Advertisement

ನೈಪುಣ್ಯತೆ ಇಲ್ಲದವರಿಗೆ ಆಡಳಿತ ವಿಭಾಗದ ಹೊಣೆ ನೀಡಿ

10:21 PM Sep 06, 2019 | Lakshmi GovindaRaju |

ಮೈಸೂರು: ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಮಾರ್ಗದರ್ಶನ ಮಾಡಲು ಆಸಕ್ತಿ ಇಲ್ಲದ ಪ್ರಾಧ್ಯಾಪಕರನ್ನು ಆಡಳಿತ ವಿಭಾಗದ ಜವಾಬ್ದಾರಿಯನ್ನು ನೀಡುವುದು ಒಳಿತು ಎಂದು ವಿಶ್ರಾಂತ ಕುಲಪತಿ ಪ್ರೊ.ಎಸ್‌.ಎನ್‌.ಹೆಗ್ಡೆ ಸಲಹೆ ನೀಡಿದರು. ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಕ್ರಾಫ‌ರ್ಡ್‌ ಹಾಲ್‌ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ವಿದ್ಯೆ ಮತ್ತು ಕಲಿಸುವ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

Advertisement

ಶಿಕ್ಷಕ ಮತ್ತು ಶಿಕ್ಷಕೇತರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಜವಾಬ್ದಾರಿ ಕುಲಪತಿಗಳಿಗಿದ್ದು, ಅದನ್ನು ನೀವು ಮಾಡಬೇಕು. ಸುಮ್ಮನೆ ಸರ್ಕಾರ ಮತ್ತು ಸಿಂಡಿಕೇಟ್‌ಗೆ ಬರೆದಿದ್ದೇನೆ ಎಂದು ಹೇಳದೇ, ಅವುಗಳ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಿ ಎಂದು ಕುಲಪತಿಗೆ ಸಲಹೆ ನೀಡಿದರು.

ಶಿಕ್ಷಕ ಎಂಬ ಹುದ್ದೆ ಜವಾಬ್ದಾರಿಯುತ ಶ್ರೇಷ್ಠ ಹುದ್ದೆಯಾಗಿದ್ದು, ವಿಜ್ಞಾನ -ತಂತ್ರಜ್ಞಾನ, ಸಾಹಿತ್ಯ, ಅಧಿಕಾರಿಗಳು, ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರನ್ನು ತಯಾರು ಮಾಡುವುದೇ ಶಿಕ್ಷಕರು. ಇಂತಹ ಸ್ಥಾನದ ಗೌರವ, ಹೊಣೆ ಅರಿತು ನಾವು ಕೆಲಸ ಮಾಡಬೇಕು. ಹಾಗೆಯೇ ಯಾವ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ ಮಾಡುವ ನೈಪುಣ್ಯತೆ, ಆ ಮಟ್ಟದ ಜ್ಞಾನ ಹೊಂದಿರುವುದಿಲ್ಲವೋ ಅವರನ್ನು ಎನ್ನೆಸ್ಸೆಸ್‌, ಎನ್‌ಸಿಸಿ, ಹಾಸ್ಟೆಲ್‌ ವಾರ್ಡನ್‌ ಇತರೆ ಆಡಳಿತ ವಿಭಾಗದ ಕೆಲಸಕ್ಕೆ ನೇಮಿಸುವಂತೆ ಹೇಳಿದರು.

ಪ್ರಾಧ್ಯಾಪಕರು ತಮಗಿರುವ ಜ್ಞಾನವನ್ನು ಸಂಪೂರ್ಣವಾಗಿ ವಿದ್ಯಾರ್ಥಿಗಳಿಗೆ ಧಾರೆಯೆರೆಯುವ ಮನಸ್ಸು ಹೊಂದಿರಬೇಕು. ಎಲ್ಲಿ ನಾನು ಎಲ್ಲವನ್ನು ಹೇಳಿಕೊಟ್ಟರೇ ತನಗಿಂತ ಹೆಚ್ಚು ಜ್ಞಾನಿಯಾಗಿ ಬಿಡುತ್ತಾನೋ ಎಂಬ ಅಳಕು ಕೆಲವು ಪ್ರಾಧ್ಯಾಪಕರ ಮನಸಿನಲ್ಲಿ ಇರುತ್ತದೆ. ಈ ರೀತಿಯ ಮನಸು ಶಿಕ್ಷಕರಾದವರಿಗೆ ಇರಬಾರದು ಎಂದು ತಿಳಿಸಿದರು.

ಸ್ನಾತಕೋತ್ತರ ವಿದ್ಯಾಭ್ಯಾಸದ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯದಲ್ಲಿರುವುದನ್ನು ಬೋಧಿಸುತ್ತಾ, ಅವರನ್ನು ಅಷ್ಟಕ್ಕೆ ಸೀಮಿತಗೊಳಿಸಬೇಡಿ. ಅವರಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂಬುದನ್ನು ಗುರುತಿಸಿ ಅದರ ಬಗ್ಗೆ ತಮಗೆ ತಿಳಿದಿರುವ ಮಾಹಿತಿ ನೀಡಿ, ಪೂರಕವಾಗಿ ಅಧ್ಯಯನ ಕೈಗೊಳ್ಳಲು ನಮ್ಮದೇ ದೇಶದಲ್ಲಿ ಇರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪರಿಚಯ ಮಾಡಿಕೊಡಿ ಎಂದು ಸಲಹೆ ನೀಡಿದರು.

Advertisement

ಪ್ರಸ್ತುತ ವೃತ್ತಿಪರ ಕೋರ್ಸ್‌ಗಳಿಗೆ ಆದ್ಯತೆ ನೀಡುತ್ತಾ ಜ್ಞಾನಾಧಾರಿತ ಶಿಕ್ಷಣವನ್ನು ಮರೆಯುತ್ತಿದ್ದೇವೆ. ಇಂಗ್ಲಿಷ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾ, ಕಲಿಯುತ್ತಾ ಕನ್ನಡಕ್ಕೆ ಮಹತ್ವ ನೀಡುವುದನ್ನೆ ಕಡಿಮೆ ಮಾಡುತ್ತಿದ್ದೇವೆ. ಇಂಗ್ಲಿಷ್‌ನಲ್ಲಿ ಬೋಧಿಸುವಾಗ ಒಂದು ಪದಕ್ಕೆ ಅರ್ಥ ತಿಳಿಯಲಿಲ್ಲ ಎಂದರೇ ಆಗ ಕನ್ನಡದಲ್ಲಿ ಅರ್ಥ ಹುಡುಕಾಡುತ್ತೇವೆ. ಭಾಷೆಗಳನ್ನು ಕಲಿಯಲು ಧೋರಣೆಗಳು ಇರಬಾರದು. ಆದರೆ, ನಮ್ಮ ಭಾಷೆಯನ್ನು ಕಡೆಗಣಿಸಬಾರದು ಎಂದರು.

ವಿಶ್ವವಿದ್ಯಾಲಯ ಎಂಬುದು ಪ್ರಾದೇಶಿಕ ಕೇಂದ್ರವಲ್ಲ. ಅದೊಂದು ದೊಡ್ಡ ಸಂಸ್ಥೆ, ಸಮಾಜದಲ್ಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅದರ ಪಾತ್ರ ಏನು ಎಂಬುದನ್ನು ಸರ್ಕಾರಕ್ಕೆ ಸರಿಯಾಗಿ ಅರ್ಥ ಮಾಡಿಸಬೇಕಿದೆ. ವಿವಿಯ ಕೆಲಸಗಳಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಪ್ರಭಾವ ಹೇರುವುದು ಮತ್ತು ಹಸ್ತಕ್ಷೇಪ ಮಾಡಬಾರದು ಎಂದು ಅಭಿಪ್ರಾಯಪಟ್ಟರು.

ನಮ್ಮ ದೇಶದಲ್ಲಿಯೇ ಇರುವ ಐಐಟಿ ಅಂತಹ ಸಂಸ್ಥೆಗಳು ಸಂಶೋಧನೆ ಮಾಡುವ ನೈಪುಣ್ಯತೆ ಹೊಂದಿದ್ದು, ಬ್ಯಾಹ್ಯಾಕಾಶ ಮತ್ತು ಪರಮಾಣು ಶಕ್ತಿಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಪ್ರಯೋಗಗಳನ್ನು ಹಮ್ಮಿಕೊಳ್ಳಲು ಸ್ವತಂತ್ರ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಕೆಲಸವನ್ನು ಸರ್ಕಾರಗಳ ಮಾಡಬೇಕು ಎಂದರು. ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌, ಕುಲಸಚಿವ ಪ್ರೊ.ಲಿಂಗರಾಜ್‌ ಗಾಂಧಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next