ಮುಂಬಯಿ: ಬಣ್ಣದ ಲೋಕದಲ್ಲಿ ಕೆಲ ವರ್ಷಗಳ ಹಿಂದೆ ʼಮೀಟೂʼ (MeToo movement) ಆರೋಪಗಳು ಸಂಚಲನ ಸೃಷ್ಟಿಸಿತ್ತು. ಇದರಿಂದ ಹಲವು ಕಲಾವಿದರು, ನಿರ್ದೇಶಕ, ನಿರ್ಮಾಪಕರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿತ್ತು.
ಬಾಲಿವುಡ್‌ನಲ್ಲಂತೂ ʼಮೀಟೂʼ ಬಿರುಗಾಳಿಯನ್ನೇ ಎಬ್ಬಿಸಿತ್ತು. ಖ್ಯಾತ ನಿರ್ದೇಶಕ ಸಾಜಿದ್ ಖಾನ್ (Sajid Khan) ಅವರ ಮೇಲೆ 2018ರಲ್ಲಿ ಹಲವು ಮಹಿಳಾ ಕಲಾವಿದರು ʼಮೀಟೂʼ ಆರೋಪವನ್ನು ಮಾಡಿದ್ದರು. ಇದು ಸಾಜಿದ್ ಖಾನ್ ಅವರ ವ್ಯಕ್ತಿತ್ವ ಹಾಗೂ ಕೆರಿಯರ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು.
ʼಹೌಸ್ ಫುಲ್ -4ʼ ಚಿತ್ರದ ನಿರ್ದೇಶನದಿಂದ ಅವರು ಕೆಳಗಿಳಿಯುವ ಪರಿಸ್ಥಿತಿ ʼಮೀಟೂʼ ಆರೋಪದಿಂದ ಎದುರಾಯಿತು. ಜನಪ್ರಿಯರಾಗಿದ್ದ ಸಾಜಿದ್ ಅವರ ಮೇಲೆ ʼಮೀಟೂʼ ಬಹುದೊಡ್ಡದಾಗಿಯೇ ಪರಿಣಾಮ ಬೀರಿತ್ತು.
ವೃತ್ತಿಗೆ ಹಾಗೂ ವೈಯಕ್ತಿಕವಾಗಿಯೂ ಸಾಜಿದ್‌ಗೆ ʼಮೀಟೂʼ ನುಂಗಲಾರದ ತುತ್ತಾಗಿ ಪರಿಣಮಿಸಿತು. ಈ ಬಗ್ಗೆ ತನಿಖೆ ನಡೆಸಿ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘದ ಸಾಜಿದ್ ಅವರನ್ನು ಅಮಾನತು ಮಾಡಲಾಗಿತ್ತು. ಇದಾದ ನಂತರ 2019 ರಲ್ಲಿ ಮತ್ತೆ ಬಣ್ಣದ ಲೋಕಕ್ಕೆ ಸೇರಿಸಲಾಗಿತ್ತು. ಆದರೆ ಇದರ ಹೊರತಾಗಿಯೂ ಸಾಜಿದ್‌ಗೆ ಮೊದಲಿದ್ದ ಜನಪ್ರಿಯತೆ ಮತ್ತೆಂದೂ ಸಿಗಲಿಲ್ಲ.
ಇದನ್ನೂ ಓದಿ: Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್ ಲೀಕ್
ಇದೀಗ ಇದೇ ಮೊದಲ ಬಾರಿಗೆ ಸಾಜಿದ್ ʼಮೀಟೂʼ ಅವರ ಕೆರಿಯರ್ ಹಾಗೂ ವೈಯಕ್ತಿಕ ಬದುಕಿನ ಮೇಲೆ ಬೀರಿದ ಪರಿಣಾಮಗಳ ಬಗ್ಗೆ ʼಹಿಂದೂಸ್ತಾನ್ ಟೈಮ್ಸ್ʼ ಜತೆ ಮಾತನಾಡಿದ್ದಾರೆ.
#MeToo ಆರೋಪದ ನಂತರ ಕಳೆದ ಆರು ವರ್ಷಗಳಿಂದ ನಿಮ್ಮ ಜೀವನ ಹೇಗಿದೆ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ಕಳೆದ ಆರು ವರ್ಷಗಳಲ್ಲಿ ನನ್ನ ಜೀವನವನ್ನು ಹಲವು ಬಾರಿ ಕೊನೆಗೊಳಿಸಲು ನಾನು ಯೋಚಿಸಿದ್ದೆ. ಈ ಅವಧಿಯು ಅತ್ಯಂತ ಕೆಟ್ಟದಾಗಿತ್ತು” ಎಂದು ಅವರು ಉತ್ತರಿಸಿದ್ದಾರೆ.
ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘ (IFTDA) ಅನುಮತಿ ನೀಡಿದ್ದರೂ ನಾನು ಈಗಲೂ ನನ್ನ ಕಾಲಿನ ಮೇಲೆ ನಿಲ್ಲಲು ಪ್ರಯತ್ನಿಸುತ್ತಿದ್ದೇನೆ. ಯಾವುದೇ ಆದಾಯವಿಲ್ಲದ ಕಾರಣ ನಾನು ನನ್ನ ಮನೆಯನ್ನು ಮಾರಿ ಬಾಡಿಗೆ ಫ್ಲಾಟ್‌ಗೆ ಹೋಗಬೇಕಾಯಿತು. ನನ್ನ ತಂದೆ (ನಟ, ನಿರ್ಮಾಪಕ ಮತ್ತು ನಿರ್ದೇಶಕ, ಕಮ್ರಾನ್ ಖಾನ್) ನಿಧನರಾದ ಬಳಿಕ ನಾನು ದುಡಿಯಲು ಶುರು ಮಾಡಿದೆ. ಆಗ ನನಗೆ 14 ವರ್ಷ ಆಗಿತ್ತು. ಆಗ ನಾನು ಮತ್ತು ನನ್ನ ಸಹೋದರಿ ಫರಾಹ್ ಖಾನ್ ಸಾಲದ ಸುಳಿಯಲ್ಲಿ ಇದ್ದೆವು. ಇಂದು ನನ್ನ ತಾಯಿ ಬದುಕಿದ್ದರೆ (ಮೇನಕಾ ಇರಾನಿ 2024 ರಲ್ಲಿ ನಿಧನರಾದರು) ನಾನು ಕಂಬ್ಯಾಕ್ ಮಾಡಲು ಪಡುತ್ತಿರುವ ಪ್ರಯತ್ನವನ್ನು ನೋಡುತ್ತಿದ್ದರು. ನಾನು ಮಗನಿಗಿಂತ ಹೆಚ್ಚಾಗಿ ಅವಳಿಗೆ ಕೇರ್ ಟೇಕರ್ ಆಗಿದ್ದೆ. ಜೀವನವು ಸಾಕಷ್ಟು ಕಠಿಣವಾಗಿದೆ ಎಂದಿದ್ದಾರೆ.
ನಾನು ಎಂದಿಗೂ ಮಹಿಳೆಯರನ್ನು ಅಗೌರವದಿಂದ ಕಂಡಿಲ್ಲ. ಆ ರೀತಿ ನಾನು ಎಂದಿಗೂ ಮಾಡುವುದಿಲ್ಲ. ನನ್ನ ತಾಯಿ ನನ್ನನ್ನು ಲಿಂಗ ಸಮಾನತೆಯನ್ನು ನಂಬುವಂತೆ ಬೆಳೆಸಿದ್ದಾರೆ. ನನ್ನ ಮಾತುಗಳು ನನಗೆ ಇಷ್ಟು ದೊಡ್ಡ ಬೆಲೆಯನ್ನು ನೀಡುತ್ತವೆ ಎಂದು ನನಗೆ ತಿಳಿದಿರಲಿಲ್ಲ ಎಂದು ಸಾಜಿದ್ ಹೇಳಿದ್ದಾರೆ.
ಈ ಬಗ್ಗೆ ಇಷ್ಟು ಸಮಯ ಯಾಕೆ ಸೈಲೆಂಟ್ ಆಗಿದ್ದೀರಿ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಮಾತನಾಡಲು ಇಷ್ಟವಿರಲಿಲ್ಲ. ‘ಮೌನವೇ ಬಂಗಾರʼ ಎಂದು ನನ್ನ ತಾಯಿ ನನಗೆ ಹೇಳಿಕೊಟ್ಟಿದ್ದರು ಎಂದು ಸಾಜಿದ್ ಹೇಳಿದ್ದಾರೆ.
2022ರಲ್ಲಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಾಜಿದ್ ಭಾಗಿಯಾಗಿದ್ದರು. ಸಾಜಿದ್ ʼಹೇ ಬೇಬಿʼ, ʼಡರ್ನಾ ಜರೂರಿ ಹೈʼ , ʼಹಿಮ್ಮತ್ವಾಲಾʼ ಮುಂತಾದ ಸಿನಿಮಾಗಳನ್ನು ಮಾಡಿದ್ದಾರೆ.