ ಸಂಖ್ಯಾಕರ ನಿರ್ದೇಶನಾಲಯ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಿರ್ದೇಶ ನಾಲಯದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಅನಂತರವಷ್ಟೇ ಬ್ಯಾಂಕ್ ಖಾತೆ ಮೂಲಕ ವಧುವಿಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ.
ಅಲ್ಪಸಂಖ್ಯಾಕರ ಸಮುದಾಯದ ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ನೆರವು ಕಲ್ಪಿಸುವ ಯೋಜನೆಯಿಂದ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವವರಿಗೆ ಸಾಕಷ್ಟು ಅನುಕೂಲವಾಗಿದೆ. ಪ್ರಾರಂಭದಲ್ಲಿ ಅನುದಾನ ಬಿಡುಗಡೆಯಲ್ಲಿ ಸ್ವಲ್ಪ ನಿಧಾನ ಆಗಿದ್ದರಿಂದ ಯೋಜನೆಯಡಿ ಆಯ್ಕೆಗೊಂಡವರಿಗೆ ಪ್ರೋತ್ಸಾಹ ಧನ ತಲುಪುವುದು ವಿಳಂಬವಾಯಿತು. ಇದರಿಂದ ಸ್ವಲ್ಪ ಮಟ್ಟಿಗೆ ಸಮಸ್ಯೆಯಾಯಿತು. ಆದರೆ ಅನಂತರದ ವರ್ಷಗಳಲ್ಲಿ ಸಕಾಲಕ್ಕೆ ಹಣ ಬ್ಯಾಂಕ್ ಖಾತೆಗೆ ತಲುಪಿಸಲಾಗುತ್ತಿದೆ ಎಂದು ಅಲ್ಪಸಂಖ್ಯಾಕರ ನಿರ್ದೇಶನಾಲಯ ನಿರ್ದೇಶಕ ಅಕ್ರಂ ಪಾಶಾ ತಿಳಿಸುತ್ತಾರೆ.
ಓದುವವರ ಸಂಖ್ಯೆಯೂ ಹೆಚ್ಚಳ: ಇದೊಂದೇ ಯೋಜನೆಯಲ್ಲದೆ ಅಲ್ಪಸಂಖ್ಯಾಕರ ನಿರ್ದೇಶನಾಲಯದಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಐದು ವರ್ಷಗಳ ಹಿಂದೆ ಅಲ್ಪಸಂಖ್ಯಾಕ ಸಮುದಾಯದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ 4 ಲಕ್ಷ ಇದ್ದದ್ದು ಈಗ 14 ಲಕ್ಷಕ್ಕೆ ಏರಿದೆ. ಐಐಟಿ, ವಿದೇಶ ವ್ಯಾಸಂಗ ಸಹಿತ ಮೆಡಿಕಲ್, ಎಂಜಿನಿಯರ್ ವ್ಯಾಸಂಗಕ್ಕೆ ನೆರವು ಕಲ್ಪಿಸಲಾಗುತ್ತಿದೆ.
ಮೆಡಿಕಲ್ ಹಾಗೂ ಎಂಜಿನಿಯರ್ ವ್ಯಾಸಂಗ ಮೊದಲು ಅಲ್ಪಸಂಖ್ಯಾಕ ಸಮುದಾಯಕ್ಕೆ ಮರೀಚಿಕೆಯಾಗಿತ್ತು. ಇದೀಗ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಸರಕಾರದ ಸಹಾಯಧನದಿಂದಾಗಿ ಉನ್ನತ ವ್ಯಾಸಂಗ ಮಾಡುವಂತಾಗಿದೆ. ಜತೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲೂ ದಾಖಲಾತಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಶಾಲೆ ಬಿಡುವವರ ಸಂಖ್ಯೆಯಲ್ಲೂ ಇಳಿಮುಖವಾಗಿದೆ ಎಂದು ಹೇಳುತ್ತಾರೆ.
ಅರ್ಜಿ ಬೇಗ ವಿಲೇ ಮಾಡಿ: ಈ ಮಧ್ಯೆ, ವಿಲೇವಾರಿಗೆ ಬಾಕಿ ಇರುವ 14,000 ಅರ್ಜಿಗಳನ್ನು ವಿಧಾನಸಭೆ ಚುನಾವಣೆ ವೇಳೆಗೆ ಪ್ರಸಕ್ತ ಆರ್ಥಿಕ ವರ್ಷಾಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ವಿಲೇವಾರಿ ಮಾಡುವಂತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಅಲ್ಪಸಂಖ್ಯಾಕ ಸಮುದಾಯಕ್ಕೆ ಉನ್ನತ ಶಿಕ್ಷಣ, ಉದ್ಯೋಗ, ಶಾದಿಭಾಗ್ಯ ಯೋಜನೆ ಮೂಲಕ ನೆರವು ಕಲ್ಪಿಸಿರುವುದನ್ನೇ ಮುಂದಿಟ್ಟು ಅಲ್ಪಸಂಖ್ಯಾಕ ಸಮುದಾಯದ ಮತ ಗಳಿಸಲು ರಣತಂತ್ರ ರೂಪಿಸಿರುವ ಸರಕಾರ, ಆ ನಿಟ್ಟಿನಲ್ಲಿ ಸಾಧನೆಯ ಸಾಕ್ಷ್ಯಚಿತ್ರ ಸಹ ನಿರ್ಮಿಸಿ ಮನೆ ಮನೆಗೆ ತಲುಪಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
ನಗರ ಜಿಲ್ಲೆಗಳಲ್ಲಿ ಜಾಸ್ತಿ ಫಲಾನುಭವಿಗಳುಬೆಂಗಳೂರು ನಗರ ಜಿಲ್ಲೆಗಳಲ್ಲಿ ಐದು ವರ್ಷಗಳಲ್ಲಿ “ಶಾದಿ ಭಾಗ್ಯ’ ಯೋಜನೆ ಅತೀ ಹೆಚ್ಚು 5,610 ಮಂದಿಗೆ ನೆರವು ದೊರೆತಿದೆ. ಇನ್ನೂ 1 ಸಾವಿರ ಅರ್ಜಿಗಳು ಬಾಕಿಯಿವೆ. ಮಂಡ್ಯ ಜಿಲ್ಲೆಯಲ್ಲಿ ಅತೀ ಕಡಿಮೆ 664 ಫಲಾನುಭವಿಗಳಿಗೆ ತಲುಪಿದ್ದು 70 ಅರ್ಜಿಗಳು ಬಾಕಿಯಿವೆ. ಶಾದಿ ಭಾಗ್ಯ ಯೋಜನೆಯ ಮೊತ್ತ 50 ಸಾವಿರ ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಿಸುವ ಸಂಬಂಧ ಬೇಡಿಕೆ ಇದ್ದರೂ ಸದ್ಯಕ್ಕೆ ಆ ರೀತಿಯ ಪ್ರಸ್ತಾವಕ್ಕೆ ಅವಕಾಶ ಇಲ್ಲ ಎಂದು ಹಣಕಾಸು ಇಲಾಖೆ ತಿಳಿಸಿದೆ ಎಂದು ಹೇಳಲಾಗಿದೆ. – ಎಸ್. ಲಕ್ಷ್ಮೀನಾರಾಯಣ