Advertisement
ಬಹುಶಃ ನಾನಾಗ 7ನೇ ಕ್ಲಾಸಲ್ಲಿ ಇದ್ದೆ ಅನಿಸುತ್ತೆ. ಆಗ ಜೋಗಕ್ಕೆ ಹೋದ ಮುಸುಕು ಮುಸುಕಾದ ನೆನಪು. ಧಾರವಾಡದಿಂದ ಬಂದಿದ್ದೆ. ಜೋಗದ ಪಾದದ ತನಕ ಹೋಗಿ, ಬಗ್ಗಿ ಮಲಗಿ ಕೊಂಡು ಜೋಗ್‌ನ ನೋಡಿದ್ದೆ. ಆಗೆಲ್ಲ ಅಲ್ಲಿಗೆ ಜನಾನ ಬಿಡ್ತಿರಲಿಲ್ಲ. ಹೇಗೋ ಹೋಗಿದ್ದೆ. ಆ ನೆನಪಿನ ಧುಮುಕು ಹಾಗೇ ಮನಸ್ಸಲ್ಲಿ ಪಾಚಿಗಟ್ಟಿತ್ತು.
Related Articles
Advertisement
ಅಷ್ಟೊತ್ತಿಗೆ ಅರ್ಧ ಟೀಂ. ರೆಡಿಯಾಗಿ ನಿಂತುಬಿಟ್ಟಿತ್ತು. ಬೆಳಗ್ಗೆ ಐದೂವರೆಗೆ ಬಿಟ್ವಿ. ದಾರಿ ಹೇಗೆ, ಏನೇನೂ ಗೊತ್ತಿಲ್ಲ. ಕಾಲಿಟ್ಟರೆ ಪಾಚಿ, ಅದನ್ನು ಹಾಗೇ ತಕ್ಕೊಂಡು, ಗುದ್ದಾಡ್ಕೊಂಡು ಹೋಗೋ ಹೊತ್ತಿಗೆ ಒಂದೂ ಮುಕ್ಕಾಲು ಗಂಟೆಯಾಯ್ತು. ಹೋದವರು ಕ್ಯಾಮರಾ ಪ್ಲೇಸ್‌ಮೆಂಟ್ ಮಾಡಿದ್ವಿ. ಶೂಟಿಂಗ್ ಶುರುಮಾಡೋ ಹೊತ್ತಿಗೆ 12ಗಂಟೆ. ನೆತ್ತಿಯ ಮೇಲೆ ಸೂರ್ಯ ಬರೋನು, ಹೋಗೋನು. ಈ ಜೋಗದಲ್ಲಿ ಮಳೆ, ಮೋಡ ಶುರುವಾದರೆ ಈಗಲೂ ಹಗಲು ಕತ್ತಲು ಥರ ಕಾಣುತ್ತಾ ಕತ್ಲೆಕಾನ್ ಆಗಿಬಿಡ್ತದೆ.
ಸುತ್ತಾ ಕೇಬಲ್ ಎಳೆದು ಅಲ್ಲೊಂದು ಕಡೆ ಟಿ.ವಿ ಹಾಕಿದ್ವಿ. ಈಗಲೂ ನೆನಪಿದೆ. ಜೋರು ಗಾಳಿ. ಗಣೇಶನಿಗೆ ನಿಲ್ಲೋಕೆ ತುಂಬ ರಗಳೆ ಆಗೋದು. ಏಕೆಂದರೆ ಅವನ ಕಣ್ಣಂಚಿಗೆ ಒಂದು ಸಪೋರ್ಟು ಬೇಕಿತ್ತು. ಅದಿರಲಿಲ್ಲ. ಇಲ್ಲಾಂದರೆ ನಿಲ್ಲಕ್ಕಾಗೋಲ್ಲ. ಪೂಜಾಗಾಂಧಿ ಹಿಂದೆ ಸಣ್ಣ ವಾಲ್ ಇತ್ತು. ಅದು ಕ್ಯಾಮರಾಕ್ಕೆ ಗೊತ್ತಾಗ್ತಿರಲಿಲ್ಲ. ಅದಕ್ಕೆ ಅವರು ಆರಾಮಕ್ಕೆ ನಿಂತಿದ್ದರು. ನಾವು ಆ ಕಡೆ ನಡುಗಡ್ಡೆಯಿಂದ “ಗಣಪ ನಿಲ್ಲೋ, ಆರಾಮಕ್ ಮಾಡಪ್ಪಾ, ನಾವು ಇದ್ದೀವಿ’ ಅಂತ ಕೂಗಿ ಹೇಳ್ತಾ ಇದ್ವಿ. ಇದನ್ನು ಕೇಳಿ, ಕೇಳಿ ಗಣೇಶನಿಗೆ ಸಿಟ್ಟು ಬಂದು “ಯಾವಾನಾದ್ರೂ ಇಲ್ಲಿ ಬಂದು ಒಂದ್ಸಲ ನಿಂತ್ಕಳಿ ಗೊತ್ತಾಗುತ್ತೆ’ ಅಂತ ಬೈದೇ ಬಿಟ್ಟ. ಮನುಷ್ಯನ ಕಣ್ಣು ಎಲ್ಲಿಗೆ ಹೋಗಲ್ವೋ ಅಲ್ಲಿಗೆ ಕ್ಯಾಮರಾ ಕಳುಹಿಸಿದರೆ ಆ ಗುಂಡಿ ನೋಡುಗರನ್ನು ತುಂಬಾ ಹೆದರಿಸುತ್ತೆ ಅನ್ನೋ ಮಿನಿಮಮ್ ಐಡಿಯಾ ಇತ್ತು. ಅದಕ್ಕೆ ಸರ್ಕಸ್ಸು ಮಾಡಿದ್ದೇ ಮಾಡಿದ್ದು. ನಮಗೂ ಗುಂಡಿ ಹಿಂಗೆಲ್ಲಾ ಕಾಣುತ್ತೆ ಅಂತ ಜಿಮ್ಮಿಜಿಪ್ ಎದ್ದೇಳ್ಳೋವರೆಗೂ ಗೊತ್ತಾಗಲಿಲ್ಲ. ಇಲ್ಲಾಕಿದರೆ ಚೆನ್ನಾಗಿ ಬರುತ್ತೆ, ಅಲ್ಲಾಕಿದರೆ ಇನ್ನೂ ಚೆನ್ನಾಗಿ ಕಾಣುತ್ತೆ ಅಂತೆಲ್ಲ ಸುಮಾರು 20 ಕಡೆ ಕ್ಯಾಮರ ಫಿಕ್ಸ್ ಮಾಡಿದ್ವಿ. ಇನ್ನೊಂದು ಕಡೆ ಬೇಗ ಶೂಟಿಂಗ್ ಮುಗಿಸಿಕೊಂಡು ಬರಬೇಕು ಅನ್ನೋ ಆತುರ. ಕತ್ತಲಾದರೆ ಕಾಲು ಇಡೋಕೆ ಆಗೋಲ್ಲ. ಬಂಡೆ ಸಂದಿಯಲ್ಲಿ ಏನಿರುತ್ತೋ, ಏನಾಗುತ್ತೋ ಗೊತ್ತಾಗಲ್ಲ. ಅಂಥ ಜಾಗ ಅದು. ಮಾರನೇ ದಿನ.
ಇದರ ಆಪೋಸಿಟ್‌ಗೆ ರೋರರ್ ಅನ್ನೋ ಝಲಪಾತ ಇದೆ. ಅಲ್ಲಿಗೂ ಹೋಗೋಣ ಅಂತಾಯ್ತು. ಮತ್ತೆ ಅಲ್ಲಿಗೆ ಹುಬ್ಬಿ$Û ಚಿತ್ರಾನ್ನ, ಕ್ಯಾಮರಾ, ಕೃಷ್ಣ, ಗಣೇಶ, ಪೂಜಾ ಹೀಗೆ ಸೇನೇನ ಕರ್ಕೊಂಡು ಜಮಾವಣೆ ಮಾಡಿದ್ವಿ. ಇವೆಲ್ಲ ನಮ್ಮಗಳ ಕೆರಿಯರ್‌ನಲ್ಲಿ ಮಾರ್ಕ್ ಮಾಡೋ ಕೆಲಸಗಳು ಅಂತ ಗೊತ್ತಿರಲಿಲ್ಲ. ಸುಮ್ಮನೆ ಗೆಸ್ ವರ್ಕ್, ಇನೋಸೆನ್ಸ್. ಅಲ್ಲಿ ಹೋಗಿ ತೆಗೀಬೇಕು ಅನ್ನೋ ಉತ್ಸಾಹ ಇತ್ತು ಅಷ್ಟೇ. ಅದೇನೋ ಜೋಗದ ನೆತ್ತಿ ಮೇಲೆ ಒಂಟಿತನ ತುಂಬ ಚೆನ್ನಾಗಿ ವರ್ಕ್ ಆಗುತ್ತೆ ಅನ್ನೋ ಊಹೆ. ಊಹೆ ಹಿಂದೆ ಬಿದ್ದು ಸೆರೆ ಹಿಡಿಯೋ ಹುಂಬತನ. ಎಲ್ಲಾ ಶೂಟ್ ಮುಗಿಸಿಕೊಂಡು ಬಂದು ಎಡಿಟಿಂಗ್ ರೂಮಿಗೆ ತಂದು ಹರಡಿದಾಗಲೂ ಜೋಗದ ಸೌಂಡ್ ಗೊತ್ತಾಗಲಿಲ್ಲ. ಏನೋ ಚೆನ್ನಾಗಿ ಮಾಡಿದ್ದೀವಿ ಅಂತ ತಿಳಿದಿತ್ತು. ಆದರೆ ಥೇಟರ್‌ನಲ್ಲಿ ಅಷ್ಟು ದೊಡ್ಡ ಲೆವೆಲ್‌ನಲ್ಲಿ ಈ ಜೋಗ ಎನರ್ಜಿ ಹುಟ್ಟಿಸುತ್ತೆ ಅಂತ ಗೊತ್ತಾಗಿದ್ದು ಯಾವಾಗ ಅಂದರೆ, ಚೆನ್ನೈಗೆ ಡಿಟಿಎಚ್‌ಗೆ ಅಂತ ಹೋದಾಗ. ಆ ರೀ ರೆಕಾರ್ಡಿಂಗ್‌ನಲ್ಲಿ ನೋಡಬೇಕಾದರೆ ಕಾಡಿದ್ದು- ಆ ಹುಡುಗಿ ಮಲ್ಲಿಗೆ ಹೂವಿನ ಬುಟ್ಟಿ ಹಿಡಿದುಕೊಂಡು ನಿಂತಾಗ ತುಂಬಾ ಐಸೋಲೇಷನ್ ಕಾಣಿಸಿ ಬಿಡು¤. ಪಿಚ್ ಶಾರ್ಪ್ ಸ್ಯಾಚುರೇಷನ್ ಅಂತಾರಲ್ಲ ಅದು. ತಲೆ ಮೇಲೆ ಕ್ಯಾಮರಾ ಹೋಗ್ತಿದ್ದಂತೆ ಗಣಪ ಹಾರಿ ಬಿಡ್ತಾನೇನೋ ಅಂತ ಅನಿಸೋದು. ಹಿನ್ನೆಲೆಗೆ ವೆಸ್ಟ್ರನ್ ಸ್ಟ್ರಿಂಗ್ಸ್. ಅದು ಇನ್ನೂ ಡೀಪಾಗಿ ಕಾಣೋಕೆ ಶುರುವಾಯಿತು. ಸಿನಿಮಾಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದ್ದೇ ಅದು. ಅಲ್ಲೀವರೆಗೂ ಹೀಗಾಗಬಹುದು, ಜನ ಹೀಗೆಲ್ಲಾ ಅನ್ನಬಹುದು ಅನ್ನೋ ಕನಿಷ್ಠ ಊಹೆ ಕೂಡ ಇರಲಿಲ್ಲ. ಮುಂಗಾರು ಮಳೆಯ ಗೆಲುವಿನಲ್ಲಿ ಜೋಗದ ನೀರೇ ಜಾಸ್ತಿ ಇತ್ತು. ಚಿತ್ರದಲ್ಲಿ ಜೋಗದ ಗುಂಡಿ ಬಿಟ್ಟು ಮಿಕ್ಕೆಲ್ಲಾನೂ ನೋಡಿದ್ದಾರೆ. ಆದರೆ ಮೇಯ್ನ ಕ್ಯಾರೆಕ್ಟರು ಅದು. “ಮುಂಗಾರು ಮಳೆ’ ಸಿನಿಮಾ ಬಿಡುಗಡೆಯಾದ ನಂತರ ಜೋಗಕ್ಕೆ ಸುಮಾರು ಸಲ ಗಣಪನೂ ಹೋಗಿದ್ದಾನೆ. ನಾನೂ, ಸುಮಾರು ಸಲ ಹೋಗಿದ್ದೇನೆ. ಒಟ್ಟಿಗೆ ಹೋಗುವ ಸಂದರ್ಭ ಬಂದಿರಲಿಲ್ಲ. ಮೊನ್ನೆ ಅಂಥ ಟೈಂ ಕೂಡಿ ಬಂತು. ಹೋಗೋಣ ಗಣಪ ಅಂದೆ. ಹೋಗೇ ಬಿಡೋಣ ಅಂದ. ಹೋದ್ವಿ. ಮಳೆಕಾಟ. ಬಿಟ್ಟು ಬಿಟ್ಟು ಬರ್ತಾ ಇತ್ತು. ಆಗ ನಾವು ಇಳಿದು ಕೊಂಡಿದ್ದ ಜಾಗ ಹುಡುಕಿದ್ವಿ. ಹಿಂದೆ ನಾವು ನಡೆದಿದ್ದ ದಾರಿಲ್ಲೆಲ್ಲಾ ಪೈಪುಗಳನ್ನು ಹಾಕಿಬಿಟ್ಟಿದ್ದಾರೆ. ಚಿತ್ರಾನ್ನ ತಿಂದದ್ದು, ಹೆಜ್ಜೆ ಇಡಲಿಕ್ಕೂ ಸರ್ಕಸ್ ಮಾಡಿದ್ದು, ಅಲ್ಲಿಗೆ ಬಂದದ್ದು ನಿನ್ನೆ ಸರಿದ ಘಟನೆಗಳಂತೆ ಕಂಡವು.
“ಈ ಕಡೆಯಿಂದ ಬಂದಿದ್ದು ಕಣೋ’ ಅಂದ ಅಲ್ಲೊಬ್ಬ. “ಇಲ್ವೋ ಆ ಕಡೆಯಿಂದ ಬಂದದ್ದು’ ಅಂತ ಅಂದ ಗಣಪ. ಇಬ್ಬರವಾದವೂ ಕರೆಕ್ಟಾಗಿತ್ತು. ಎರಡೂ ದಾರೀಲಿ ಎರಡೂ ಟೀಂ. ಬಂದಿತ್ತು. ಆವಾಗ ಗೈಡ್ ಕರ್ಕೊಂಡು ಹೋಗಿದ್ದ. ಸಣ್ಣ ಕಾಲುದಾರಿಯಲ್ಲಿ . ಈಗ ಆ ಕಾಲುದಾರಿಯಲ್ಲಿ ಮಣ್ಣನ್ನು ಏರಿಸಿದ್ದಾರೆ. ಕೊನೆಗೆ ಇನ್ಯಾ$°ವುದೋ ಪೈಪ್ ಹಾಕಿರೋ ಬೇಲಿಗಳನ್ನು ಹಾರಿಕೊಂಡು ಹೋದೆವು. ಹೋಗಿ ಕೂತ್ವಿ. ಇಲ್ಲಿಗೆ ನಿನ್ನೇನೋ, ಮೊನ್ನೇನೋ ಬಂದಿದ್ವೇನೋ ಅನಿಸಿತು. ಅಲ್ಲಿ ಒಂದು ಪಾಯಿಂಟ್ ಹೊಳೀತು. “ಮುಂಗಾರು ಮಳೆ’ ಚಿತ್ರದಲ್ಲಿ ದೊಡ್ಡ ರೋಲಿನ ಬಗ್ಗೆಯಾಗಲೀ, ನಾವು ಆವತ್ತು ಬಂದಿದ್ವಿ. ಮತ್ತೆ ಇವತ್ತು ಬಂದಿದ್ದೀವಿ ಅಂತಾಗಲಿ ಈ ಜೋಗಕ್ಕೆ ಏನೂ ಗೊತ್ತಿಲ್ಲ. ಎಂಥ ಕ್ಯಾರೆಕ್ಟರ್ ಅದು. ಕಡೆ ಪಕ್ಷ ಒಂದು ಹಾಯ್ ಕೂಡ ಹೇಳಲಿಲ್ಲ ಅದು. ಹಂಗೇ ಇದೆ; ಅದರಪಾಡಿಗೆ ಅದು. ಅದರಿಂದ ಕರೆಂಟ್ ತೆಗಿದಿದ್ದಾರೆ ಮನುಷ್ಯರು. ಹಾಳುಗೆಡವಿದ್ದಾರೆ, ಪ್ಲಾಸ್ಟಿಕ್ ಎಸೆದಿದ್ದಾರೆ, ಕಾಡು ಕಡಿದಿದ್ದಾರೆ. ಅದಕ್ಕೆ ಏನೂ ಗೊತ್ತಿಲ್ಲ. ಹಮ್ಮು, ಬಿಮ್ಮಿಲ್ಲದೆ ತಣ್ಣಗೆ ಇದೆ. ಇವತ್ತಿಗೂ ಗುಂಡಿಯ ಪಕ್ಕ ನಿಂತರೆ ಸಮುದ್ರದ ಫೀಲ್ ಕೊಡುತ್ತದೆ. ನಿಜ, ಯಾವುದೇ ಜಲಧಾರೆಯ ಪಕ್ಕ ಕೂತಾಗ ಮನುಷ್ಯನಿಗೆ ತಾನು ತುಂಬಾ ಸಣ್ಣೋನು ಅನಿಸಿಬಿಟ್ಟು ದೊಡ್ಡ ಅಹಂಗಳೆಲ್ಲಾ ಕಡಿಮೆಯಾಗುತ್ತದೆ. ಪ್ರಕೃತಿ ದೊಡ್ಡ ಮಟ್ಟದಲ್ಲಿ ಕಣ್ಣಿಗೆ ಬಿದ್ದಾಗಲೇ ನಾವೆಂತ ಚಿಕ್ಕೋರು ಅನ್ನೋದು ತಿಳಿಯೋದು. ಮದರ್ ನೇಚರ್ ಗುಣವೇ ಅದು. ನಮ್ಮನ್ನು ತುಂಬಾ ತಣ್ಣಗೆ, ಹಾರಾಡ ಬಾರದು ಹಾಗೆ ಮಾಡುತ್ತೆ. ಮನುಷ್ಯನಿಗೆ ಅವೆಲ್ಲ ಬೇಕು. ನಮ್ಮ ಕ್ರೋಮೋಸೋಮಲ್ಲೇ ಅವೆಲ್ಲ ಇದೆ. ಅದಕ್ಕೇ ಸ್ಕೂಲ್‌ನಲ್ಲಿ ಟ್ರಿಪ್ಪಾಕ್ಕೊಂಡು ಹುಡುಗರನ್ನೆಲ್ಲಾ ಕರ್ಕೊಂಡು ಟೂರಿಗೆ ಹೋಗೋದು. ಮನುಷ್ಯ ಏನೇ ಮಾಡಿದರೂ ಜೋಗದ ಆ್ಯಂಟಿಕ್ ಲುಕ್‌ನ ಬದಲಾಯಿಸೋಕೆ ಆಗೋಲ್ಲ. ಅಲ್ಲಿ ಯಾವುದೋ ಬೆಟ್ಟ ಇತ್ತಂತೆ. ಆಟ ಆಡೋಕೆ ಬರ್ತಿದ್ದರಂತೆ ಅಂತೆಲ್ಲ ನೆನಪಿಸಿಕೊಂಡು ಕಥೆ ಹೇಳ್ತಾರಲ್ಲ, ಆ ಥರದ ದ್ರಾಭೆ ತನ ಇಲ್ಲಿಲ್ಲ. ಏಕೆಂದರೆ ಜೋಗದ ನೀರನ್ನು ಹಾಳ್ ಮಾಡಬಹುದು; ಜೋಗ್‌ನ ಅಲ್ಲ. ಅದು ಎಷ್ಟೋ ಶತಮಾನಗಳಿಂದ ಹಂಗೇ ಇದೆ. ಮನುಷ್ಯ ಎಂಬ ಮೂಢ ಎಷ್ಟೇ ಹಾಳುಮಾಡಿದರೂ ಮದರ್ ನೇಚರ್‌ನ ಸ್ಯಾಂಟಿಟಿ ಕಳೆದುಕೊಳ್ಳಲ್ಲ. ಹಾಗೆ ನೋಡಿದರೆ, ತಾಳಗುಪ್ಪ ಸ್ವಲ್ಪ ಬದಲಾಗಿದೆ. ನಾವು ಆಗ ಬಂದಾಗ ಕಣ್ಣ ಕೊನೆವರೆಗೂ ಗದ್ದೆಗಳಿದ್ದವು. ಟೋಟಲಿ ಪಿಚ್‌ಗ್ರೀನ್. ಈಗ ಸುಮಾರು 30-40 ಎಕರೆ ಜಮೀನುಗಳಲ್ಲಿ ಮನೆಗಳು ಎದ್ದಿವೆ. ಆ ರೋಡೊಂದು ಹಾಳಾಗಿದೆ. ಜೋಗದ ಗುಂಡಿ ಮಾತ್ರ ಹಂಗೇ ಇದೆ. ಅದು ಹಂಗೇ ಇರಬೇಕು ಕೂಡ. ನನ್ನ ಗಣಪನ ಜರ್ನಿ ಶುರುವಾಗಿದ್ದೇ ಗುಂಡಿಯಿಂದ. ಇಬ್ಬರೂ ಗುಂಡಿಯಿಂದ ಎದ್ದುಬಂದವರು. ಚಿತ್ರ ಬದುಕಿನ ದೊಡ್ಡ ರೋಲ್ ಈ ಜಾಗ; ಜೋಗ. ನಾನು ಚಿಕ್ಕವಯಸ್ಸಲ್ಲಿ ಚಡ್ಡಿಮೇಲೆ ನೋಡಿದ ಜೋಗ ಇದೆಯಲ್ಲಾ ಅದೇ ಗಟ್ಟಿಯಾದ ಜೋಗ. ಆ ಥರದ ಫೀಲ್‌ನ ಈಗ ಕೊಡೋದಿಲ್ಲ. ಆಗಿನ ನೋಟದಲ್ಲಿ ಇನೋಸೆನ್ಸ್ ಇತ್ತು. ಈವಾಗ ಲೋಕೇಶನ್ ಥರ ನೋಡ್ತೀನಿ. ನನಗೊಬ್ಬನಿಗೇ ಅಲ್ಲ, ನೂರು ಜನ ಸ್ಟಿಲ್ ಫೋಟೋಗ್ರಾಫರ್‌ನ ಕೇಳಿ. ಅವರು ಆ ಕ್ಷಣದ ವಾತಾವರಣನ ಹಿಡಿಯೋದರಲ್ಲಿ ಬ್ಯುಸಿಯಾಗಿರ್ತಾರೆ ಅನ್ನೋದು ಬಿಟ್ಟರೆ ಪ್ರಕೃತಿಯ ಯಾವುದೇ ಎಲಿಮೆಂಟ್ಸ್‌ನ ಸವಿಯೋ ಪುಣ್ಯದ ಕಾರ್ಯ ಮಾಡೋಕೆ ಆಗೋದಿಲ್ಲ ಅವರಿಗೆ.
ನನಗೂ ಹಾಗೇ. ಕಟ್ಟೆ ಗುರುರಾಜ್