Advertisement
ಒಂದು ಸಲ ಏನಾಯಿತೋ, ಈ ನಿಯಮದಿಂದ ಮೀನುಗಾರನಿಗೆ ಹಲವು ದಿನಗಳವರೆಗೂ ಒಂದೇ ಒಂದು ಮೀನು ಬಲೆಗೆ ಬೀಳಲಿಲ್ಲ. ಅವನ ಸಂಸಾರ ಉಪವಾಸ ಬೀಳುವ ಸ್ಥಿತಿ ಬಂದಿತು. ಆಗ ಅವನ ಹೆಂಡತಿ, “”ಐದನೆಯ ಸಲ ಬಲೆ ಬೀಸುವುದಿಲ್ಲ ಎಂಬ ನಿಯಮ ಮಾಡಿ ನಮ್ಮನ್ನು ಊಟವಿಲ್ಲದೆ ಕೊಲ್ಲುತ್ತೀಯಾ? ನಿನ್ನ ನಿಯಮಕ್ಕೆ ಮಣ್ಣು ಹಾಕಲಿ. ಹೋಗು, ಮೀನು ಸಿಗುವ ವರೆಗೂ ಬಲೆ ಬೀಸು. ಬರಿಗೈಯಲ್ಲಿ ಮನೆಗೆ ಬರಬೇಡ. ಇಲ್ಲವಾದರೆ ಮಕ್ಕಳೊಂದಿಗೆ ಎಲ್ಲಿಗಾದರೂ ಹೋಗಿಬಿಡುತ್ತೇನೆ” ಎಂದಳು.
Related Articles
Advertisement
ಮೀನುಗಾರ ಕಂಗಾಲಾದ. “”ಇದೇನು ಮಾತು? ಹೂದಾನಿಯೊಳಗೆ ಬಂಧಿತನಾಗಿದ್ದ ನಿನ್ನನ್ನು ಹೊರಗೆ ತಂದು ಉಪಕಾರ ಮಾಡಿದವನು ನಾನು. ನನಗೆ ನೀನು ಪ್ರತಿಫಲವಾಗಿ ಸಾವನ್ನು ಕೊಡುವುದು ನ್ಯಾಯವೆ?” ಎಂದು ಗಾಬರಿಯಿಂದ ಕೇಳಿದ. ಭೂತವು ನೆಲವೇ ನಡುಗುವ ಹಾಗೆ ಮತ್ತೆ ನಕ್ಕಿತು. “”ಏನಂದೆ, ಉಪಕಾರವೆ? ಮನುಷ್ಯ ಜಾತಿಗೆ ಉಪಕಾರ ಮಾಡಿದರೆ ಅವರು ಅದನ್ನು ನೆನಪಿಟ್ಟುಕೊಳ್ಳುತ್ತಾರೆಯೆ? ಖಂಡಿತ ಇಲ್ಲ. ಇದಕ್ಕೆ ನಾನೇ ಸಾಕ್ಷಿ. ಸ್ವತಂತ್ರವಾಗಿಯೇ ತಿರುಗುತ್ತಿದ್ದೆ. ಕಂಡವರಿಗೆಲ್ಲ ಉಪಕಾರ ಮಾಡುತ್ತಿದ್ದೆ. ಒಬ್ಬ ರಾಜನ ಬಳಿಗೆ ಹೋದೆ. ತುಂಬ ಚೆಲುವನಾಗಿದ್ದ. ಪ್ರಪಂಚದ ಸುಂದರಿಯರನ್ನೆಲ್ಲ ನಿನಗೆ ತಂದುಕೊಡಲೆ? ಎಂದು ಕೇಳಿದೆ. ಒಪ್ಪಿಕೊಂಡ. ನಯವಾಗಿ ನನ್ನನ್ನು ಕರೆದು ಈ ಹೂದಾನಿಯೊಳಗೆ ಕುಳಿತುಕೊಳ್ಳಲು ಹೇಳಿದ. ಮೋಸವೆಂದು ತಿಳಿಯದೆ ಒಳಗೆ ಹೋದೆ. ಮುಚ್ಚಳ ಬಿಗಿದು ಸಮುದ್ರಕ್ಕೆ ಹಾಕಿದ ಪಾಪಿ” ಎಂದು ರೋಷದಿಂದ ಹೇಳಿತು.
“”ಅಯ್ಯೋ ಪಾಪ, ಹಾಗೆ ಮಾಡಬಾರದಿತ್ತು. ನಾನು ಅವನಂತಹ ಕೃತಘ್ನನಲ್ಲ, ಒಳ್ಳೆಯವನು” ಮೀನುಗಾರ ಹೇಳಿದ. ಭೂತ ಮತ್ತೆ ನಕ್ಕಿತು. ಅದು ನಕ್ಕ ಕೂಡಲೇ ವಜ್ರಗಳು, ವೈಢೂರ್ಯಗಳು ಮಳೆಯಂತೆ ಬೀಳುತ್ತಿದ್ದವು. “”ಆಮೇಲೆ ಒಂದು ಶತಮಾನದ ವರೆಗೂ ಯಾರಾದರೂ ನನ್ನನ್ನು ಈ ಬಂಧನದಿಂದ ಬಿಡುಗಡೆ ಮಾಡುತ್ತಾರೋ ಎಂದು ಕಾದೆ. ಅಂಥವರನ್ನು ಇಡೀ ಜಗತ್ತಿಗೆ ರಾಜನಾಗಿ ಮಾಡಬೇಕೆಂದು ನಿರ್ಧರಿಸಿದ್ದೆ. ಆದರೆ ಕಣ್ಣಿಗೆ ಕಂಡರೂ ಒಬ್ಬ ಮೀನುಗಾರ ಕೂಡ ಈ ಕೆಲಸ ಮಾಡದೆ ಅಲಕ್ಷಿಸಿದರು. ಆಮೇಲೆ ಇನ್ನೂ ಒಂದು ಶತಮಾನದ ಕಾಲ ದಾರಿ ನೋಡಿದೆ. ನನಗೆ ಸ್ವಾತಂತ್ರ್ಯ ತಂದುಕೊಟ್ಟವರಿಗೆ ಜಗತ್ತಿನ ಸಂಪತ್ತೆಲ್ಲವನ್ನೂ ಕೊಡುವ ಬಯಕೆ ನನ್ನದಾಗಿತ್ತು. ಆದರೂ ಒಬ್ಬ ಮೀನುಗಾರನಿಗೂ ನನ್ನನ್ನು ಕಾಪಾಡಿ ಸಂಪತ್ತು ಗಳಿಸುವ ಬಯಕೆ ಮೂಡಲಿಲ್ಲ” ಎಂದಿತು ಭೂತ.
“”ಹೋಗಲಿ, ಅವರಿಗೆ ಧನಿಕರಾಗುವ ಯೋಗ ಇಲ್ಲ, ಅದೃಷ್ಟಹೀನ ರೆಂದೇ ತಿಳಿಯಬೇಕು. ಆದರೆ, ಈಗ ನಾನು ನಿನ್ನನ್ನು ಕಾಪಾಡಿದ್ದೇನೆ. ಶತಮಾನಗಳಿಂದ ಹೂದಾನಿಯೊಳಗೆ ಅಡಗಿಕೊಂಡಿದ್ದವನಿಗೆ ವಿಮೋಚನೆ ನೀಡಿದ್ದೇನೆ. ನನಗೇನೂ ಪ್ರತಿಫಲ ಕೊಡುವುದು ಬೇಡ, ಜೀವಸಹಿತ ಉಳಿಸಿ ದರೆ ಸಾಕು. ನಾನಿಲ್ಲವಾದರೆ ನನ್ನ ಹೆಂಡತಿ-ಮಕ್ಕಳು ಅನಾಥರಾಗುತ್ತಾರೆ. ನನಗೆ ಜೀವದಾನ ಮಾಡು” ಎಂದು ಬೇಡಿಕೊಂಡ ಮೀನುಗಾರ.
ಭೂತ ಇನ್ನೂ ಜೋರಾಗಿ ನಕ್ಕಿತು. “”ಇಲ್ಲ, ಆಮೇಲೆ ನಾನು ಯಾರಿಗೂ ಸಹಾಯ ಮಾಡಬಾರದೆಂದು ನಿರ್ಧರಿಸಿದೆ. ನನ್ನನ್ನು ಯಾರು ಹೂದಾನಿಯಿಂದ ಬಿಡಿಸುತ್ತಾರೋ ಅವರನ್ನು ಕೊಂದು ಹಾಕುತ್ತೇನೆ” ಎಂದು ಶಪಥ ಮಾಡಿದೆ. ಈ ಕಾರಣದಿಂದ ನಿನಗೆ ನಾನು ಕೊಡುವ ಪ್ರತಿಫಲವೆಂದರೆ ಸಾವು ಮಾತ್ರ. ಆದರೂ ನನ್ನಲ್ಲಿ ಸ್ವಲ್ಪ ಕರುಣೆಯೂ ಇದೆ. ಕಡೆಯದಾಗಿ ನನ್ನ ಕೈಯಲ್ಲಿ ಸಾಯುವ ಮೊದಲು ನಿನಗೆ ಏನಾದರೊಂದು ಆಶೆಯಿರಬಹುದು. ಪ್ರಾಣದಾನದ ಹೊರತು ಬೇರೆ ಏನು ಬೇಕಿದ್ದರೂ ಕೇಳಿಕೋ. ಕೊಡುತ್ತೇನೆ, ಆಮೇಲೆ ನಿನ್ನ ಜೀವ ತೆಗೆಯುತ್ತೇನೆ” ಎಂದು ಉದಾರವಾಗಿ ಹೇಳಿತು.
ಮೀನುಗಾರ ಮನಸ್ಸಿನಲ್ಲಿಯೇ ದೇವರನ್ನು ಪ್ರಾರ್ಥಿಸಿಕೊಂಡ. ದೇವರೇ, ಇದರ ಕೈಯಿಂದ ಪಾರಾಗಲು ಏನಾದರೊಂದು ದಾರಿ ತೋರಿಸು ಎಂದು ಎಂದು ನೆನೆದುಕೊಳ್ಳುತ್ತಿದ್ದವನಿಗೆ ಒಂದು ಉಪಾಯ ಹೊಳೆಯಿತು. ಭೂತಕ್ಕೆ ಕೈಜೋಡಿಸಿ ನಮಸ್ಕರಿಸಿದ. “”ಕಡೆಯ ಆಶೆ ಏನಿದ್ದರೂ ನೆರವೇರಿಸುವುದಾಗಿ ಹೇಳಿದೆಯಲ್ಲ, ನಿನ್ನ ಔದಾರ್ಯಕ್ಕೆ ಋಣಿಯಾಗಿದ್ದೇನೆ. ನನಗೆ ಜೀವದಾನ ಬೇಡ. ಆದರೆ ಅಷ್ಟು ಸಣ್ಣ ಹೂದಾನಿಯ ಒಳಗೆ ದೈತ್ಯ ಆಕಾರದ ನೀನು ನೂರಾರು ವರ್ಷ ಕುಳಿತಿದ್ದೆ ಎಂದರೆ ನಂಬುವುದು ಹೇಗೆ? ಇಷ್ಟು ದೊಡ್ಡದಿರುವ ನೀನು ಅಷ್ಟು ಸಣ್ಣದಾಗಿ ಅದರೊಳಗೆ ಹೋಗುವುದು ಹೇಗೆ ಎಂಬ ಚೋದ್ಯವನ್ನು ಕಣ್ಣಾರೆ ಕಾಣಬೇಕೆಂಬ ಆಶೆ ನನಗಿದೆ. ಆಮೇಲೆ ನಿಶ್ಚಿಂತವಾಗಿ ಸಾಯಲು ಸಿದ್ಧವಾಗಿದ್ದೇನೆ” ಎಂದು ಹೇಳಿದ.
ಭೂತವು, “”ಇದೋ ನೋಡು, ನನ್ನ ಸಾಮರ್ಥ್ಯ” ಎಂದು ಹೇಳಿ ನಿಧಾನವಾಗಿ ಕೆಳಗಿಳಿಯುತ್ತ ಹೂದಾನಿಯೊಳಗೆ ಪ್ರವೇಶಿಸಿ ಕಾಣದಾಯಿತು. ಮರುಕ್ಷಣವೇ ಮೀನುಗಾರ, “”ಒಳ್ಳೆಯದಾಯಿತು, ನೀನು ಎಂತಹ ಶಕ್ತಿವಂತ ನೆಂಬುದು ನನಗೆ ಈಗ ಅರ್ಥವಾಯಿತು” ಎನ್ನುತ್ತ ಹೂದಾನಿಗೆ ಬಿರಡೆ ಹಾಕಿ, ಸುತ್ತಲೂ ಮಯಣ ಮೆತ್ತಿ ಭದ್ರಗೊಳಿಸಿದ.
ಭೂತವು ಒಳಗಿನಿಂದ, “”ಮೋಸ ಮಾಡಬೇಡ. ನನ್ನನ್ನು ಹೊರಗೆ ಬಿಡು. ನಿನ್ನನ್ನು ನಾನು ಕೊಲ್ಲಲೇಬೇಕು” ಎಂದು ಕೂಗಿತು. ಮೀನುಗಾರನು, “”ನೀನು ಹೊರಗೆ ಬಂದರೆ ತಾನೆ ನನ್ನನ್ನು ಕೊಲ್ಲುವುದು? ಮತ್ತೆ ನಿನ್ನನ್ನು ಸಮುದ್ರಕ್ಕೆಸೆಯುತ್ತೇನೆ. ನಿನ್ನ ನಗೆಯಿಂದಾಗಿ ಈ ದೋಣಿಯಲ್ಲಿ ತುಂಬಿಕೊಂಡಿರುವ ಅಪಾರ ಸಂಪತ್ತನ್ನು ವೆಚ್ಚ ಮಾಡಿ ಸಮುದ್ರದ ಬಳಿ ಒಂದು ಮಹಲನ್ನು ಕಟ್ಟಿಕೊಂಡು ಅದರಲ್ಲಿ ವಾಸವಾಗುತ್ತೇನೆ” ಎಂದು ಹೇಳಿ ಹೂದಾನಿಯನ್ನು ಎತ್ತಿ ಸಮುದ್ರಕ್ಕೆ ಹಾಕಿದ. ಮೀನುಗಾರನು ದೋಣಿಯಲ್ಲಿದ್ದ ಸಂಪತ್ತನ್ನು ಮನೆಗೆ ಸಾಗಿಸಿದ. ಆಗರ್ಭ ಶ್ರೀಮಂತನಾಗಿ ತನ್ನ ಸಂಸಾರದೊಂದಿಗೆ ಸುಖವಾಗಿ ಬಾಳಿದ.
– ಪ. ರಾಮಕೃಷ್ಣ ಶಾಸ್ತ್ರಿ