ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟದ ಕುರಿತು ಈಗಾಗಲೇ ಕೆಲವು ಸಿನಿಮಾಗಳು ಬಂದಿವೆ. ಇಂತಹ ಸಿನಿಮಾಗಳ ಮೂಲ ಉದ್ದೇಶ ಸಮಾಜದ ಅಂಚಿನಲ್ಲಿರುವವರ ಕಷ್ಟಗಳನ್ನು ತೋರಿಸಿ ಅವರಿಗೆ ನ್ಯಾಯ ಒದಗಿಸುವುದು. ಈ ವಾರ ತೆರೆಕಂಡಿರುವ “ಧೀರ ಭಗತ್ ರಾಯ್’ ಕೂಡಾ ಇದೇ ಹಾದಿಯಲ್ಲಿ ಸಾಗುವ ಸಿನಿಮಾ.
1974ರಲ್ಲಿ ದೇಶದಲ್ಲಿ ಜಾರಿಗೊಂಡ ಉಳುವವನೇ ಒಡೆಯ ಕಾನೂನು ಅನೇಕ ರೈತರಿಗೆ ಅನುಕೂಲ ಒದಗಿಸಿದರೆ, ಅದರ ಬೆನ್ನಲ್ಲೆ ಒಂದಿಷ್ಟು ಸಮಸ್ಯೆ ಉದ್ಭವಿಸಿದ್ದವು. ರೈತರಿಗೆ ಭೂಮಿ ಬಂದ ಮೇಲೆ ಅವರ ಬದುಕು ಬದಲಾಗಬೇಕಿತ್ತು. ಆದರೆ, ಅಲ್ಲಿ ಗೊಂದಲ, ಸಮಸ್ಯೆ ಉಂಟಾಗುತ್ತದೆ. ವ್ಯವಸ್ಥೆಯ ವಿರುದ್ಧ ಪ್ರಶ್ನೆ ಏಳುತ್ತವೆ. ಇದೇ ಅಂಶವನ್ನು ವಿಷಯ ವಸ್ತುವಾಗಿಸಿ ಕಥೆ ರೂಪಿಸಿ ಮಾಡಿರುವ ಚಿತ್ರವಿದು.
ಚಿತ್ರದ ಕಥೆ ಬಗ್ಗೆ ಹೇಳುವುದಾದರೆ ಭೂ ಸುಧಾರಣೆ ಕಾಯ್ದೆ ಬಂದಾಗ, ಜಮೀನ್ದಾರನೊಬ್ಬ ರೈತರ ಭೂಮಿ ಕಬ್ಜ ಮಾಡುತ್ತಾನೆ. ಅವರ ವಿರುದ್ಧ ನಾಯಕ ಕಾನೂನು ಹೋರಾಟ ಮಾಡುತ್ತಾನೆ. ಈ ಹೋರಾಟದಲ್ಲಿ ಸಾಕಷ್ಟು ತಿರುವು, ಅಸೂಯೆ, ದ್ವೇಷ, ಸಂಘರ್ಷಗಳಿವೆ. ಎಲ್ಲರಿಗೂ ಬದುಕುವ ಹಕ್ಕು ಸಂವಿಧಾನ ಕೊಟ್ಟಿದೆ ಎನ್ನುವುದನ್ನು ನಿರೂಪಿಸುತ್ತಾ ಸಾಗುವ ಸಿನಿಮಾ. ಸಿನಿಮಾದಲ್ಲಿ ಸಾಕಷ್ಟು ಹೋರಾಟಗಳಿವೆ, ಕಾನೂನಿನ ಬಗ್ಗೆ ಅರಿವು ಮೂಡಿಸುವ ಪ್ರಯತ್ನವೂ ಈ ಸಿನಿಮಾದಲ್ಲಿದೆ.
ಚಿತ್ರದಲ್ಲಿ ಗಂಭೀರ ವಿಚಾರಗಳಿವೆ. ಅದನ್ನು ಕಮರ್ಷಿಯಲ್ ಅಂಶಗಳೊಂದಿಗೆ ಹೇಳಲಾಗಿದೆ. ಇಲ್ಲಿ ಕೆಳ ಸಮುದಾಯದ ಜನ ತಿರುಗಿ ಬಿದ್ದರೆ ಅದರ ಪರಿಣಾಮ ಹೇಗಿರುತ್ತದೆ ಎಂಬುದನ್ನು ವಿವಿಧ ಸನ್ನಿವೇಶಗಳ ಮೂಲಕ ತೋರಿಸಲಾಗಿದೆ.
ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ರಾಕೇಶ್ ದಳವಾಯಿ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ನಾಯಕಿ ಸುಚರಿತಾ ಗೆಳತಿಯಾಗಿ, ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್ಥ, ಎಂ.ಕೆ. ಮಠ, ಹರಿರಾಮ್, ಸಂದೇಶ್ ನಟಿಸಿದ್ದಾರೆ.
ಆರ್.ಪಿ