Advertisement

Madhugiri ಪ್ರತ್ಯೇಕ ಜಿಲ್ಲೆ ಮಾಡುವ ಬಗ್ಗೆ ಸರಕಾರದಿಂದ ಪರಿಶೀಲನೆ: ಸಿದ್ದರಾಮಯ್ಯ

05:22 PM Sep 06, 2023 | Team Udayavani |

ತುಮಕೂರು : ರಾಜ್ಯದ 54 ಲಕ್ಷ ಮಕ್ಕಳಿಗೆ ಕ್ಷೀರ ಭಾಗ್ಯದಿಂದ ನೆರವಾಗಿದೆ.ನಮ್ಮ ಸರ್ಕಾರದ ಕ್ಷೀರ ಭಾಗ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮೆಚ್ವುಗೆ ಗಳಿಸಿದೆ. ನಾಡಿನ ಮಕ್ಕಳ ಮಾನಸಿಕ ಮತ್ತು ದೈಹಿಕ ಸದೃಢತೆಗಾಗಿ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದು 54 ಲಕ್ಷಕ್ಕೂ ಅಧಿಕ ಮಕ್ಕಳು ಪೌಷ್ಠಿಕ ಆಹಾರವನ್ನು ಪ್ರತಿ ದಿನ ಸೇವಿಸುವಂತಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮಧುಗಿರಿಯಲ್ಲಿ ಆಯೋಜಿಸಿದ್ದ ಕ್ಷೀರ ಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು‌ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿದ್ದರೆ ಮಾತ್ರ ಆರೋಗ್ಯವಂತರಾಗಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಎಲ್ಲಾ ಜಾತಿಯ ಎಲ್ಲಾ ಧರ್ಮದ ಬಡವರು ಮತ್ತು ಮಧ್ಯಮ ವರ್ಗದವರ ಮಕ್ಕಳ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆವು. ಹತ್ತು ವರ್ಷಗಳಿಂದ ಪ್ರತೀ ದಿನ ಲಕ್ಷಾಂತರ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗುವಂತೆ ಮಾಡಿದ್ದೇವೆ. ಹೀಗಾಗಿ ನಮ್ಮ ಹೆಮ್ಮೆಯ ಈ ಯೋಜನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ ಎಂದು ವಿವರಿಸಿದರು.

ಬಡವರು, ಮಧ್ಯಮ ವರ್ಗದವರ ಬದುಕಿಗೆ ಅನುಕೂಲ ಆಗುವ ಕಾರ್ಯಕ್ರಮವನ್ನು ನಾವು ರೂಪಿಸಿದರೆ ಬಿಜೆಪಿ ಯವರು ಅಡ್ಡಗಾಲು ಹಾಕಿ ಕಾರ್ಯಕ್ರಮ‌ ವಿಫಲಗೊಳಿಸಲು ಯತ್ನಿಸಿದರು. ಸ್ವತಃ ಪ್ರಧಾನಿ ಮೋದಿಯವರು ಬಡವರ ಪರ ಕಾರ್ಯಕ್ರಮ ನೀಡಿದ್ದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಅಪ್ಪಟ ಸುಳ್ಳು ಹೇಳಿದರು ಎಂದು ಟೀಕಿಸಿದರು.

ಅಂಬಾನಿ, ಅದಾನಿಗೆ ಕೊಟ್ಟರೆ ದೇಶದ ಆರ್ಥಿಕತೆಗೆ ನಷ್ಟ ಆಗುವುದಿಲ್ಲವೇ ಪ್ರಧಾನಿ ಮೋದಿಯವರೇ ಎಂದು ಖಾರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿಗಳು ಬಡವರು ಮಧ್ಯಮ ವರ್ಗದವರು ಸಮಾಧಾನದಿಂದ ಎರಡು ಹೊತ್ತು ಊಟ ಮಾಡಿದರೆ ವಿರೋಧಿಸಬೇಡಿ ಎಂದರು.

Advertisement

ಮಧುಗಿರಿಯನ್ನು ಜಿಲ್ಲೆ ಮಾಡುವ ಕೆ.ಎನ್.ರಾಜಣ್ಣ ಅವರ ಬೇಡಿಕೆಯನ್ನು ನಾನು ಖಂಡಿತ ಪರಿಶೀಲಿಸುತ್ತೇನೆ ಎಂದು ಸಿಎಂ ಹೇಳಿದರು. ಕೆ.ಎನ್.ರಾಜಣ್ಣ ಅವರನ್ನು ರಾಜಕೀಯವಾಗಿ ಕಳೆದುಕೊಂಡರೆ ಅದು ಮಧುಗಿರಿಯ ಜನತೆಗೆ ಬಹಳ ದೊಡ್ಡ ಲಾಸ್ ಆಗುತ್ತದೆ. ರಾಜಣ್ಣ ಬಡವರ ಪರವಾಗಿ ಸಿಕ್ಕಾಪಟ್ಟೆ ಕೆಲಸ ಮಾಡಿದ್ದಾರೆ. ಮಧುಗಿರಿಯಲ್ಲಿರುವ ಏಷ್ಯಾ ಖಂಡದಲ್ಲೇ ಪ್ರಸಿದ್ದವಾಗಿರುವ ಏಕಶಿಲೆ ಬೆಟ್ಟಕ್ಕೆ ರೋಪ್ ವೆ ಹಾಕಿಸುತ್ತೇವೆ ಎಂದು ಭರವಸೆ ನೀಡಿದರು.

ಪಶು ಪಾಲಕರಿಗೆ, ರೈತರಿಗೆ ಅನುಕೂಲ ಆಗಲಿ ಎನ್ನುವ ಕಾರಣದಿಂದ ಪ್ರತಿ ಲೀಟರ್ ಹಾಲಿನ ದರವನ್ನು 3 ರೂ ಹೆಚ್ಚಳ ಮಾಡಲಾಗಿದೆ ಎಂದರು.

ಶಾಲಾ ಮಕ್ಕಳಿಗೆ ಶೂ ಭಾಗ್ಯ ಕಾರ್ಯಕ್ರಮ ಘೋಷಣೆ ಮಾಡಿದ್ದು ಮಧುಗಿರಿಯಲ್ಲೇ, ಹೈಸ್ಕೂಲಿಗೆ ಹೋಗುವವರೆಗೂ ನನ್ನ ಕಾಲಲ್ಲಿ ಚಪ್ಪಲಿ ಇರಲಿಲ್ಲ. ನನ್ನ ಪರಿಸ್ಥಿತಿ ಉಳಿದ ಮಕ್ಕಳಿಗೆ ಬರಬಾರದು ಎನ್ನುವ ಕಾರಣದಿಂದ ಶೂ ಭಾಗ್ಯ ಜಾರಿಗೊಳಿಸಿದೆ ಎಂದರು.

ಎತ್ತಿನಹೊಳೆ ಯೋಜನೆಗೆ ಸಮರ್ಪಕವಾಗಿ ಹಣ ಕೊಡದೆ ಬಿಜೆಪಿ ಜಿಲ್ಲೆಯ ಜನತೆಗೆ ವಂಚಿಸಿತು. ತುಂಗಾ ಮೇಲ್ದಂಡೆ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರ ನೆರವು ನೀಡಲಿಲ್ಲ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎನ್ನುವ ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ ಎಂದು ಆರೋಪಿಸಿದರು.

ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ , ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ , ಶಾಸಕರುಗಳಾದ ರಂಗನಾಥ್, ಷಡಕ್ಷರಿ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next