Advertisement

4 ವರ್ಷಕ್ಕೊಮ್ಮೆ ನೋಟಿನ ಸುರಕ್ಷತಾ ಲಕ್ಷಣ ಬದಲು!

09:54 AM Apr 03, 2017 | Karthik A |

ಹೊಸದಿಲ್ಲಿ: ಮೂರು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾದ ಹೊಸ ಐನೂರು, ಎರಡು ಸಾವಿರ ರೂ. ಮುಖಬೆಲೆಯ ನೋಟುಗಳಲ್ಲಿನ ಸುರಕ್ಷತಾ ಲಕ್ಷಣಗಳು ಇನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಬದಲಾಗಲಿವೆ. ಇಂಥದ್ದೊಂದು ಕ್ರಮಕ್ಕೆ ಸರಕಾರ ಮುಂದಾಗಿದೆ. ವಿಶೇಷ ಸುರಕ್ಷತಾ ಗುಣ ಲಕ್ಷಣಗಳನ್ನು ಕೂಡ ಕಳ್ಳ ದಂಧೆಕೋರರು ನಕಲು ಮಾಡಿದ್ದರಿಂದ ಬೆಚ್ಚಿಬಿದ್ದಿರುವ ಸರಕಾರ, ಪ್ರತಿ 3 – 4 ವರ್ಷಗಳಿಗೊಮ್ಮೆ ನೋಟುಗಳಲ್ಲಿ ಅಳವಡಿಸಲಾಗಿರುವ ಸುರಕ್ಷತಾ ಲಕ್ಷಣಗಳನ್ನು ಬದಲಿಸಲು ನಿರ್ಧರಿಸಿದೆ.

Advertisement

ಇದರೊಂದಿಗೆ ದೇಶದಲ್ಲಿ ಹೊಸ ನೋಟುಗಳ ನಕಲಿ ನೋಟುಗಳಿಗೆ ಕಡಿವಾಣ ಹಾಕುವುದು ಹಾಗೂ ಕಪ್ಪು ಹಣ ದಂಧೆಯನ್ನು ತಡೆಯುವುದು ಈ ನಿರ್ಧಾರದ ಹಿಂದಿನ ಪ್ರಮುಖ ಉದ್ದೇಶ. ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿ 500 ಹಾಗೂ 2 ಸಾವಿರ ರೂ. ಮುಖಬೆಲೆಯ ನೋಟುಗಳ ಸುರಕ್ಷತಾ ಲಕ್ಷಣಗಳನ್ನು ಬದಲಾಯಿಸುವ ಕುರಿತು ಇತ್ತೀಚೆಗೆ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಮೆಹ್ರಿಷಿ ಹಾಗೂ ಕೇಂದ್ರ ಹಣಕಾಸು ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಗೃಹ ಸಚಿವಾಲಯದ ಅಧಿಕಾರಿಗಳು, ‘ಬಹುತೇಕ ಎಲ್ಲ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಪ್ರತಿ 3-4 ವರ್ಷಗಳಿಗೊಮ್ಮೆ ತಮ್ಮ ಕರೆನ್ಸಿ ನೋಟುಗಳ ಸುರಕ್ಷತಾ ಕ್ರಮಗಳನ್ನು ಬದಲಿಸುತ್ತವೆ. ಭಾರತವೂ ಇದೇ ನೀತಿಯನ್ನು ಅನುಸರಿಸಬೇಕಾದ ಅಗತ್ಯವಿದೆ’ ಎಂದಿದ್ದಾರೆ.

ದೀರ್ಘ‌ಕಾಲದ ಚಿಂತನೆ: ಭಾರತದ ಕರೆನ್ಸಿ ನೋಟುಗಳ ವಿನ್ಯಾಸಗಳಲ್ಲಿ ಬದಲಾವಣೆ ತರಬೇಕು ಎಂಬ ಆಲೋಚನೆ ಈ ಹಿಂದೆಯೇ ಇತ್ತು. ಆದರೆ, ನೋಟು ಅಪಮೌಲ್ಯ ಘೋಷಣೆಯವರೆಗೆ 1 ಸಾವಿರ ರೂ. ಮುಖಬೆಲೆಯ ನೋಟುಗಳಲ್ಲಿ (2000ನೇ ಇಸವಿಯಲ್ಲಿ ಪರಿಚಯಿಸಿದ್ದು) ಅಂಥ ದೊಡ್ಡ ಮಟ್ಟಿನ ಬದಲಾವಣೆಯನ್ನು ಮಾಡಿರಲಿಲ್ಲ. ಇನ್ನು 1987ರಲ್ಲಿ ಪರಿಚಯಿಸಲ್ಪಟ್ಟ 500 ರೂ. ಮುಖಬೆಲೆಯ ನೋಟುಗಳಲ್ಲಿ ಬದಲಾವಣೆ ತಾರದೇ ಒಂದು ದಶಕವೇ ಕಳೆದಿತ್ತು. ಈಗ ಹೊಸದಾಗಿ ಪರಿಚಯಿಸಲಾದ ನೋಟುಗಳಲ್ಲಿ ಹೆಚ್ಚುವರಿ ಭದ್ರತಾ ಲಕ್ಷಣಗಳನ್ನು ಸೇರಿಸಲಾಗಿಲ್ಲ. ಅಂದರೆ, ಇವುಗಳೂ ಅಮಾನ್ಯಗೊಂಡ ನೋಟುಗಳ ಮಾದರಿಯ ಭದ್ರತಾ ಲಕ್ಷಣಗಳನ್ನೇ ಹೊಂದಿವೆ.

ಪಾಕ್‌ನಲ್ಲಿ  ಮುದ್ರಣ: ಐಎಸ್‌ಐ ಸಹಾಯದಿಂದ ಪಾಕಿಸ್ಥಾನವು ಭಾರತದ ನೋಟುಗಳನ್ನು ನಕಲಿ ಯಾಗಿ ಮುದ್ರಿಸಿ ಅನಂತರ ಅದನ್ನು ಬಾಂಗ್ಲಾದೇಶದ ಮೂಲಕ ಭಾರತಕ್ಕೆ ರವಾನಿಸಲಾಗುತ್ತದೆ ಎಂದು ನಕಲಿ ನೋಟುಗಳೊಂದಿಗೆ ಸಿಕ್ಕಿಬಿದ್ದವರು ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ. 2016ರಲ್ಲಿ ಕೋಲ್ಕತಾದ ಭಾರತೀಯ ಅಂಕಿಅಂಶ ಸಂಸ್ಥೆ ನಡೆಸಿದ ಅಧ್ಯಯನವು ಭಾರತದಲ್ಲಿ 400 ಕೋಟಿ ರೂ. ಮೌಲ್ಯದ ನಕಲಿ ನೋಟುಗಳು ಚಲಾವಣೆಯಲ್ಲಿವೆ ಎಂದು ಹೇಳಿತ್ತು.

17ರಲ್ಲಿ 11 ನಕಲು
ಇತ್ತೀಚೆಗೆ ವಶಕ್ಕೆ ಪಡೆದುಕೊಳ್ಳಲಾದ ನಕಲಿ ನೋಟುಗಳನ್ನು ತನಿಖಾಧಿಕಾರಿಗಳು ಪರಿಶೀಲಿಸಿದಾಗ ಹೊಸ 2 ಸಾವಿರ ರೂ. ನೋಟಿನ 17 ಭದ್ರತಾ ವೈಶಿಷ್ಟ್ಯಗಳ ಪೈಕಿ 11 ಅನ್ನು ನಕಲು ಮಾಡಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ನಕಲಿ ನೋಟುಗಳ ಮುದ್ರಣ ಮತ್ತು ಕಾಗದದ ಗುಣಮಟ್ಟ ಸ್ವಲ್ಪಮಟ್ಟಿಗೆ ಕಳಪೆ ಆಗಿದ್ದರೂ ಮೇಲ್ನೋಟಕ್ಕೆ ನೈಜ ನೋಟಿನಂತೆಯೇ ಭಾಸವಾಗುತ್ತದೆ.

Advertisement

ನಕಲಾದ ಗುಣಲಕ್ಷಣಗಳು ಹೀಗಿವೆ:

– ನೋಟಿನಲ್ಲಿನ ಪಾರದರ್ಶಕ ಪ್ರದೇಶ, ಜಲಚಿಹ್ನೆ, ಅಶೋಕ ಚಕ್ರದ ಲಾಂಛನ

– ಎಡಭಾಗದಲ್ಲಿ ಬರೆಯಲಾದ 2000 ಎಂಬ ಅಂಕಿ, ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಗವರ್ನರ್‌ ಸಹಿ

– ಮುಂಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಬರೆಯಲಾದ ಮುಖಬೆಲೆಯ ಅಂಕಿ

– ಚಂದ್ರಯಾನದ ಸಂಕೇತ, ಸ್ವಚ್ಛ ಭಾರತ ಲೋಗೋ ಮತ್ತು ಮುದ್ರಣದ ವರ್ಷವನ್ನು ಕೂಡ ಯಥಾವತ್ತಾಗಿ ನಕಲು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next