ಪಣಜಿ: ಉತ್ತರ ಗೋವಾದ ಮಾರ್ಸೆಲ್ ಎಂಬ ಪುಟ್ಟ ಗ್ರಾಮದಲ್ಲಿ ಶುಕ್ರವಾರ (ಜೂ.30) ಭಗವಾನ್ ಶ್ರೀಕೃಷ್ಣನ ಬಾಲ್ಯವನ್ನು ನೆನಪಿಸುವ ಸಾಂಪ್ರದಾಯಿಕ “ಚಿಖಲ್ ಕಾಲೋ” (ಮಣ್ಣಿನ ಹಬ್ಬ)ವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಪ್ರವಾಸಿಗರು ಶತಮಾನಗಳಷ್ಟು ಹಳೆಯ ಮಣ್ಣಿನ ಹಬ್ಬಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ:ಹಾವು ಕಡಿತದಿಂದ ಚಿಕಿತ್ಸೆ ಪಡೆದು ಮನೆಗೆ ಬಂದ ಮರುದಿನ ಮತ್ತೆ ಕಚ್ಚಿದ ಹಾವು: ವ್ಯಕ್ತಿ ಸಾವು
ಗೋವಾ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟ ಈ ಮಣ್ಣಿನ ಹಬ್ಬ ವೀಕ್ಷಿಸಲು ನೂರಾರು ಮಂದಿ ಸ್ಥಳೀಯರಯ ಹಾಗೂ ಪ್ರವಾಸಿಗರು ನೆರೆದಿದ್ದರು.
ಏನಿದು ಚಿಖಲ್ ಕಾಲೋ:
ಉತ್ತರ ಗೋವಾದ ಮರ್ಸೆಲ್ ಎಂಬ ಪುಟ್ಟ ಗ್ರಾಮದಲ್ಲಿರುವ ದೇವಕಿ ಕೃಷ್ಣ ದೇವಾಲಯದಲ್ಲಿ ಮಣ್ಣಿನ ಹಬ್ಬ ಆಚರಿಸಲಾಗಿದ್ದು, ಈ ಸಂದರ್ಭದಲ್ಲಿ ಯುವಕರು, ಮಕ್ಕಳು ಒಬ್ಬರಿಗೊಬ್ಬರು ಮಣ್ಣನ್ನು ಎರಚಿಕೊಂಡು ಸಂಭ್ರಮಿಸುತ್ತಾರೆ. ಶ್ರೀಕೃಷ್ಣನು ಬಾಲ್ಯದಲ್ಲಿ ಆಡುತ್ತಿದ್ದ ಆಟವನ್ನು ಇಲ್ಲಿ ಆಡಲಾಗುತ್ತದೆ.
ಸುಮಾರು ನಾಲ್ಕು ಶತಮಾನಗಳಿಂದ ಈ ಮಣ್ಣಿನ ಹಬ್ಬವನ್ನು ಆಚರಿಸಲಾಗುತ್ತಿದೆ. ಆದರೆ ಈ ಹಬ್ಬ ನಿಖರವಾಗಿ ಯಾವಾಗ ಆರಂಭವಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲ. ಈ ದೇವಸ್ಥಾನ ಸ್ಥಾಪನೆಯಾದ ಸಂದರ್ಭದಿಂದ ಮಣ್ಣಿನ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮದ ಹಿರಿಯರೊಬ್ಬರು ಪಿಟಿಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ್ ಕೌಂಟೆ, ಕಲೆ ಮತ್ತು ಸಂಸ್ಕೃತಿ ಸಚಿವ ಗೋವಿಂದ ಗಾವಡೆ ಅವರು ಮಣ್ಣಿನ ಹಬ್ಬದಲ್ಲಿ ಪಾಲ್ಗೊಂಡಿದ್ದರು.
ಮಣ್ಣಿನ ಹಬ್ಬವನ್ನು ನಾವು ರಾಜ್ಯದ ಒಂದು ಪ್ರಮುಖ ಭಾಗ ಎಂಬುದಾಗಿ ಗುರುತಿಸಿದ್ದೇವೆ. ಜೊತೆಗೆ ಗೋವಾ ಎಂದರೆ ಕೇವಲ ಸೂರ್ಯ, ಸಮುದ್ರ, ಮರಳು ಎಂಬ ಭಾವನೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಗೋವಾ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುತ್ತಿದ್ದೇವೆ ಎಂದು ಕೌಂಟೆ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.