ಶಿರಸಿ: ನಾನು ನನ್ನ ಕಾರ್ಯಕರ್ತರಿಗೆ ಮೋಸ ಮಾಡಲು ಸಾಧ್ಯವಿಲ್ಲ. ಪುನಃ ಸ್ಪರ್ಧೆ ಮನಸ್ಸೂ ಇದೆ ಜೊತೆಗೆ ವಯಸ್ಸೂ ಇದೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದರು.
ಶಿರಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಯಲ್ಲಿ ಗುರುವಾರ ರಾತ್ರಿ ರಾಜೀನಾಮೆ ಸಲ್ಲಿಸಿ ಸುದ್ದಿಗಾರರ ಜೊತೆ ಮಾತನಾಡಿದರು.
ಸ್ವತಂತ್ರವಾಗಿ ನಿಲ್ಲಬೇಕು ಎಂಬ ಮನಸ್ಸಿದೆ ಆದರೆ ಚಿಹ್ನೆ ಬೇಕಾಗಿದೆ ಎಂಬ ಮಾತೂ ಇದೆ. ರಾಜೀನಾಮೆ ಕೊಟ್ಟ ನಂತರ ಎರಡು ದಿನದಲ್ಲಿ ಬೆಂಬಲಿಗರ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು. 2008ರಲ್ಲಿ, 2013ರಲ್ಲಿ ಸ್ವತಂತ್ರವಾಗಿ ನಿಂತಿದ್ದೆ.
2018ರಲ್ಲಿ ಬಿಜೆಪಿ ಸೇರಿದೆ. ಆಗ ಅಧಿಕಾರಕ್ಕೆ ಬರಲು ಕಾರಣ ಇರಬಹುದು. ಆದರೆ, ಈಗ ಟಿಕೆಟ್ ಗೆ ಸಾಮಾಜಿಕ ನ್ಯಾಯ ಎಂದು ಬಿಜೆಪಿಯವರು ಪ್ರಸ್ತಾಪ ಮಾಡಿದ್ದಾರೆ. ಯಡಿಯೂರಪ್ಪ ಅವರ ಶಿಷ್ಯ ಹಾಗೂ ಅವರ ಮಗ ವಿಜಯೇಂದ್ರರ ಗೆಳೆಯಗೆ ಟಿಕೆಟ್ ಕೊಟ್ಟಿದ್ದಾರೆ. ನಾನು ಅದರ ಬಗ್ಗೆ ಮಾತನಾಡುವದಿಲ್ಲ ಎಂದರು.
ಯಾರಿಗೆ ಟೀಕೆ ಮಾಡಿ ಏನು ಪ್ರಯೋಜನವಿಲ್ಲ. ಜೆಡಿಎಸ್ ಹಾಗೂ ಎನ್ ಪಿಪಿ, ರೆಡ್ಡಿ ಪಕ್ಷದಿಂದಲೂ ಪಕ್ಷಕ್ಕೆ ಬರುವಂತೆ ಹೇಳುತ್ತಿದ್ದಾರೆ ಎಂದರು.