Advertisement

Belagavi Session: 9 ದಿನಗಳ ಬೆಳಗಾವಿ ಅಧಿವೇಶನ; 13.21 ಕೋಟಿ ರೂ. ವೆಚ್ಚ!

01:55 AM Dec 03, 2024 | Team Udayavani |

ಬೆಳಗಾವಿ: ಕಳೆದ 19 ವರ್ಷಗಳಲ್ಲಿ 12 ಅಧಿವೇಶನಗಳಿಗೆ ಸಾಕ್ಷಿಯಾಗಿರುವ ಗಡಿ ಭಾಗದ ಜನರು ಅಧಿವೇಶನದ ಜತೆಗೆ ಅದರ ಖರ್ಚುವೆಚ್ಚದ ಮೊತ್ತದಲ್ಲೂ ಗಣನೀಯ ಹೆಚ್ಚಳ ಕಂಡಿದ್ದಾರೆ. ಇದುವರೆಗೆ ನಡೆದಿರುವ 12 ಅಧಿವೇಶನಗಳಿಗೆ ತಗಲಿರುವ ವೆಚ್ಚ ಸುಮಾರು 140 ಕೋಟಿ ರೂ.ಗಳು ಎಂಬುದೇ ಇದಕ್ಕೆ ನಿದರ್ಶನ. ಈಗ ಇದರ ಸಾಲಿಗೆ 13ನೇ ಅಧಿವೇಶನವೂ ಸೇರಿದ್ದು, ಇದರ ಖರ್ಚು ವೆಚ್ಚದ ಪ್ರಸ್ತಾವನೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

Advertisement

ಇಷ್ಟೊಂದು ವೆಚ್ಚದಿಂದ ಉತ್ತರ ಕರ್ನಾಟಕದ ಜನರಿಗೆ ಎಷ್ಟು ಅನುಕೂಲವಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

ಈಗ ಮತ್ತೆ ಚಳಿಗಾಲದ ಅಧಿವೇಶನ ಬಂದಿದೆ. ಡಿ. 9ರಿಂದ ಆರಂಭವಾಗಲಿರುವ ಅಧಿವೇಶನವನ್ನು 10 ದಿನಗಳ ಬದಲು ಒಂದು ದಿನ ಕಡಿತಗೊಳಿಸಲಾಗಿದೆ. ಆದರೆ ಅಧಿವೇಶನಕ್ಕೆ ತಗಲುವ ಖರ್ಚು ವೆಚ್ಚದಲ್ಲಿ ಅಂತಹ ಬದಲಾವಣೆ ಕಾಣುತ್ತಿಲ್ಲ. ಅಧಿವೇಶನಕ್ಕೆ ಸುಮಾರು 13 ಕೋಟಿ ರೂ. ಬೇಕು ಎಂದು ಜಿಲ್ಲಾಡಳಿತ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

13 ಕೋಟಿ ರೂ. ಪ್ರಸ್ತಾವನೆ
ವರ್ಷ ವರ್ಷವೂ ಅಧಿವೇಶನ ನಡೆಯುತ್ತದೆಯೇ ವಿನಾ ಯಾವ ಪ್ರಯೋಜನವೂ ಆಗಿಲ್ಲ ಎಂಬ ವ್ಯಾಪಕ ಅಸಮಾಧಾನದ ನಡುವೆಯೇ ಈ ವರ್ಷದ ಅಧಿವೇಶನಕ್ಕೆ 13.21 ಕೋಟಿ ರೂ. ನೀಡುವಂತೆ ಜಿಲ್ಲಾಡಳಿತ ಸಲ್ಲಿಸಿರುವ ಪ್ರಸ್ತಾವನೆ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಎಲ್ಲಕ್ಕಿಂತ ಅಚ್ಚರಿಯ ಸಂಗತಿ ಎಂದರೆ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಚಿವರು, ಶಾಸಕರು ಮತ್ತು ಅಧಿಕಾರಿಗಳ ವಸತಿಗಾಗಿ 7 ಕೋಟಿ ರೂ.ಗಳ ಪ್ರಸ್ತಾವನೆ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಕಳೆದ ವರ್ಷ ವಸತಿ, ಉಪಾಹಾರ ಮತ್ತು ಊಟಕ್ಕಾಗಿ 6.76 ಕೋಟಿ ಖರ್ಚಾಗಿತ್ತು.

Advertisement

ಇದಲ್ಲದೆ ಅಧಿವೇಶನದ ವೇಳೆ ವಿವಿಧ ಸಂಘಟನೆಗಳು ನಡೆಸುವ ಪ್ರತಿಭಟನೆಗಳಿಗೆ ಸ್ಥಳಾವಕಾಶ ಒದಗಿಸಲು ಬೇಕಾಗುವ ಭೂಮಿ ಬಾಡಿಗೆಯು 8 ಲಕ್ಷ ರೂ. ದಾಟಿರುವುದು ಅಧಿವೇಶನದ ಸಾರ್ಥಕತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ಅಧಿವೇಶನದಲ್ಲಿ ಭಾಗವಹಿಸುವ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಮತ್ತು ಸಿಬಂದಿಯ ಉಪಾಹಾರ ಮತ್ತು ಊಟದ ಖರ್ಚು 2.8 ಕೋ.ರೂ. ಆಗುವ ನಿರೀಕ್ಷೆಯಿದೆ. ಇಂಟರ್‌ನೆಟ್‌ ಸೌಲಭ್ಯ ಮತ್ತು ದೂರವಾಣಿಗೆ 44 ಲಕ್ಷ ರೂ. , ವಾಹನಗಳ ಇಂಧನಕ್ಕೆ 45 ಲಕ್ಷ ರೂ., ತುರ್ತು ಬಾಡಿಗೆ ವಾಹನಗಳಿಗೆ 25 ಲಕ್ಷ ರೂ., ಚಾಲಕರ ವಸತಿಗೆ 20 ಲಕ್ಷ ರೂ., ಕಟ್ಟಡಗಳ ಅಲಂಕಾರಕ್ಕೆ 15 ಲಕ್ಷ ರೂ. ಸ್ವತ್ಛಯ ಸಿಬಂದಿ, ಬಿಸಿ ನೀರಿನ ವ್ಯವಸ್ಥೆ, ಲೇಖನ ಸಾಮಗ್ರಿಗಳಿಗೆ 25 ಲಕ್ಷ ರೂ. ಹೆಚ್ಚುವರಿ ವೆಚ್ಚ ನಿಗದಿ ಮಾಡಲಾಗಿದೆ.

ಇದಲ್ಲದೆ ಅಧಿವೇಶನದ ವೇಳೆ ಸುವರ್ಣ ವಿಧಾನಸೌಧದ ಮುಂಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸುಮಾರು 15 ಲಕ್ಷ ರೂ., ಅಧಿವೇಶನ ಮಾಹಿತಿ ಕೈಪಿಡಿಗಳು, ವಿವಿಧ ಗುರುತಿನ ಚೀಟಿಗಳಿಗೆ 4 ಲಕ್ಷ ರೂ., ಸರಕಾರಿ ವಾಹನ ಚಾಲಕರ ನಿರ್ವಹಣ ವೆಚ್ಚಕ್ಕಾಗಿ 25 ಸಾವಿರ ರೂ. ನಿಗದಿ ಪಡಿಸಲಾಗಿದೆ. ಕೇವಲ ಅಧಿವೇಶನಗಳಿಗಾಗಿ 19 ವರ್ಷಗಳಲ್ಲಿ ಅಂದಾಜು 140 ಕೋ.ರೂ. ಖರ್ಚು ಮಾಡಲಾಗಿದೆ. ಮೊದಲ ಅಧಿವೇಶನಕ್ಕೆ ಇದ್ದ 5 ಕೋಟಿ ಖರ್ಚು ಈಗ 20 ಕೋ.ರೂ. ಸಮೀಪಕ್ಕೆ ಬಂದು ನಿಂತಿದೆ. ಇದರಿಂದ ಉತ್ತರ ಕರ್ನಾಟಕದ ಚಿತ್ರಣ ಮಾತ್ರ ಬದಲಾಗಿಲ್ಲ. ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಂಡಿಲ್ಲ. ಮೂಲಭೂತ ಸೌಲಭ್ಯಗಳ ಸಮಸ್ಯೆ ಬಗೆಹರಿದಿಲ್ಲ. ಹಾಗಾದರೆ 140 ಕೋಟಿ ರೂ. ಖರ್ಚು ಮಾಡಿ ಅಧಿವೇಶನ ನಡೆಸಿದ್ದು ಯಾವ ಸಾರ್ಥಕತೆಗೆ ಎಂಬುದು ಈ ಭಾಗದ ಜನರ ಪ್ರಶ್ನೆ.

ಅಧಿವೇಶನವು ಸುಗಮವಾಗಿ ನಡೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಖರ್ಚು ವೆಚ್ಚದ ಪ್ರಮಾಣವನ್ನು ಕಡಿಮೆ ಮಾಡಲು ಗಮನಹರಿಸಲಾಗುವುದು. ಈ ಬಾರಿಯ ಅಧಿವೇಶನಕ್ಕೆ 13.21 ಕೋ.ರೂ. ವೆಚ್ಚದ ನಿರೀಕ್ಷೆಯಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಮೊಹಮ್ಮದ ರೋಷನ್‌, ಬೆಳಗಾವಿ ಜಿಲ್ಲಾಧಿಕಾರಿ

- ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next