ಬೆಂಗಳೂರು: ಐಸಿಸ್ ಉಗ್ರರು ಮತ್ತು ಲಿಬಿಯಾ ಸರಕಾರದ ನಡುವಿನ ಆಂತರಿಕ ಕಲಹ ತಹಬದಿಗೆ ಬಂದಿರುವುದರಿಂದ ಭಾರತೀಯ ವೀಸಾಗಳ ಮೇಲಿದ್ದ ನಿರ್ಬಂಧಕಾಜ್ಞೆಯನ್ನು ತೆರವು ಮಾಡಿದ್ದು, ಇನ್ನು ಮುಂದೆ ಪ್ರವಾಸಿ (ವಿಸಿಟಿಂಗ್) ವೀಸಾ ಹೊರತುಪಡಿಸಿ ಉಳಿದ ಯಾವುದೇ ಮಾದರಿಯ ವೀಸಾ ಮೂಲಕ ಭಾರತೀಯರು ನೇರವಾಗಿ ಆಫ್ರಿಕಾ ಖಂಡದ ಲಿಬಿಯಾ ದೇಶಕ್ಕೆ ತೆರಳಬಹುದು ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣ ಅವರು ಹೇಳಿದರು.
ಸುಮಾರು 8 ವರ್ಷಗಳ ಅನಂತರ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನುಮತಿ ನೀಡಿದ್ದು, ಈ ಹಿಂದೆ ಲಿಬಿಯಾ ಬಿಟ್ಟು ಬಂದವರು ಸೇರಿ ಯಾರೇ ಭಾರತೀಯರು ನೇರವಾಗಿ ಲಿಬಿಯಾಕ್ಕೆ ತೆರಳಲು ಅವಕಾಶ ದೊರೆತಂತಾಗಿದೆ.
ಶುಕ್ರವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ವಿವರಣೆ ನೀಡಿದ ಆರತಿ ಕೃಷ್ಣ, ಆಫ್ರಿಕಾ ಖಂಡದಲ್ಲಿರುವ ಲಿಬಿಯಾದಲ್ಲಿ ಭಾರತೀಯರು ತೈಲೋತ್ಪನ್ನ ಕಂಪೆನಿಗಳನ್ನು ನಡೆಸುತ್ತಿದ್ದು, ಉಕ್ಕು, ಸಿಮೆಂಟ್, ಅನಿಲ ಕ್ಷೇತ್ರಗಳಲ್ಲೂ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ವೈದ್ಯಕೀಯ ಸಿಬಂದಿ, ಶುಶ್ರೂಷಕರು, ತಾಂತ್ರಿಕ ಕ್ಷೇತ್ರ, ಉಪನ್ಯಾಸ (ಬೋಧನಾ) ವಲಯದಲ್ಲಿ ಅನೇಕ ಮಂದಿ ತೊಡಗಿಸಿಕೊಂಡಿದ್ದರು. ಒಟ್ಟಾರೆ ಉದ್ಯಮಿಗಳು, ಕಾರ್ಮಿಕ ವರ್ಗ ಸೇರಿ ಎಲ್ಲ ರೀತಿಯ ಜನರೂ ಸೇರಿ ಲಿಬಿಯಾದಲ್ಲಿ 25 ಸಾವಿರಕ್ಕೂ ಅಧಿಕ ಭಾರತೀಯರು ನೆಲೆ ಕಂಡುಕೊಂಡಿದ್ದರು ಎಂದರು.
ಆದರೆ, 2011ರಲ್ಲಿ ಲಿಬಿಯಾದಲ್ಲಿ ಆಂತರಿಕ ಸಂಘರ್ಷ ನಡೆದು 18 ಸಾವಿರಕ್ಕೂ ಅಧಿಕ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿತ್ತು. ಪುನಃ 2014ರಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಮತ್ತೆ 4 ಸಾವಿರ ಜನರನ್ನು ಕರೆತರಲಾಗಿತ್ತು. 2016ರಲ್ಲಿ ಐಸಿಸ್ ಉಗ್ರರು ಮತ್ತು ಸ್ಥಳೀಯ ಸರಕಾರದ ನಡುವಿನ ಸಂಘರ್ಷ ತಾರಕಕ್ಕೇರಿ, ಗುಂಡಿನ ಕಾಳಗದಲ್ಲಿ ಭಾರತೀಯ ಮೂಲದ ದಾದಿಯೊಬ್ಬರು ಮೃತಪಟ್ಟರು. ಅಂದಿನಿಂದ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು 2016ರ ಮೇ 23ರಿಂದ ಯಾವುದೇ ಉದ್ದೇಶಗಳಿಗೆ ಲಿಬಿಯಾ ಪ್ರವಾಸ ಕೈಗೊಳ್ಳದಂತೆ ನಿರ್ಬಂಧ ಹೇರಿತ್ತು. ಆದರೆ ಕೇಂದ್ರ ಸರಕಾರ ಲಿಬಿಯಾಕ್ಕೆ ತೆರಳಲು ಭಾರತೀಯ ವೀಸಾ ಮೇಲಿದ್ದ ನಿರ್ಬಂಧಕಾಜ್ಞೆಯನ್ನು ಆಗಸ್ಟ್ ಅನಂತರ ತೆರವು ಮಾಡಿದೆ ಎಂದು ಮಾಹಿತಿ ನೀಡಿದರು.