ನಮ್ಮ ಸರ್ಕಾರಿ ಕಾಲೇಜಿನ ಮಕ್ಕಳು ಓದಿನಲ್ಲಿ ಕೊಂಚ ದಡ್ಡರು. ಮಾತು ವರ್ತನೆಯಲ್ಲಿ ಒಂದಿಷ್ಟು ಒರಟರು. ಬೈದರೆ ಬೈಸಿಕೊಂಡು, ಹೊಡೆದರೆ ಹೊಡೆಸಿಕೊಂಡು ಕಷ್ಟಪಟ್ಟು ಕಲಿಯುವವರು.
ಹಲಸಿನ ಹಣ್ಣಿನಂತೆ ಮೇಲೆ ಮುಳ್ಳುಗಳಾಗಿ ಕಂಡರೂ ಆಂತರ್ಯದಲ್ಲಿ ಸಿಹಿ ಮನಸ್ಸನ್ನು ಮುಚ್ಚಿಟ್ಟುಕೊಂಡವರು. ಎಷ್ಟೋ ಸಲ ಮೇಷ್ಟ್ರುಗಳು ಹೇಳುವ ಒಂದು ಸಣ್ಣ ಪ್ರೋತ್ಸಾಹದ ಮಾತೂ ಬಹಳ ದೊಡ್ಡ ಕೆಲಸ ಮಾಡಿಬಿಟ್ಟಿರುತ್ತೆ. ಬೋರ್ಡಿನ ಮೇಲೆ ನೀಟಾಗಿ ದಿನಾಂಕ, ವಿಷಯವನ್ನು ದುಂಡಗೆ ಬರೆಯುತ್ತಿದ್ದ ಮಮತಾಗೆ “ನೀನು ಒಳ್ಳೆ ಟೀಚರ್ ಆಗ್ತಿಯ’ ಎಂದು ಕ್ಲಾಸಿನಲ್ಲಿ ನಾನೊಮ್ಮೆ ಹೇಳಿದ್ದೆನಂತೆ. ಈ ಸಂಗತಿ ನನಗೆ ಮರೆತೇ ಹೋಗಿತ್ತು. ಸರ್ಕಾರಿ ಕೆಲಸ ಸಿಕ್ಕ ಮಮತಾ ನನಗೆ ಫೋನು ಮಾಡಿ ನೆನಪಿಸಿದಾಗಲೇ ಇದು ಗೊತ್ತಾಗಿದ್ದು.
ಸುನೀಲನೆಂಬ ಹುಡುಗ ಬಲು ಒರಟನಾಗಿದ್ದ. ಯಾರನ್ನಾದರೂ ಹಿಡಿದು ತದುಕದಿದ್ದರೆ ಅವನು ಮನುಷ್ಯನೇ ಅಲ್ಲ. ಅವನನ್ನು ಕಾಲೇಜಿನಿಂದ ಕಿತ್ತು ಹಾಕಬೇಕೆಂದು ಠರಾವಾಯಿತು. ನಾನೇ ಕಾಡಿ ಬೇಡಿ, ಪ್ರಿನ್ಸಿಯಿಂದ ಒಂದು ಕೊನೇ ಅವಕಾಶ ಕೊಡಿಸಿದೆ. ಮಾರನೇ ದಿನವೇ ಮತ್ತೂಬ್ಬನ ಮೂಗು ಮುರಿದು ಕೂತ. ಇದಾಗದ ಕೆಲಸವೆಂದು ಟಿ.ಸಿ. ಕೊಟ್ಟು ಓಡಿಸಿದೆವು. ಆಗ ನಾನು ಹೇಳಿದ ಕೊನೇ ಮಾತು, “ಸುನೀಲ ಇನ್ನಾದರೂ ಮನುಷ್ಯನಾಗು’. ಹಾಗೆ ಹೇಳುವಾಗ ನನಗ್ಯಾಕೋ ಅಳು ಬಂತು. ಕಣ್ಣೀರು ಒರೆಸಿಕೊಂಡು ಮುಖ ತಿರುವಿಕೊಂಡು ಬಂದೆ.
ಇದಾದ ಎಷ್ಟೋ ವರ್ಷದ ಮೇಲೆ ನನ್ನ ಬೈಕಿಗೆ ಕಾರಿನವನೊಬ್ಬ ಅಡ್ಡ ಹಾಕಿ ನಿಂತ. ಮೊದಲಿಗೆ ನನ್ನ ಪಿತ್ತ ನೆತ್ತಿಗೇರಿದರೂ ಕಾರಿನಿಂದ ಇಳಿದ ವ್ಯಕ್ತಿಯ ನೋಡಿ ತಲ್ಲಣಿಸಿ ಹೋದೆ. ಕೊರಳಲ್ಲಿ ಚಿನ್ನದ ಭಾರೀ ಸರ, ಕೈಯಲ್ಲಿ ಬ್ರಾಸ್ ಲೈಟ್, ವಿಷ್ಣುವರ್ಧನ್ ಶೈಲಿಯ ಚಿನ್ನದ ಬಳೆ. ನೋಡಲು ಥೇಟ್ ಅಂಡರ್‌ವರ್ಲ್ಡ್ ಡಾನ್. ನನ್ನ ಕೊನೆ ಸಮೀಪಿಸಿತು ಎಂದು ಖಾತ್ರಿಗೊಂಡೆ. ಹಲ್ಲುಕಿರಿದ ಸ್ಟೈಲು ನೋಡಿದ ಮೇಲೆ ತಿಳೀತು: ಇವನು ಅದೇ ಸುನೀಲ! ಪೂರ್ತಿ ಬದಲಾಗಿದ್ದಾನೆ! “ನಂಗಾಗಿ ಕಣ್ಣೀರು ಹಾಕಿದ ಮೊದಲ ಮನುಷ್ಯ ನೀವೇ ಸಾರ್. ಅವತ್ತೇ ನನ್ನ ಲೈಫನ್ನು ಬದಲಾಯಿಸಿಕೊಂಡೆ. ಮಾಷೆಯಲ್ಲ, ನಿಮ್ಮ ಫೋಟೋ ನಮ್ಮ ದೇವರ ಮನೇಲಿದೆ ನೋಡಿ’ ಎಂದು ದೊಡ್ಡ ಪರದೆಯ ಫೋನ್ ತೆಗೆದು ಚಿತ್ರ ತೋರಿಸಿದ. ಅನೇಕ ದೇವರುಗಳ ನಡುವೆ ನಾನೊಬ್ಬ ನಕಲಿ ಬಾಬಾನಂತೆ ಕಾಣುತ್ತಿದ್ದೆ. “ಲೇ, ನಿಜವಾಗಿ ಡಾನ್ ಆಗಿದ್ದೀಯೇನೋ?’ ಎಂದು ಆತಂಕದಿಂದ ಕೇಳಿದೆ.
“ಥೋ… ಇಲ್ಲಾ ಸಾರ್. ನಾನೀಗ ಫುಲ್ ಡೀಸೆಂಟು. ಹೈದ್ರಾಬಾದಲ್ಲಿ ಟ್ಯಾಕ್ಸಿ ಕಂಪನಿ ನಡೆಸ್ತಾ ಇದ್ದೀನಿ. ನನ್ನ ಕೈ ಕೆಳಗೆ ಮುನ್ನೂರು ಜನ ಕೆಲಸ ಮಾಡ್ತಾ ಇದ್ದಾರೆ ಸರ್. ಜೀವನದಲ್ಲಿ ಒಳ್ಳೇ ಹುಡ್ಗಿ ಸಿಕ್ಕಿ, ಲೈಫು ಬದಲಾಯ್ತು ಸರ್… ಎಲ್ಲಾ ನಿಮ್ಮ ಆಶೀರ್ವಾದ’ ಎಂದ. ಇವನು ಹಾಳಾಗಿ ಹೋಗ್ತಾನೆ ಅಂದುಕೊಂಡರೆ ಸುನೀಲ ಹೊಸ ಮನುಷ್ಯನಾಗಿದ್ದ. ಅಂದು ನನಗೆ, ಗುರುವಾಗಿದ್ದಕ್ಕೂ ಸಾರ್ಥಕ ಆಯ್ತು ಅಂತನ್ನಿಸಿತು!
ಕಲೀಮ್ ಉಲ್ಲಾ, ಉಪನ್ಯಾಸಕ