Advertisement

Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

01:34 AM Nov 30, 2024 | Team Udayavani |

ದಾವಣಗೆರೆ: ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಕಚೇರಿಯಲ್ಲಿ ಲಭ್ಯವಾಗದೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ, ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿಯೇ ವಾಸವಿರ ಬೇಕು. ತಪ್ಪಿದ್ದಲ್ಲಿ ಶಿಸ್ತುಕ್ರಮ ಎದುರಿಸಲು ಸಿದ್ಧರಾಗಬೇಕು ಎಂದು ಖಡಕ್‌ ಎಚ್ಚರಿಕೆ ನೀಡಿದೆ.

Advertisement

ಅಧಿಕಾರಿಗಳು ನಿಯಮಾನುಸಾರ ಆಯಾ ಕಂದಾಯ ವೃತ್ತ ಇಲ್ಲವೇ ಕೇಂದ್ರ ಸ್ಥಾನಗಳಲ್ಲಿ ಕಡ್ಡಾಯವಾಗಿ ವಾಸ್ತವ್ಯವಿದ್ದು ಕರ್ತವ್ಯ ನಿರ್ವಹಿಸಬೇಕು. ಈ ಬಗ್ಗೆ ಸರಕಾರ ಹಲವು ಬಾರಿ ನಿರ್ದೇಶನ ನೀಡುತ್ತಲೇ ಇದ್ದರೂ ಸರಕಾರದ ಆದೇಶ ಧಿಕ್ಕರಿಸಿ ಕೇಂದ್ರ ಸ್ಥಾನದಿಂದ ಹೊರಗೆ ವಾಸ್ತವ್ಯವಿದ್ದಾರೆ. ಹೀಗಾಗಿ ಇದನ್ನು ಈ ಬಾರಿ ಗಂಭೀರವಾಗಿ ಪರಿಗಣಿಸಿರುವ ಸರಕಾರ, ತಪ್ಪಿ
ತಸ್ಥರ ವಿರುದ್ಧ ಶಿಸ್ತುಕ್ರಮ ಜರಗಿಸ ಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ಕಂದಾಯ ಇಲಾಖೆಯ ಬಹಳಷ್ಟು ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮಆಡಳಿತ ಅಧಿಕಾರಿಗಳು ಬೇರೆ ನಗರ,ಮಹಾನಗರದಲ್ಲಿ ವಾಸವಿರುತ್ತಿದ್ದು ಸಾರ್ವಜನಿಕರ ಕೆಲಸಗಳಿಗೆ ಕಚೇರಿಯಲ್ಲಿ ಲಭ್ಯವಾಗುತ್ತಿಲ್ಲ. ಅಧಿಕಾರಿಗಳು ಕೈಗೆ ಸಿಗದೆ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸರಕಾರ, ನ. 20ರಂದು ಹೊಸ ಸುತ್ತೋಲೆ ಹೊರಡಿಸಿ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯವಿರಲು ತಾಕೀತು ಮಾಡಿದೆ.

ಶಿಸ್ತು ಕ್ರಮಕ್ಕೆ ಸೂಚನೆ
ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಂಬಂಧಪಟ್ಟ ತಹಶೀಲ್ದಾರ್‌ ಈ ಕುರಿತು ಪರಿಶೀಲನೆ ನಡೆಸಬೇಕು. ದೂರುಗಳು ಹಾಗೂ ಲೋಪದೋಷಗಳು ಕಂಡುಬಂದರೆ ಆಯಾ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕು ಎಂದು ಕಂದಾಯ ಇಲಾಖೆ ನಿರ್ದೇಶನ ನೀಡಿದೆ.

ಮೊಬೈಲ್‌ ಕರೆಯಲ್ಲೇ ನಿರ್ವಹಣೆ!
ಕೆಲವು ಅಧಿಕಾರಿಗಳು ಕೇಂದ್ರ ಸ್ಥಾನಕ್ಕೆ ಬಾರದೆ ಎಲ್ಲಿಯೋ ಇದ್ದು ಕೇವಲ ದೂರವಾಣಿ, ಮೊಬೈಲ್‌ ಕರೆಗಳಲ್ಲಿಯೇ ಕೆಲಸ ನಿರ್ವಹಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇನ್ನು ಕೆಲವರು ಕೇವಲ ಸಭೆ, ಕಾರ್ಯಕ್ರಮಗಳಿದ್ದರಷ್ಟೇ ಕೇಂದ್ರ ಕಚೇರಿಗೆ ಬರುತ್ತಾರೆ. ಇಲ್ಲವೇ ಕಚೇರಿಗೆ ತಮಗೆ ತಿಳಿದ ಸಮಯಕ್ಕೆ ಕೆಲ ಹೊತ್ತು ಭೇಟಿ ನೀಡಿ ಹೋಗುತ್ತಾರೆ. ಇದಕ್ಕೆಲ್ಲ ಕಡಿವಾಣ ಹಾಕಿ ಅಧಿಕಾರಿಗಳು ಸಾರ್ವಜನಿಕರಿಗೆ ಸಿಗುವಂತೆ ಮಾಡಲು ಸರಕಾರ, ಅಧಿಕಾರಿಗಳ ಕೇಂದ್ರ ಸ್ಥಾನ ವಾಸ್ತವ್ಯ ಕಡ್ಡಾಯ ನಿಯಮ ಪಾಲನೆಗೆ ಆದೇಶ ಹೊರಡಿಸಿದೆ.

Advertisement

ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ವಾಸವಿದ್ದು ಸಾರ್ವಜನಿಕ ಸೇವೆಗೆ ಲಭ್ಯವಾಗಬೇಕು. ತಪ್ಪಿದ್ದಲ್ಲಿ ಅಂಥವರ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ಜರಗಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
-ರಾಜೇಂದರ್‌ ಕುಮಾರ್‌ ಕಟಾರಿಯಾ,
ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next