Advertisement

Malpe Beach: ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳ ಮೇಲೆ ನಿಗಾ ಅಗತ್ಯ

03:53 PM Dec 30, 2024 | Team Udayavani |

ಮಲ್ಪೆ: ಡಿಸೆಂಬರ್‌ ತಿಂಗಳಿನಿಂದ ಮಲ್ಪೆ ಬೀಚ್‌ಗೆ ಪ್ರವಾಸಿಗರು ಸೇರಿದಂತೆ ಶಾಲಾ ಮಕ್ಕಳ ಪ್ರವಾಸದ ದಂಡು ಹರಿದು ಬರುತ್ತಿದೆ. ಬರುವಂತ ಪ್ರವಾಸಿಗರು, ಶಾಲಾ ಮಕ್ಕಳು ಸಮುದ್ರ ತೀರಕ್ಕೆ ಬಂದು ನೀರಿಗೆ ಇಳಿದು ನೀರಿನಲ್ಲಿ ಆಟ ಆಡುವುದು, ಸ್ನಾನ ಮಾಡುವುದು ಸಾಮಾನ್ಯ. ಹೀಗೆ ಬಂದ ಮಕ್ಕಳನ್ನು ನೀರಿಗೆ ಇಳಿಯದಂತೆ ತಡೆಯುವುದೇ ಒಂದು ಸಾಹಸವಾಗಿದೆ. ಹಾಗಾಗಿ
ಶಾಲಾ ಮಕ್ಕಳ ಮೇಲೆ ಶಿಕ್ಷಕರು ನಿಗಾ ವಹಿಸುವ ಜತೆಗೆ ಜಿಲ್ಲಾಡಳಿತ ಮತ್ತಷ್ಟು ಎಚ್ಚರ ವಹಿಸಬೇಕಾಗಿದೆ.

Advertisement

ಡಿಸೆಂಬರ್‌, ಜನವರಿ ಬಂತೆಂದರೆ ಎಲ್ಲ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ ಆರಂಭವಾಗುತ್ತದೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವಾಸಕ್ಕೆ ಕರಾವಳಿ ಕಡೆ ಬರುತ್ತಿದ್ದಾರೆ. ಸಮುದ್ರದ ಅಲೆಗಳನ್ನು ಕಂಡ ಕೂಡಲೇ ಮಕ್ಕಳು ನೀರಿಗಿಳಿದು ಮೈಮರೆಯುತ್ತಾರೆ. ಆದರೆ ಸೌಂದರ್ಯ ತುಂಬಿದ ಸಮುದ್ರದಲ್ಲಿ ಅಪಾಯವೂ ಇರುವುದರ ಬಗ್ಗೆ ಪ್ರವಾಸಿಗರಿಗೆ ಅರಿವು ಇರುವುದಿಲ್ಲ. ಶಾಂತವಾಗಿ ಕಾಣುವ ಸಮುದ್ರದಲ್ಲಿ ದೂರ ದೂರವರೆಗೆ ಈಜುವ ಪ್ರಯತ್ನ ಮಾಡಿ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ.

ಜೀವರಕ್ಷರ ಮಾತು ಕೇಳುತ್ತಿಲ್ಲ ವಾತಾವರಣದ ಏರುಪೇರಿನಿಂದ ಸಮುದ್ರದ ನೀರಿನಲ್ಲಿ ಉಂಟಾಗುವ ಒತ್ತಡದಿಂದ ಅಲೆಗಳಲ್ಲಿ
ವ್ಯಾತ್ಯಾಸ ಕಂಡು ಬರುವುದು ಸಾಮಾನ್ಯ, ಇಂತಹ ಸಮಯದಲ್ಲಿ ಪ್ರವಾಸಿಗರು ದೂರದಲ್ಲಿ ನಿಂತು ಸಮುದ್ರ ನೋಡಿ, ತೀರ ಪ್ರದೇಶದಲ್ಲಿ ಮಾತ್ರ ಆಟವಾಡಿ ಎನ್ನುವ ನಿರ್ವಾಹಕರ ಮಾತಿಗೆ ಒಂದೂ ಚೂರು ಬೆಲೆ ಕೊಡುವುದಿಲ್ಲ. ನಿಗದಿತ ಸ್ಥಳದಲ್ಲಿ ಈಜಾಡಲು ಸೂಚನೆ ನೀಡಿದರೂ ಪಾಲಿಸುತ್ತಿಲ್ಲ. ಜಾಸ್ತಿ ಎಚ್ಚರಿಕೆ ನೀಡಿದರೆ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ ಎನ್ನುತ್ತಾರೆ ಜೀವರಕ್ಷಕರು.

ಪಾಲಕರು, ಶಿಕ್ಷಕರು ನಿಗಾವಹಿಸಿ:
ಪ್ರವಾಸೋದ್ಯಮ ಇಲಾಖೆ ಸೂಚನೆ ಸಮುದ್ರದ ಅಲೆಗಳು ತುಂಬಾ ಅಪಾಯಕಾರಿಯಾಗಿರುವುದರಿಂದ ಪಾಲಕರು ತಮ್ಮ ಮಕ್ಕಳು ನೀರಿಗೆ ಇಳಿಯದಂತೆ ನೋಡಿಕೊಳ್ಳಬೇಕು, ಶೈಕ್ಷಣಿಕ ಪ್ರವಾಸಕ್ಕೆ ಬರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ
ಆಗಮಿಸುವ ಶಿಕ್ಷಕರು ತಮ್ಮ ಶಾಲಾಮಕ್ಕಳಿಗೆ ಸೂಕ್ತ ತಿಳುವಳಿಕೆಯನ್ನು ನೀಡಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿ, ನೀರಿಗೆ ಇಳಿಯದಂತೆ ನೋಡಿಕೊಳ್ಳಬೇಕು. ಪ್ರವಾಸದ ಸಂದರ್ಭದಲ್ಲಿ ಮಕ್ಕಳನ್ನು ಯಾವುದೇ ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು.

Advertisement

ಎಲ್ಲ ಸ್ಥಳಗಳಲ್ಲಿ ಪ್ರವಾಸಿ ಉಸ್ತುವಾರಿ ವಹಿಸಿದ ಸಿಬಂದಿಗಳು ವಿದ್ಯಾರ್ಥಿಗಳ ಜತೆ ಇದ್ದು, ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು
ಎಲ್ಲ ಅವಶ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ಅವಘಡಕ್ಕೆ ಶಾಲಾ ಮುಖ್ಯಸ್ಥರು ಮತ್ತು ಪ್ರವಾಸದ ಉಸ್ತುವಾರಿ ವಹಿಸಿದ ಸಿಬಂದಿ ಯವರೇ ಜವಾಬ್ದಾರರಾಗಿರುತ್ತಾರೆ ಎಂದು ಪ್ರವಾಸೋದ್ಯಮ ಇಲಾಖೆ ಸೂಚನೆ ನೀಡಿದೆ.

ಹೆಚ್ಚುವರಿ ಭದ್ರತಾ ಸಿಬಂದಿ
ಕರಾವಳಿಯ ಎಲ್ಲ ಬೀಚ್‌ಗಳಲ್ಲಿ ಹೆಚ್ಚುವರಿ ಭದ್ರತಾ ಸಿಬಂದಿಗಳನ್ನು ನೇಮಿಸಲಾಗಿದೆ. ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಿದ ಮಲ್ಪೆ ಬೀಚ್‌, ಕಾಪು ಲೈಟ್‌ ಹೌಸ್‌, ಪಡುಬಿದ್ರೆ ಮುಖ್ಯ ಬೀಚ್‌, ಪಡುಬಿದ್ರಿ ಬ್ಲೂ ಫ್ಲಾಗ್‌ ಬೀಚ್‌ಗಳಲ್ಲಿ ಬಾತಿಂಗ್‌ ಝೋನ್‌ ವ್ಯಾಪ್ತಿಯಲ್ಲಿ ನಿಯೋಜಿಸಿದ ಪೊಲೀಸ್‌, ಲೈಫ್‌ಗಾರ್ಡ್‌, ಪ್ರವಾಸಿಮಿತ್ರ ಹಾಗೂ ಭದ್ರತಾ ಸಿಬಂದಿಗಳು ನೀಡುವ ಎಚ್ಚರಿಕೆಯ ಸೂಚನೆಯನ್ನು ಪಾಲಿಸುವುದರ ಮೂಲಕ ಪ್ರವಾಸಿ ತಾಣಗಳನ್ನು ದೂರದಿಂದಲೇ ವೀಕ್ಷಿಸಿ ಸಂಭ್ರಮಿಸಿ ಅಲ್ಲಿಂದ ಸುರಕ್ಷಿತವಾಗಿ ತೆರಳಬೇಕಾಗಿದೆ.
*ಕುಮಾರ್‌ ಸಿ. ಸಹಾಯಕ ನಿರ್ದೇಶಕರು,
ಪ್ರವಾಸ್ಯೋದ್ಯಮ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next