Advertisement

‘ಗ್ರಾಮಸ್ಥರ ಇಚ್ಛಾ ಶಕ್ತಿಯಿಂದ ಬೆಳಗಬಲ್ಲದು ಸರಕಾರಿ ಶಾಲೆ’

02:02 PM Jan 29, 2018 | Team Udayavani |

ಕೆಯ್ಯೂರು: ತೆಗ್ಗು ಗ್ರಾಮದ ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯ 50ನೇ ವರ್ಷದ ಚಿನ್ನದ ಹಬ್ಬ ‘ತೆಗ್ಗು ತೇರು’ ಕಾರ್ಯಕ್ರಮವನ್ನು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಶನಿವಾರ ಸಂಜೆ ಉದ್ಘಾಟಿಸಿದರು. ಒಟ್ಟು 36 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 47 ಕಾಮಗಾರಿಗಳನ್ನು ಸಮರ್ಪಿಸಿದರು.

Advertisement

ಕನ್ನಡ ಶಾಲೆಯನ್ನು ಉಳಿಸಿ, ಹಳ್ಳಿ ಶಾಲೆಯನ್ನು ಉಳಿಸಿ ಬೆಳೆಸುವ ಗ್ರಾಮಸ್ಥರ ಶ್ರಮ ಶ್ಲಾಘನೀಯ. ಈ ಶಾಲೆ ರಾಜ್ಯಕ್ಕೆ ಮಾದರಿಯಾಗಿದೆ. ಮುಚ್ಚುವ ಹಂತದಲ್ಲಿದ್ದ ತೆಗ್ಗು ಶಾಲೆ ಊರ ಜನರ ಶ್ರಮ, ಹೋರಾಟದ ಫ‌ಲವಾಗಿ ಈಗ 50 ವಸಂತಗಳನ್ನು ಕಾಣುವಂತಾಗಿದೆ. ಗ್ರಾಮಸ್ಥರು ಮನಸ್ಸು ಮಾಡಿದರೆ ಸರಕಾರಿ ಶಾಲೆಗಳು ಬೆಳಗಬಲ್ಲವು ಎಂದು ಶಾಸಕಿ ಶೆಟ್ಟಿ ಶ್ಲಾಘಿಸಿದರು.

ಸರಕಾರಿ ಶಾಲೆಗಳಲ್ಲಿಯೇ ಮೊದಲ ಬಾರಿಗೆ ಶಾಲೆಯ ಚಿತ್ರವೇ ಅಚ್ಚಾಗಿರುವ 2018ರ ತೆಗ್ಗು ತೇರು ಕ್ಯಾಲೆಂಡರನ್ನು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಬಿಡುಗಡೆಗೊಳಿಸಿ, ಶಾಲೆಗಳಿಗೆ ಬಹಳಷ್ಟು ಸೌಲಭ್ಯಗಳನ್ನು ಕೊಟ್ಟರೂ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುತ್ತಾರೆ. ಆದರೆ ತೆಗ್ಗು ಗ್ರಾಮಸ್ಥರು ಕನ್ನಡ ಸರಕಾರಿ ಶಾಲೆಯನ್ನು ಯಾವ ರೀತಿ ಅಭಿವೃದ್ಧಿ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ ಎಂದರು.

ತೆಗ್ಗು ಶಾಲೆಗೆ 6 ಲಕ್ಷ ರೂ. ವೆಚ್ಚದಲ್ಲಿ ಆಧುನಿಕ ಶೌಚಾಲಯ ಕೊಡುಗೆ ನೀಡಿದ ಉದ್ಯಮಿ, ಪುತ್ತೂರು ಪೂರ್ವ ರೋಟರಿ ಕ್ಲಬ್‌ ಅಧ್ಯಕ್ಷ ಜಯಂತ ನಡುಬೈಲು ಅವರಿಗೆ ತೆಗ್ಗು ತೇರು ಚಿನ್ನದ ಹಬ್ಬದ ಗೌರವ, ಶಾಲೆಗೆ ರಾಷ್ಟ್ರೀಯ ಚಿಹ್ನೆಗಳ ಮಂಟದ ಇತ್ಯಾದಿ ಒದಗಿಸಿದ ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಪಿ.ವಿ. ಗೋಕುಲನಾಥ್‌, ಪ್ರಾಂಶುಪಾಲೆ ಹೇಮಲತಾ ಗೋಕುಲನಾಥ್‌ ಅವರಿಗೆ ತೆಗ್ಗು ತೇರು ಗೌರವ ಸನ್ಮಾನವನ್ನು ಶಾಸಕಿ ಶಕುಂತಳಾ ಶೆಟ್ಟಿ ಪ್ರದಾನ ಮಾಡಿದರು. ಶಿಕ್ಷಕ ರಮೇಶ್‌ ಸಮ್ಮಾನ ಪತ್ರ ವಾಚಿಸಿದರು.

ಪುತ್ತೂರು ರಾಮಕೃಷ್ಣ ಪ್ರೌಢಶಾಲೆ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ಕೆಡಿಪಿ ಸದಸ್ಯ ಕೃಷ್ಣಪ್ರಸಾದ್‌ ಆಳ್ವ , ಕೆಯ್ಯೂರು ಗ್ರಾ.ಪಂ. ಸದಸ್ಯೆ ಅಮಿತಾ ಎಚ್‌. ರೈ, ಹಿರಿಯ ವಿದ್ಯಾರ್ಥಿ ಸಂಘದ ಅದ್ಯಕ್ಷ ಸುಭಾಶ್ಚಂದ್ರ ರೈ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಗೌಡ ನೆಲ್ಲಿಗುರಿ, ಆರ್ಥಿಕ ಸಮಿತಿ ಸಂಚಾಲಕ ಭಾಸ್ಕರ ರೈ ದೇರಾಜೆ, ಶಾಲಾ ಮುಖ್ಯ ಗುರು ಭಾರತಿ ಸ್ವರಮನೆ, ಸ್ನೇಹಾ ಫ್ರೆಂಡ್ಸ್‌ ಕ್ಲಬ್‌ ಅಧ್ಯಕ್ಷೆ ಶುಭಾ ಪ್ರಕಾಶ್‌ ಎರಬೈಲು, ಕೆಯ್ಯೂರು ಕ್ಲಸ್ಟರ್‌ ಸಿಆರ್‌ಪಿ ಅಬ್ದುಲ್‌ ಬಶೀರ್‌ ಉಪಸ್ಥಿತರಿದ್ದರು.

Advertisement

ತೆಗ್ಗು ಹಾಲು ಉತ್ಪಾದಕರ ಸಂಘದ ರಾಮಕೃಷ್ಣ ರೈ ಕೊಡಂಬು ಶಾಲಾ ವರದಿ ಬಿಡುಗಡೆಗೊಳಿಸಿದರು. ತೆಗ್ಗು ತೇರು ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ದುಲ್‌ ಖಾದರ್‌ ಮೇರ್ಲ ಸ್ವಾಗತಿಸಿ, ಲಿಟ್ಲ ಪ್ಲವರ್‌ ಶಾಲಾ ಶಿಕ್ಷಕ ಬಾಲಕೃಷ್ಣ ಪೊರ್ದಾಲ್‌, ಚನಿಲ ಶರತ್‌ ಆಳ್ವ ಕಾರ್ಯಕ್ರಮ ನಿರೂಪಿಸಿ, ಸ್ವಾಗತ ಸಮಿತಿ ಪ್ರ. ಕಾರ್ಯದರ್ಶಿ ಮೋಹನ ಗೌಡ ಎರಕ್ಕಳ ವಂದಿಸಿದರು. ಮಧ್ಯಾಹ್ನ ಭೋಜನದ ಬಳಿಕ ಶಾಲಾ ದಿನಾಚರಣೆ ನಡೆಯಿತು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾರಾಯಣ ಗುರು ನೃತ್ಯಕಲಾ ತಂಡ ಮಾಣಿ ಇವರಿಂದ ಭಕ್ತಿ ನೃತ್ಯ, ಸಂಜೆ ತೆಗ್ಗು
ಮತ್ತು ಸೊರಕೆ ಅಂಗನವಾಡಿ ಮಕ್ಕಳಿಂದ ‘ಎಳೆಯರ ಸಂತಸ’ ತೆಗ್ಗು ವಿದ್ಯಾರ್ಥಿಗಳಿಂದ ‘ನೃತ್ಯ ನಿವೇದನೆ’, ಶಂಬೂರು ಪ್ರೌಢಶಾಲಾ ಮಕ್ಕಳಿಂದ ರಾಷ್ಟ್ರಮಟ್ಟದ ಪ್ರಥಮ ಪ್ರಶಸ್ತಿ ಪಡೆದ ನಾಟಕ ‘ಕಿಷ್ಕಿಂದೆ ಕೌತುಕ’ ರಾತ್ರಿ ವಿಶ್ವ ಕಲಾನಿಕೇತನ ಪದಡ್ಕ ಇವರಿಂದ ರಮೇಶ್‌ ಉಳಯ ರಚನೆಯ ವಿಶಿಷ್ಟ ನೃತ್ಯ ರೂಪಕ ‘ತಾಯಿದೇಯಿ’ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ನೆರವಿನಲ್ಲಿ ಬಾಲಕೃಷ್ಣ ಶೆಟ್ಟಿ ಮುಂಡಾಜೆ ನಿರ್ದೇಶನದಲ್ಲಿ 50 ವೇಷ 50 ಸನ್ನಿವೇಶಗಳ 150 ನಿಮಿಷದ ವಿಶೇಷ ಯಕ್ಷಗಾನ ‘ಭಾಗ್ಯ ಸಂಪನ್ನ’ ನಡೆಯಿತು.

ಕನ್ನಡ ಮೂಲ ಶಿಕ್ಷಣವಾಗಲಿ
ಶಾಲೆಯ ನವೀಕೃತ ಕಚೇರಿ ಹಾಗೂ ಕೈ ತೊಳೆಯುವ ನೀರಿನ ವ್ಯವಸ್ಥೆಯನ್ನು ಉದ್ಘಾಟಿಸಿದ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಕಲಿತಿರುವ ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸವಿದೆ. ನಮ್ಮ ಮಕ್ಕಳಿಗೆ ಕನ್ನಡ ಮೂಲ ಶಿಕ್ಷಣವಾಗಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next