Advertisement

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

01:40 PM Dec 26, 2024 | Team Udayavani |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರ ಪದವು ಜಂಕ್ಷನ್‌ನಿಂದ ವಿಮಾನ ನಿಲ್ದಾಣ ರಸ್ತೆಯ ಯೆಯ್ನಾಡಿ ಬಳಿಯ ಶರ್ಬತ್‌ ಕಟ್ಟೆ ಜಂಕ್ಷನ್‌ ಸಂಪರ್ಕಿಸುವ ಒಳ ರಸ್ತೆ ವಿಸ್ತರಣೆಗೊಂಡು, ಕಾಂಕ್ರೀಟ್‌ ರಸ್ತೆಯಾಗಿ ಪರಿವರ್ತನೆಯಾಗಿ ಹಲವು ವರ್ಷಗಳ ಕಳೆದರೂ ಪಾದಚಾರಿಗಳಿಗೆ ನಡೆದಾಡಲು ಫುಟ್‌ಪಾತ್‌ ರಚನೆ ಇನ್ನೂ ಆಗಿಲ್ಲ.

Advertisement

ಇದು ಒಳರಸ್ತೆಯಾದರೂ ಬಸ್‌ ಹೊರತುಪಡಿಸಿ ಬಹುತೇಕ ಎಲ್ಲ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಕೆಪಿಟಿ ಜಂಕ್ಷನ್‌ನಲ್ಲಿ ಸಿಗ್ನಲ್‌ ಅಳವಡಿಸಿರುವುದರಿಂದ ಅಲ್ಲಿಂದ ವಿಮಾನ ನಿಲ್ದಾಣ ರಸ್ತೆಗೆ ತೆರಳಬೇಕಾದರೆ ಸಾಕಷ್ಟು ಹೊತ್ತು ಕಾಯಬೇಕಾಗುತ್ತದೆ. ಕೆಲವೊಮ್ಮ ಹಲವು ಮೀಟರ್‌ಗಳಷ್ಟು ಉದ್ದಕ್ಕೆ ವಾಹನಗಳ ಸಾಲು ಇರುತ್ತದೆ. ಆದ್ದರಿಂದ ಹೆದ್ದಾರಿಯ ಬದಲಾಗಿ ಈ ರಸ್ತೆ ಶಾರ್ಟ್‌ ಕಟ್‌ ಆಗಿರುವುದರಿಂದ ಎಲ್ಲರೂ ಇದೇ ರಸ್ತೆಯನ್ನು ಬಳಸುತ್ತಾರೆ. ಇದರಿಂದಾಗಿ ವಾಹನ ದಟ್ಟಣೆ ಹೆಚ್ಚಿರುವ ರಸ್ತೆಯಾಗಿದ್ದು, ಫುಟ್‌ಪಾತ್‌ ರಚನೆ ಅಗತ್ಯವಿದೆ.

ಐಟಿಐ ಶಿಕ್ಷಣ ಸಂಸ್ಥೆಗಳು, ಸಾಕಷ್ಟು ವಸತಿ ಸಮುಚ್ಚಯಗಳು, ಆಟದ ಮೈದಾನ, ದೇವಸ್ಥಾನ, ಕಾರ್ಮಿಕ ಇಲಾಖೆಯ ಕಚೇರಿಗಳು ಮೊದಲಾದವುಗಳು ರಸ್ತೆಯ ಇಕ್ಕೆಲದಲ್ಲಿವೆ. ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಈ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಾರೆ. ಒಂದೆರಡು ಕಡೆಗಳಲ್ಲಿ ಮಾತ್ರ ರಸ್ತೆಯ ಬದಿಯಲ್ಲಿ ನಡೆದಾಡಲು ಜಾಗವಿದೆ. ಅದನ್ನು ಹೊರತು ಪಡಿಸಿದರೆ ರಸ್ತೆ ಬದಿ ಹುಲ್ಲು ಪೊದೆಗಳಿಂದ ಆವೃತವಾಗಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.

ಘನ ವಾಹನ ನಿಷೇಧದ ಕಮಾನು ತೆರವು
ಈ ಹಿಂದೆ ರಸ್ತೆಯಲ್ಲಿ ಘನವಾಹನಗಳ ಸಂಚಾರಕ್ಕೆ ಅವಕಾಶ ಇರಲಿಲ್ಲ. ಶರ್ಬತ್‌ ಕಟ್ಟೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ಅವಕಾಶವಾಗದಂತೆ ಕಬ್ಬಿಣದ ಕಮಾನು ಇತ್ತು. ಅದರೆ ರಸ್ತೆ ಅಭಿವೃದ್ಧಿ ವೇಳೆ ಇದನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ಟಿಪ್ಪರ್‌ಗಳು, ಟ್ರಕ್‌ಗಳು ಸಹಿತ ಘನ ವಾಹನಗಳು ಎಗ್ಗಿಲ್ಲದೆ ಈ ರಸ್ತೆಯಲ್ಲಿ ಸಂಚರಿಸುತ್ತವೆ. ದ್ವಿಚಕ್ರ ವಾಹನಗಳು ಕೂಡ ಅತೀ ವೇಗದಿಂದ ಅಪಾಯಕಾರಿವಾಗಿ ಸಂಚರಿಸುವುದು ಸಾಮಾನ್ಯವಾಗಿದೆ.

ಘನ ಸಂಚಾರಕ್ಕೆ ಕಡಿವಾಣ ಹಾಕಿ
ರಸ್ತೆಯಲ್ಲಿ ಪಾದಚಾರಿಗಳು ನಡೆಯಲು ಅನುಕೂಲವಾಗುವಂತೆ ಸೂಕ್ತ ಫುಟ್‌ಪಾತ್‌ ನಿರ್ಮಿಸಬೇಕು. ಜತೆಗೆ ಘನ ವಾಹನಗಳ ಸಂಚಾರವನ್ನು ಈ ಹಿಂದೆ ಇದ್ದಂತೆ ನಿಷೇಧಿಸಬೇಕು. ರಸ್ತೆಯಲ್ಲಿ ವಾಹನಗಳ ವೇಗವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಂಪ್‌ಗ್ಳನ್ನು ಅಳವಡಿಸಬೇಕು ಎನ್ನುತ್ತಾರೆ ಸ್ಥಳೀಯರು.

Advertisement

ವಾಹನ ಸಂಚಾರ ಹೆಚ್ಚಳದಿಂದ ಅಪಘಾತ
ಶರ್ಬತ್‌ ಕಟ್ಟೆಯಿಂದ ಪದವು ಸಂಪರ್ಕಿಸುವ ರಸ್ತೆ ಒಳರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ರಸ್ತೆ ಬದಿಯಲ್ಲಿ ನಡೆಯುವುದು ತ್ರಾಸದಾಯಕವಾಗಿದೆ. ಹಲವು ಮಂದಿ ಪಾದಚಾರಿಗಳಿಗೆ ವಾಹನಗಳು ಢಿಕ್ಕಿ ಹೊಡೆದು ಅಪಘಾತಗಳೂ ಉಂಟಾಗಿವೆ. ವಿದ್ಯಾರ್ಥಿಗಳು ಹಿರಿಯ ನಾಗರಿಕರು ಸೇರಿದಂತೆ ಸಾಕಷ್ಟು ಮಂದಿ ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವುದರಿಂದ ಇಲ್ಲಿ ಸೂಕ್ತ ಫುಟ್‌ಪಾತ್‌ ನಿರ್ಮಿಸುವ ಅಗತ್ಯವಿದೆ.
– ಧಿಧೀರಜ್‌ ಕುಮಾರ್‌, ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next