ನಾನು, ನನ್ನದು ಎಂಬ ಅಭಿಮಾನವನ್ನು ಬಿಡುವುದು ಕೈ ಬಿಟ್ಟು ಸೈಕಲ್ ಬಿಟ್ಟಂತೆ. ಇದು ಪ್ರಾಕ್ಟಿಸ್‌ನಿಂದಲೇ ಸಾಧ್ಯ. ಪ್ರಾಕ್ಟಿಸ್ ಮಾಡು ಎಂದ ಶ್ರೀಕೃಷ್ಣ. ಮೊದಲು ಸೈಕಲ್ ಬಿಡುವುದಕ್ಕೆ ಆಗುವುದೇ ಇಲ್ಲ ಎಂದವನಿಗೆ ಪ್ರಾಕ್ಟಿಸ್ ಮಾಡಿದರೆ ಕೈ ಮಾತ್ರವಲ್ಲ ಕಾಲು ಬಿಟ್ಟೂ ಆಗುತ್ತದೆ. ಸರ್ಕಸ್‌ನವರನ್ನು ನೋಡುವುದಿಲ್ಲವೆ? ಇದು ಸತತ ಅಭ್ಯಾಸದಿಂದಲೇ ಸಾಧ್ಯವಾದದ್ದು. ಮುಂದೆ “ಸ್ಥಿತಪ್ರಜ್ಞ’ನ ಬಗೆಗೆ ಕೃಷ್ಣ ಹೇಳುತ್ತಾನೆ. ಇವೆಲ್ಲ ಬದಲಾವಣೆಗಳು ಒಳಗೆ ಆಗಬೇಕು. ಮನುಷ್ಯನ ಬುದ್ಧಿ ಕಂಡದ್ದು, ಅನುಭವಿಸಿದ್ದನ್ನು ನನ್ನದು ಎಂದು ಹೇಳುವುದು. ಇದೇ ಕಾರಣಕ್ಕಾಗಿ ಸನ್ಯಾಸಿಗಳು ಚಾತುರ್ಮಾಸ್ಯ, ಪರ್ಯಾಯದ ಅವಧಿ ಬಿಟ್ಟು ಒಂದು ವಾರಕ್ಕೆ ಹೆಚ್ಚು ಒಂದು ಕಡೆ ಇರಬಾರದು ಎಂಬ ನಿಯಮ ಮಾಡಿದ್ದು. ಹೆಚ್ಚು ದಿನವಿದ್ದರೆ “ನನ್ನದು’ ಎಂಬ ಭಾವನೆ ಬರುತ್ತದೆ. ಸನ್ಯಾಸಿಗಳು ಮದುವೆಗೆ ಹೋಗಬಾರದು. ಸನ್ಯಾಸಿಗಳಿಗೆ ಶೃಂಗಾರದ ಕಥೆ ಹೇಳಬಾರದು ಏಕೆ? ಈ ನಿಯಮಗಳು ಏಕೆಂದರೆ ಮಾನಸಿಕವಾಗಿ ಸಿದ್ಧವಾಗಬೇಕು ಎಂಬ ಕಾರಣಕ್ಕಾಗಿ. ತುಂಬ ಖರ್ಚು ಮಾಡಿ ಮದುವೆಯಂತಹ ಕಾರ್ಯಕ್ರಮ ಮಾಡುವುದೂ ಅಭಿಮಾನವನ್ನು ಹೆಚ್ಚಿಸಲು ಇರುವ ಇಂಬುಗಳು. ಇಷ್ಟೆಲ್ಲ ಖರ್ಚು ಮಾಡಿಯೂ ವಿಚ್ಛೇದನ ಆಗುತ್ತದೆ. ಆಗ ಸಂಬಂಧಿಸಿದವರಿಗೆ ಇನ್ನಷ್ಟು ದುಃಖವಾಗುತ್ತದೆ. ಈ ದುಃಖಕ್ಕೆ ಕಾರಣ ಹೆಚ್ಚಿಸಿರುವ ಅಭಿಮಾನ. ಆದ್ದರಿಂದ ಅಭಿಮಾನ ಹೆಚ್ಚಿಸುವ ಕ್ರಿಯೆಗೆ ಸಹಕಾರ ಕೊಡಬಾರದು.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811