Advertisement

ಸಮಸ್ಯೆಗಳಿಗೆ ಸಿಗುವುದೇ ಮುಕ್ತಿ?

09:32 AM Aug 03, 2020 | Suhan S |

ಬೆಂಗಳೂರು: ಪಾಲಿಕೆ ಸದಸ್ಯರ ಅಧಿಕಾರ ಅವಧಿ ಸೆ. 10ಕ್ಕೆ ಮುಗಿಯಲಿದೆ. ಆದರೆ, ಅಧಿಕಾರಾವಧಿ ಒಂದು ತಿಂಗಳು ಇರುವಂತೆ ಯಾವುದೇ ನಿರ್ಣಯಗಳನ್ನು, ಕರಡು ಮಂಡನೆಯನ್ನು ಕೌನ್ಸಿಲ್‌ನಲ್ಲಿ ಮಾಡುವಂತಿಲ್ಲ ಎನ್ನುವ ನಿಯಮವಿದೆ. ಅಂದರೆ ಇನ್ನು ಕೇವಲ ಒಂದು ವಾರ ಬಾಕಿ ಉಳಿದಿದೆ.

Advertisement

ಈ ಮಧ್ಯೆ ನಗರದ ಹಲವು ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಟೋಟಲ್‌ ಸ್ಟೇಷನ್‌ ಸರ್ವೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದ ವರದಿ ಅಂತಿಮವಾಗಿಲ್ಲ ಹಾಗೂ ಕಟ್ಟಡಗಳ ಉಪವಿಧಿ -2019ರ (ಕರಡು) ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿಲ್ಲ. ಕಸ ವಿಲೇವಾರಿ ಮಾಡುವ ವಿಚಾರದಲ್ಲೂ ಗೊಂದಲಗಳು ಮುಂದುವರಿದಿವೆ. ಪ್ರತ್ಯೇಕವಾಗಿ ಹಸಿ ಮತ್ತು ಒಣಕಸ ವಿಲೇವಾರಿ ಸಂಗ್ರಹ ಮಾಡುವ ಬದಲು, ಇಂದೋರ್‌ ಮಾದರಿಯಲ್ಲಿ ಕಸ ಸಂಗ್ರಹ ಮಾಡುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಐದು ವಾರ್ಡ್‌ಗಳಲ್ಲಿ ಇಂದೋರ್‌ ಮಾದರಿ ಯೋಜನೆಯನ್ನೂ ಮುಂದೂಡಲಾಗಿದೆ.

ಅಂದಹಾಗೆ ಕಸವಿಲೇವಾರಿಗೆ ಇಂದೋರ್‌ ಮಾದರಿ, ಟೋಟಲ್‌ ಸ್ಟೇಷನ್‌ ಸರ್ವೆ ಹಾಗೂ ಕಟ್ಟಡಗಳ ಉಪವಿಧಿ -2019 ವಿಷಯಗಳು ಎಲ್ಲವೂ 2019 ಹಾಗೂ 2020ನೇ ಸಾಲಿನಲ್ಲಿನ ವಿಷಯ ಗಳಾಗಿವೆ. ಇನ್ನು ಸೋಂಕು ತಡೆಯುವಲ್ಲಿ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಆದರೆ, ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಡೀ ವ್ಯವಸ್ಥೆ ಬಗ್ಗೆ ಜನರಲ್ಲಿ ಅಸಮಾಧಾನ ಮೂಡಿದೆ. ಜು. 3ಕ್ಕೆ ಹನುಮಂತನಗರದಲ್ಲಿ ಆ್ಯಂಬುಲೆನ್ಸ್‌ ತಡವಾಗಿ ಸೋಂಕಿತರ ಶವ ಸಾಗಿಸಲು ವಿಳಂಬವಾಗಿದ್ದು ಒಂದು.

ಕಸ ವಿಲೇವಾರಿ: ನಗರದಲ್ಲಿ ಕಸ ವಿಲೇವಾರಿ ಮಾಡುವುದಕ್ಕೆ ಯಾವ ಮಾದರಿಯನ್ನು ಅನುಸರಿಸ  ಬೇಕು ಎಂಬ ಗೊಂದಲ ಇನ್ನೂ ಮುಂದುವರಿದಿದೆ. ನಗರದಲ್ಲಿ ಹಸಿ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡುವ ಟೆಂಡರ್‌ಗೆ ಕಾರ್ಯಾದೇಶವನ್ನೂ ನೀಡಿಲ್ಲ. ಈ ಬಗ್ಗೆ ಕೋರ್ಟ್‌ ಸಹ ಎಚ್ಚರಿಕೆ ನೀಡಿದೆ. ಆದರೆ, ಇದೂ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಇಂದೋರ್‌ ಮಾದರಿಯಲ್ಲಿ ಹಸಿ, ಒಣ ಹಾಗೂ ವೈದ್ಯಕೀಯ ತ್ಯಾಜ್ಯವನ್ನು ಒಂದೇ ಬಾರಿ ಸಂಗ್ರಹ ಮಾಡುವ ನಿಟ್ಟಿನಲ್ಲಿ ನಗರದ ಐದು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಆದರೆ, ಸೋಂಕು ಭೀತಿ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದೆ.

ಟೋಟಲ್‌ ಸ್ಟೇಷನ್‌ ಸರ್ವೆ :  ಬಿಬಿಎಂಪಿ ವ್ಯಾಪ್ತಿಯ ಕಟ್ಟಡಗಳ ವಿಸ್ತೀರ್ಣ ಪತ್ತೆಗೆ ನಡೆಸಲಾದ ಟೋಟಲ್‌ ಸ್ಟೇಷನ್‌ ಸರ್ವೆ ಆಧರಿಸಿ ವ್ಯತ್ಯಾಸ ವಿಸ್ತೀರ್ಣ ತೆರಿಗೆ ನಿಗದಿ ಮಾಡುವುದರಲ್ಲಿ ಆಗಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇನ್ನೂ ಅಂತಿಮ ವರದಿ ಬಂದಿಲ್ಲ. ಟೋಟಲ್‌ ಸ್ಟೇಷನ್‌ ಸರ್ವೆ ವರದಿಗೆ ಸಂಬಂಧಿಸಿದಂತೆ ಜೂನ್‌ 12 ಮತ್ತು 30ರಂದು ಎರಡು ಬಾರಿ ಈ ಹಿಂದಿನ ಆಯುಕ್ತರು ಕೌನ್ಸಿಲ್‌ ಸಭೆಯಲ್ಲಿ ಟೋಟಲ್‌ ಸ್ಟೇಷನ್‌ ಸರ್ವೆ ಬಗ್ಗೆ ವರದಿ ಮಂಡನೆ ಮಾಡಿದ್ದರು. ಇದರಲ್ಲಿ ಪೂರ್ಣ ಮಾಹಿತಿ ಇಲ್ಲದೆ ಇರುವುದರಿಂದ ಇದನ್ನು ಮುಂದಿನ ಕೌನ್ಸಿಲ್‌ ಸಭೆಯಲ್ಲಿ ಮಂಡನೆ ಮಾಡುವುದಾಗಿ ಹೇಳಿದ್ದರು. ಆದರೆ, ಈ ವೇಳೆಗಾಗಲೇ ಅವರ ವರ್ಗಾವಣೆಯಾಗಿದೆ.

Advertisement

ಇದೀಗ ಕೋವಿಡ್ ಸೋಂಕು ತಡೆಯುವ ನಿಟ್ಟಿನಲ್ಲಿ ಗಮನ ನೀಡಲಾಗುತ್ತಿದೆ. ಟೋಟಲ್‌ ಸ್ಟೇಷನ್‌ ಸರ್ವೆ ಒಟ್ಟು 321 ಕೋಟಿ ರೂ. ನಷ್ಟ ಉಂಟಾಗಿದೆ. ಆದರೆ, ಜೂನ್‌ 12ಕ್ಕೆ ಮಂಡನೆಯಾದ ವರದಿಯಲ್ಲಿ ಅಂದಾಜು 41.47 ಕೋಟಿ ರೂ. ಎಂದು ಉಲ್ಲೇಖ ಮಾಡಲಾಗಿತ್ತು. ಒಟ್ಟು ಮೊತ್ತ ಉಲ್ಲೇಖ ಮಾಡಿರಲಿಲ್ಲ. ಅದೇ ರೀತಿ, ಜೂ. 30ಕ್ಕೆ ಮಂಡಿಸಿದ ವರದಿಯಲ್ಲಿ 2017-18ನೇ ಸಾಲಿನವರಗೆ ಮಾತ್ರ ವರದಿಯನ್ನು ಪರಿಶೀಲನೆ ಮಾಡಲಾಗಿದ್ದು, ಇದರಲ್ಲಿ 251 ಕೋಟಿ ರೂ. ನಷ್ಟ ಉಂಟಾಗಿದೆ. ಕೇವಲ ಹತ್ತು ದಿನಗಳಿದ್ದು, ಪೂರ್ಣವರದಿ ಪಾಲಿಕೆಯಲ್ಲಿ ಮಂಡನೆಯಾಗಿ ಈ ಬಗ್ಗೆ ಒಂದು ನಿರ್ದಿಷ್ಟ ತೀರ್ಮಾನ ತೆಗೆದುಕೊಳ್ಳಬೇಕಿದೆ.

ಹನುಮಂತ ನಗರ ಘಟನೆಗೆ 30 ದಿನ :  ಇಡೀ ನಗರವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆ ನಡೆದು ಇಂದಿಗೆ (ಆ.2ಕ್ಕೆ )ಕ್ಕೆ 30 ದಿನ ಕಳೆದಿವೆ. ಹನುಮಂತನಗರದ ಏಳನೇ ಕ್ರಾಸ್‌ನಲ್ಲಿ ಜುಲೈ 3ರಂದು ಬಿಬಿಎಂಪಿಯ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಸ್ಪಂದಿಸದ ಹಿನ್ನೆಲೆಯಲ್ಲಿ ರಸ್ತೆಯಲ್ಲೇ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಸಂಬಂಧ ಬಿಬಿಎಂಪಿಯು ಆಡಳಿತ ವಿಭಾಗದ ಉಪ ಆಯುಕ್ತರ ಮಟ್ಟದಲ್ಲಿ ಸಮಿತಿ ರಚಿಸಿತ್ತು. ಸಮಿತಿಯು ಹನುಮಂತ ನಗರದ ಆರೋಗ್ಯಾಧಿಕಾರಿ ಡಾ.ಮಧುಸೂಧನ್‌, ಕ್ಲಿನಿಕಲ್‌ ವೈದ್ಯರಾದ ಡಾ. ಜಯಶ್ರೀ, ಹಿರಿಯ ಆರೋಗ್ಯಾಧಿಕಾರಿ ನಟರಾಜ್‌ ಹಾಗೂ ಕಿರಿಯ ಆರೋಗ್ಯಾಧಿಕಾರಿ ಮೀನಾ ಅವರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ಇದಾದ ಮೇಲೆ ಆಯುಕ್ತರೂ ವರ್ಗಾವಣೆ ಆಗಿರುವುದರಿಂದ ಈ ಪ್ರಕರಣದಲ್ಲಿನ ತಪ್ಪು ಮಾಡಿರುವವರ ಮೇಲೆ ಯಾವುದೇ ಕ್ರಮವಾಗಿಲ.

ತರಾತುರಿ ನಿರ್ಧಾರ ಸಾಧ್ಯತೆ? :  ಕೌನ್ಸಿಲ್‌ ಅನುಮೋದನೆ ಪಡೆದುಕೊಳ್ಳಲು ಕೇವಲ 10 ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ವಿಷಯಗಳನ್ನು ಚರ್ಚೆ ಮಾಡದೆ ಅನುಮೋದನೆ ಪಡೆದುಕೊಳ್ಳುವ ಸಾಧ್ಯತೆಯೂ ಇದೆ. ಮೂಲಗಳ ಪ್ರಕಾರ ಆ. 4ಕ್ಕೆ ಕೌನ್ಸಿಲ್‌ ಮಾಸಿಕ ಸಭೆ ನಡೆಯಲಿದ್ದು, ಮೇಯರ್‌ ಸೇರಿದಂತೆ ಪಾಲಿಕೆ ಸದಸ್ಯರ ಅಧಿಕಾರ ಅವಧಿ ಆರು ತಿಂಗಳ ಕಾಲ ವಿಸ್ತರಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಇದಕ್ಕೆ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ನೋಡಿಕೊಂಡು ಮತ್ತೂಂದು (ಆ.10ರ ಒಳಗೆ) ಸಭೆ ನಡೆಸಲೂಬಹುದು

ಈ ಹಿಂದಿನ ಆಯುಕ್ತರು ಶೋಕಾಸ್‌ ನೋಟಿಸ್‌ ನೀಡಿರುವ ಪ್ರಕರಣ ಹಾಗೂ ಟೋಟಲ್‌ ಸ್ಟೇಷನ್‌ ಸರ್ವೆ ವಿಚಾರವನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು.ಈ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ.  ಎನ್‌. ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಕಟ್ಟಡಗಳ ಉಪವಿಧಿ -2019 : ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಟ್ಟಡಗಳ ಉಪವಿಧಿ -2019 (ಕರಡು)ಕೌನ್ಸಿಲ್‌ ಸಭೆಯಲ್ಲಿ ಚರ್ಚೆ ಆಗಬೇಕಿತ್ತು. ಕಟ್ಟಡಗಳ ಉಪವಿಧಿ ರಚಿಸಿ 16 ವರ್ಷಗಳು ಕಳೆದಿವೆ. ಇದಾದ ಮೇಲೆ ಇದರಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ನಗರದ ಸುರಕ್ಷತೆ ಹಾಗೂ ಪಾಲಿಕೆಯ ಆದಾಯ ದೃಷ್ಟಿಯಿಂದ ಬಿಬಿಎಂಪಿ ಕಟ್ಟಡಗಳ ಉಪವಿಧಿ-2019 (ಕರಡು) ರಚನೆ ಮಾಡಲಾಗಿದೆ. ಇದರಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಕಟ್ಟಡಗಳ ವ್ಯಾಪ್ತಿಯಲ್ಲಿ ಹಸಿರೀಕರಣಕ್ಕೆ ಉತ್ತೇಜನ, ಮಳೆ ನೀರು ಕೊಯ್ಲು ಹಾಗೂ ಕಸ ವಿಲೇವಾರಿ ನಿರ್ವಹಣೆ ನಿಯಮಗಳನ್ನು ಸೇರಿಸಲಾಗಿದೆ. ಅಲ್ಲದೆ, ಪಾಲಿಕೆಯ ಆದಾಯ ದೃಷ್ಟಿಯಿಂದಲೂ ಕೆಲವು ಬದಲಾವಣೆಗಳನ್ನು ಇದರಲ್ಲಿ ಮಾಡಿಕೊಳ್ಳಲಾಗಿದೆ. ಇದು ಸಹ ಅನುಮೋದನೆ ಆಗಿಲ್ಲ

 

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next