ತಿಪಟೂರು: ನಗರಸಭೆ ವ್ಯಾಪ್ತಿಯ ಗೊರಗೊಂಡನಹಳ್ಳಿ ಸಮೀಪದ ಇಂಡಿಯನ್ ಪೆಟ್ರೋಲ್ ಬಂಕ್ ಹತ್ತಿರ ಸೇತುವೆ ನಿರ್ಮಾಣಕ್ಕೆಂದು ರಸ್ತೆಯನ್ನು ಅಗೆದಿರುವ ಕಾರಣ, ಅದು ದೊಡ್ಡ ಗುಂಡಿ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ನಗರಸಭೆ ಗಮನಹರಿಸಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
ಈ ರಸ್ತೆಯು ತಿಪಟೂರು-ತುರುವೇಕೆರೆಯ ಮುಖ್ಯ ರಸ್ತೆಯಾಗಿದ್ದು, ಮೈಸೂರು, ಚನ್ನರಾಯಪಟ್ಟಣ ಮತ್ತಿತರ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತಿದ್ದು, ಅಲ್ಲದೆ ಎಪಿಎಂಸಿ ಮಾರುಕಟ್ಟೆಗೆ ವಿವಿಧ ಭಾಗಗಳಿಂದ ಕೊಬ್ಬರಿ ಲೋಡು ತುಂಬಿಕೊಂಡು ವಾಹನಗಳು ಇದೇ ರಸ್ತೆಯಲ್ಲಿ ಓಡಾಡಬೇಕಿದೆ. ಸ್ವಲ್ಪ ಯಾಮಾರಿದರೂ ದೊಡ್ಡ ಅನಾವುತ ಕಟ್ಟಿಟ್ಟ ಬುತ್ತಿ.
ರಾತ್ರಿ ಸಂಚಾರಕ್ಕೆ ಕಷ್ಟ: ಸೇತುವೆ ನಿರ್ಮಾಣಕ್ಕೆಂದು ರಸ್ತೆಯನ್ನು ಅಗೆದು ತಾತ್ಕಾಲಿಕವಾಗಿ ಮಣ್ಣು ಹಾಕಿ ಕಳಪೆ ಡಾಂಬರೀಕರಣ ಮಾಡಿ, ಅಧಿಕಾರಿಗಳು ತಮ್ಮ ಕೆಲಸವನ್ನು ಮುಗಿಸಿಕೊಂಡು ಹೋಗಿದ್ದಾರೆ. ಆದರೆ, ಡಾಂಬರೀಕರಣ ಕಳಪೆಯಾಗಿರುವುದರಿಂದ ಮಳೆಗೆ ಕೊಚ್ಚಿ ಹೋಗಿದ್ದು 2-3 ಅಡಿ ಆಳಕ್ಕೆ ರಸ್ತೆ ಇಳಿದಿದೆ. ದೂರದಿಂದ ಗುಂಡಿ ಬಿದ್ದಿರುವುದು ವಾಹನ ಸವಾರರಿಗೆ ಕಾಣದೆ ಏಕಾಏಕಿ ಸವಾರರು ಬ್ರೇಕ್ ಹಾಕುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ಗುಂಡಿ ತಪ್ಪಿಸಿ ಪಕ್ಕದಲ್ಲಿ ಹೋಗಬೇಕೆಂದು ಹೋದರೆ ಅಲ್ಲಿಯೇ ಬೃಹತ್ ಚರಂಡಿ ಇದ್ದು, ರಾತ್ರಿ ವೇಳೆ ಓಡಾಡುವುದಕ್ಕೆ ಕಷ್ಟಕರವಾಗಿದೆ. ಮಳೆ ಬಂದರಂತೂ ರಸ್ತೆಯಲ್ಲಿರುವ ಗುಂಡಿಯೇ ಕಾಣದೆ ಸವಾರರಂತೂ ಹರಸಾಹಸ ಪಟ್ಟುಕೊಂಡು ಓಡಾಡುವಂತಾಗಿದೆ.
ಈ ಬಗ್ಗೆ ಪತ್ರಿಕೆಯಲ್ಲಿ ಹಲವು ಬಾರಿ ಸುದ್ದಿ ಪ್ರಕಟವಾಗಿದೆ. ಸುದ್ದಿ ನೋಡಿ ಎಚ್ಚತ್ತುಕೊಂಡ ಅಧಿಕಾರಿಗಳು ಮಣ್ಣು ಹಾಕಿ ಸುಮ್ಮನಾಗುತ್ತಾರೆ. ಮಳೆ ಬಂದ ತಕ್ಷಣ ಮಣ್ಣು ಕೊಚ್ಚಿಹೋಗಿ ಮತ್ತದೇ ಅವ್ಯವಸ್ಥೆ ಉಂಟಾಗಲಿದೆ. ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ ಶಾಶ್ವತ ಗುಂಡಿ ಮುಚ್ಚುವ ವ್ಯವಸ್ಥೆ ಕಲ್ಪಿಸದಿರುವುದು ದುರ್ದೈವೇ ಸರಿ ಎಂದು ಸಾರ್ವಜನಿಕರು ತಿಳಿಸಿದ್ದಾರೆ.