ಮುಂಬಯಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿವಾದಾತ್ಮಕ ‘ಬಟೆಂಗೆ ತೊ ಕಟೆಂಗೆ’ (ವಿಭಜನೆಯಾದರೆ ನಾವು ನಾಶವಾಗುತ್ತೇವೆ)ಘೋಷಣೆಯನ್ನು ಅನುಮೋದಿಸಲು ಸಾಧ್ಯವಿಲ್ಲ ಎಂದು ಎನ್ ಡಿಎ ಮಿತ್ರ ಪಕ್ಷ ಎನ್ ಸಿಪಿ(ಅಜಿತ್ ಪವಾರ್) ನಾಯಕ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
‘ನಾನು ಈ ಘೋಷಣೆಯನ್ನು ವಿರೋಧಿಸಿದ್ದೇನೆ ಮತ್ತು ಬಿಜೆಪಿಯ ಹಿರಿಯ ನಾಯಕರೂ ಇದನ್ನು ಟೀಕಿಸಿದ್ದಾರೆ. ಮಹಾರಾಷ್ಟ್ರವು ಉತ್ತರ ಪ್ರದೇಶವಲ್ಲ. ಈ ರೀತಿಯ ವಾಕ್ಚಾತುರ್ಯ ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ ‘ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಈ ಹಿಂದೆ ಯೋಗಿ ಅವರ ಘೋಷಣೆಯನ್ನು ಸಮರ್ಥಿಸಿಕೊಂಡು ಏಕತೆಯ ಕೊರತೆಯಿಂದಾಗಿ ಹಿಂದೂಗಳು ಅನುಭವಿಸಿದ ಐತಿಹಾಸಿಕ ನಿದರ್ಶನಗಳನ್ನು ಎತ್ತಿ ತೋರಿಸುತ್ತದೆ ಎಂದಿದ್ದ ಬಿಜೆಪಿ ನಾಯಕ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಪವಾರ್ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ‘ಏಕ್ ಹೇ ತೊ ಸೇಫ್ ಹೇ’ ಸಂದೇಶವನ್ನು ಅನುಮೋದಿಸಿ, ಪ್ರತಿಪಕ್ಷಗಳ ಆಪಾದಿತ ವಿಭಜಕ ರಾಜಕೀಯ ಎಂದು ಫಡ್ನವಿಸ್ ಹೇಳಿದ್ದಾರೆ.
ಬಿಜೆಪಿ ನಾಯಕಿ ಪಂಕಜಾ ಮುಂಡೆ ಮತ್ತು ಅಶೋಕ್ ಚವಾಣ್ ಅವರೂ ಆದಿತ್ಯನಾಥ್ ಅವರ ಹೇಳಿಕೆ ಕಳಪೆ ಅಭಿರುಚಿಯದ್ದು ಮತ್ತು ನಮ್ಮ ರಾಜಕೀಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಖಂಡಿಸಿದ್ದರು.
ವಿಭಿನ್ನ ಸಿದ್ಧಾಂತ
ಯೋಗಿ ಹೇಳಿಕೆ ಮತ್ತೆ ಸಮರ್ಥಿಸಿಕೊಂಡ ಡಿಸಿಎಂ ಫಡ್ನವಿಸ್ “ಅಜಿತ್ ಪವಾರ್, ಅಶೋಕ್ ಚವಾಣ್ ವಿಭಿನ್ನ ಸಿದ್ಧಾಂತದಿಂದ ಬಂದವರು. ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಹಿಂದಿನ ಆಳವಾದ ಅರ್ಥವನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ನಾವು ಅವರಿಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತೇವೆ ಎಂದಿದ್ದಾರೆ.