Advertisement

ಕರಾವಳಿಯ ವಿವಿಧೆಡೆ ಉತ್ತಮ ಮಳೆ; ಹಾನಿ

01:58 AM Apr 23, 2022 | Team Udayavani |

ಮಂಗಳೂರು/ಉಡುಪಿ: ಕರಾವಳಿಯ ವಿವಿಧೆಡೆ ಶುಕ್ರವಾರ ಮುಂಜಾವ ಮತ್ತು ಸಂಜೆಯ ವೇಳೆ ಸಿಡಿಲು ಸಹಿತ ಗಾಳಿ ಮಳೆಯಾಗಿದೆ. ಉಡುಪಿ ಜಿಲ್ಲೆಯ ವಿವಿಧೆಡೆ ಮುಂಜಾನೆ ಮಳೆ ಅಬ್ಬರಿಸಿದರೆ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸಂಜೆಯ ವೇಳೆ ಉತ್ತಮ ಮಳೆಯಾಯಿತು. ಹಲವೆಡೆ ಸಿಡಿಲು ಮತ್ತು ಗಾಳಿಯಿಂದ ಹಾನಿಯಾಗಿದೆ.
ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸಂಜೆ ವೇಳೆ ಸಾಧಾರಣ ಮಳೆಯಾಗಿದೆ.

Advertisement

ಸುಳ್ಯದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಉತ್ತಮ ಮಳೆಯಾಗಿದೆ. ಮಳೆ ಮತ್ತು ವಿಪರೀತ ಗಾಳಿಗೆ ಅಲ್ಲಿಲ್ಲಿ ಹಾನಿಯಾಗಿದೆ. ಎಣ್ಮೂರು, ಮಡಪ್ಪಾಡಿ,ನೆಲ್ಲೂರು ಕೆಮ್ರಾಜೆ, ಬಳ್ಪ, ಬೆಳ್ಳಾರೆ ಕಾವಿನಮೂಲೆ, ಬಾಳಿಲ, ಕೇನ್ಯ, ಹರಿಹರ ಪಳ್ಳತ್ತಡ್ಕ, ಬಿಳಿನೆಲೆ ಮೊದಲಾ ದೆಡೆ ಗುಡುಗು ಸಹಿತ ಗಾಳಿ ಮಳೆಯಾಗಿದೆ.

ವಿಟ್ಲ: ಮನೆಮಂದಿಯ ಸ್ಥಳಾಂತರ
ವಿಟ್ಲ ಪರಿಸರದಲ್ಲಿ ಶುಕ್ರವಾರ ಸಂಜೆ ವೇಳೆ ಸುರಿದ ಭಾರೀ ಗಾಳಿಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ. ಬೊಬ್ಬೆಕೇರಿ ಮೀನು ಮಾರುಕಟ್ಟೆ ಸಮೀಪದ ಬೀಪಾತುಮ್ಮ ಅವರ ಮನೆ ಛಾವಣಿಯ ಶೀಟ್‌ ಗಾಳಿಗೆ ಹಾರಿ ಹೋಗಿದೆ. ಮನೆಮಂದಿಯನ್ನು ಸಮೀಪದ ಮನೆಗೆ ಸ್ಥಳಾಂತರಿಸಲಾಗಿದೆ.

ಸಾಲೆತ್ತೂರು ರಸ್ತೆಯ ನಿವಾಸಿ ಪಾಂಡುರಂಗ ಆಚಾರ್ಯ ಅವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಮತ್ತು ಪಟ್ಟಣ ಪಂಚಾಯತ್‌ ಸಿಬಂದಿ ಭೇಟಿ ನೀಡಿದ್ದಾರೆ.

ಬೆಳ್ತಂಗಡಿ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಪುತ್ತೂರು, ಬಂಟ್ವಾಳ ತಾಲೂಕಿನ ವಿವಿಧೆಡೆ ಗುಡುಗು,
ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಬಾಯಾರು, ಬದಿಯಡ್ಕ, ಪೆರ್ಲ ಪರಿಸರದಲ್ಲಿ ಸಾಧಾರಣ ಮಳೆಯಾಗಿದೆ.

Advertisement

ಉಡುಪಿ ಜಿಲ್ಲೆ: ಮನೆಗಳಿಗೆ ಹಾನಿ
ಉಡುಪಿ ಜಿಲ್ಲೆಯಲ್ಲಿ ಗುರುವಾರ ಮಳೆ ಗಾಳಿ ಯಿಂದ ಹಲವೆಡೆ ಮನೆಗಳಿಗೆ ಹಾನಿ ಸಂಭವಿಸಿದೆ. ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮದ ಸರಸ್ವತಿ, ಉಷಾ, ಗೋವಿಂದ ಸೇರ್ವೆಗಾರ್‌, ಶ್ರೀನಿವಾಸ್‌ ಸೇರ್ವೆಗಾರ್‌, ಬೋಜ, ನಾರಾಯಣ ಸಾವಂತ, ಶಂಕರ ಸೇರ್ವೆಗಾರ, ರೋಹಿಣಿ, ಲೀಲಾವತಿ, ರಾಘವೇಂದ್ರ ಸೇರ್ವೆಗಾರ್‌ ಅವರ ಮನೆಗಳಿಗೆ ಹಾನಿಯಾಗಿದೆ.

ಕಾರ್ಕಳ ತಾಲೂಕಿನಲ್ಲಿ ಮುಂಜಾನೆ ಸುರಿದ ಭಾರೀ ಗಾಳಿ ಮಳೆಯಿಂದ ವಿವಿಧೆಡೆ ಹಾನಿಯಾಗಿದೆ.

ಬಿಳಿನೆಲೆ ವ್ಯಾಪ್ತಿಯಲ್ಲಿ ಅಪಾರ ಕೃಷಿ ಹಾನಿ
ಸುಬ್ರಹ್ಮಣ್ಯ: ಕಡಬ ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಭಾರೀ ಗಾಳಿ ಮಳೆಯಾಗಿದ್ದು, ಬಿಳಿನೆಲೆ ಗ್ರಾಮದಲ್ಲಿ ಅಪಾರ ಪ್ರಮಾಣದ ಕೃಷಿ, ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ.

ನೆಟ್ಟಣ ಬಳಿಯ ಮೇರೊಂಜಿಯಲ್ಲಿ ಗಾಳಿಯ ಆರ್ಭಟಕ್ಕೆ ಭಾರೀ ಗಾತ್ರದ ಮರವೊಂದು ವಿದ್ಯುತ್‌ ತಂತಿಗಳ ಮೇಲೆ ಬಿದ್ದು ಐದಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ. ಮರ ಬಿದ್ದಿರುವುದರಿಂದ ಈ ಭಾಗದ ರಸ್ತೆ ಸಂಪರ್ಕ ಕಡಿದು ಹೋಗಿದೆ. ವಿದ್ಯುತ್‌ ಸಂಪರ್ಕವೂ ಇಲ್ಲದಂತಾಗಿದೆ. ಗ್ರಾಮದ ವಾಲ್ತಾಜೆ ಎಂಬಲ್ಲಿ ಅಟೋ ರಮೇಶ ಅವರ ದನದ ಕೊಟ್ಟಿಗೆಗೆ ಪಕ್ಕದ ತೆಂಗಿನ ಮರ ಮಧ್ಯ ಭಾಗದಿಂದಲೇ ಮುರಿದು ಬಿದ್ದು ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದೆ.

ದನವೊಂದು ಹಗ್ಗ ತುಂಡರಿಸಿಕೊಂಡು ಹೊರಗೆ ಬಂದಿದ್ದರೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಭಾಗದ ತೋಟದಲ್ಲಿ ಅಡಿಕೆ, ರಬ್ಬರ್‌ ಮರಗಳು ಮುರಿದು ಬಿದ್ದಿದ್ದು, ಮೂಲಗಳ ಪ್ರಕಾರ ತಲಾ 1,000ಕ್ಕಿಂತ ಹೆಚ್ಚು ರಬ್ಬರ್‌ ಹಾಗೂ ಅಡಿಕೆ ಮರಗಳು ನಾಶವಾಗಿವೆ ಎಂದು ತಿಳಿದುಬಂದಿದೆ. ಅಲ್ಲಲ್ಲಿ ಮರಗಳು ರಸ್ತೆಗೆ ಬಿದ್ದು ಬಹುತೇಕ ರಸ್ತೆಗಳ ಸಂಪರ್ಕ ಕಡಿತವಾಗಿದೆ. ಗ್ರಾಮದ ಹಲವೆಡೆ ಕೃಷಿ, ಮನೆ, ಹಟ್ಟಿಗಳಿಗೆ ಗಾಳಿಯಿಂದ ಹಾನಿಯಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next