ಉಳ್ಳಾಲ: ಸೋಮೇಶ್ವರ ಉಚ್ಚಿಲ ಬೀಚ್ ಬಳಿಯ ಪಾಳು ಬಿದ್ದ ಬಾವಿಯ ಕಟ್ಟೆಯಲ್ಲಿ ಕುಳಿತಿದ್ದ ಸ್ಥಳೀಯ ಮೀನುಗಾರರೋರ್ವರು ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬುಧವಾರ(ಜ.1) ನಡೆದಿದೆ.
ಉಚ್ಚಿಲ ಬೀಚ್ ನಿವಾಸಿ ಶಶೀಂದ್ರ.ಎಮ್ ಉಚ್ಚಿಲ್ (74)ಸಾವನ್ನಪ್ಪಿರುವ ಮೀನುಗಾರ.
ಶಶೀಂದ್ರ ಅವರು ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದು, ಮಂಗಳವಾರ ಸಂಜೆ ಸ್ನೇಹಿತನೊಂದಿಗೆ ಬೀಚ್ ಬಳಿಯ ಪಾಳು ಬಿದ್ದ ಬಾವಿಯ ಕಟ್ಟೆಯಲ್ಲಿ ಕುಳಿತು ಮಾತನಾಡುತ್ತಿದ್ದಂತೆ ಆಯ ತಪ್ಪಿ ಬಾವಿಯೊಳಗೆ ಬಿದ್ದಿದ್ದಾರೆ. ನುರಿತ ಈಜುಗಾರರಾದ ಶಶೀಂದ್ರ ಅವರು ತಲೆಕೆಳಗಾಗಿ ಬಾವಿಗೆ ಬಿದ್ದಿದ್ದು, ಬಾವಿಯೊಳಗೆ ಕೇವಲ ಮೂರಡಿಯಷ್ಟು ನೀರಿದ್ದ ಪರಿಣಾಮ ತಲೆಗೆ ಗಂಭೀರ ಏಟು ತಗುಲಿ ಸಾವನ್ನಪ್ಪಿದ್ದಾರೆ. ಸ್ಥಳೀಯರೆ ಮೃತದೇಹವನ್ನ ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಶಶೀಂದ್ರ ಅವರು ಪತ್ನಿ, ಇಬ್ಬರು ಪುತ್ರಿಯರನ್ಬು ಅಗಲಿದ್ದಾರೆ.
ಅವರ ಪತ್ನಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದ್ದು ಬುಧವಾರದಿಂದ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸುವ ತಯಾರಿ ನಡೆದಿತ್ತು. ಈ ಘಟನೆಯಿಂದ ಕುಟುಂಬ ಕಂಗಾಲಾಗಿದೆ.