Advertisement

ಕಾಮಗಾರಿ ವಿಳಂಬಕ್ಕೆ ಜಾರ್ಜ್‌ ಗರಂ 

12:18 PM May 26, 2017 | |

ಬೆಂಗಳೂರು: ಚರ್ಚ್‌ಸ್ಟ್ರೀಟ್‌ ರಸ್ತೆಯಲ್ಲಿ ಬಿಬಿಎಂಪಿ ಕೈಗೆತ್ತಿಕೊಂಡಿರುವ ಟೆಂಡರ್‌ಶ್ಯೂರ್‌ ರಸ್ತೆ  ಕಾಮಗಾರಿ ವಿಳಂಬಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ರಸ್ತೆ ಕೆಲಸಕ್ಕೆ ಅಡಚಣೆ ಉಂಟುಮಾಡುತ್ತಿರುವ, ಅಸಹಕಾರ ತೋರುತ್ತಿರುವ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಿ, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. 

Advertisement

ಚರ್ಚ್‌ಸ್ಟ್ರೀಟ್‌ ರಸ್ತೆ, ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ ಹಾಗೂ ಕಿನೋ ಥಿಯೇಟರ್‌ ಬಳಿ ಪಾಲಿಕೆಯಿಂದ ನಡೆಸುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಗುರುವಾರ ಮೇಯರ್‌ ಜಿ.ಪದ್ಮಾವತಿ, ಶಾಸಕ ಆರ್‌.ವಿ.ದೇವರಾಜು ಹಾಗೂ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ರೊಂದಿಗೆ ಜಾರ್ಜ್‌ ಪರಿಶೀಲಿಸಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಗರದ ಜನತೆಯ ಅನುಕೂಲಕ್ಕಾಗಿ ಸರ್ಕಾರದಿಂದ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅದೇ ಮಾದರಿಯಲ್ಲಿ ಚರ್ಚ್‌ಸ್ಟ್ರೀಟ್‌ನಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಟೆಂಡರ್‌ಶ್ಯೂರ್‌ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ಕೆಲ ಅಂಗಡಿ ಮಳಿಗೆದಾರರು ಕಾಮಗಾರಿಗೆ ಅಸಹಕಾರ ನೀಡುತ್ತಿರುವುದರಿಂದ ಕಾಮಗಾರಿ ವಿಳಂಬವಾಗಿದೆ.

ಸಹಕಾರ ನೀಡದವರಿಗೆ ನೋಟಿಸ್‌ ನೀಡಿ ಒಂದು ವಾರ ಕಾಲಾವಕಾಶ ನೀಡಿ, ಅದಾದ ಬಳಿಕವೂ ಅವರು ಸಹಕಾರಿಸದಿದ್ದರೆ ಮಳಿಗೆಗಳನ್ನು ಮುಚ್ಚಿಸಿ ಕಾಮಗಾರಿ ಪೂರ್ಣಗೊಳಿಸಿ,’ ಎಂದು ಅಧಿಕಾರಿಗಳಿಗೆ ಕಟ್ಟಪ್ಪಣೆ ನೀಡಿದರು. “ನಗರದ ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಕಾಮಗಾರಿ ನಡೆಸಲಾಗುತ್ತಿದೆಯೇ ಹೊರತು, ಯಾವುದೇ ರಾಜಕೀಯ ಉದ್ದೇಶವಿಲ್ಲ.

ರಸ್ತೆ ಅಭಿವೃದ್ಧಿಯಾಗುವುದರಿಂದ ಮಳಿಗೆದಾರರಿಗೂ ಹೆಚ್ಚಿನ ಅನುಕೂಲವಾಗಲಿದೆ. ವ್ಯಾಪಾರ ವಹಿವಾಟು ವೃದ್ಧಿಸಲಿದೆ,’ ಎಂದರು. ಆದಾಯ ಹೆಚ್ಚಿದಾಗ ಹೆಚ್ಚಿನ ತೆರಿಗೆ ಪಾವತಿಸುತ್ತೀರಾ ಎಂದು ಅಂಗಡಿ ಮಾಲೀಕರನ್ನು ಪ್ರಶ್ನಿಸಿದ ಸಚಿವ ಜಾರ್ಜ್‌, ಕಾಮಗಾರಿ ಮುಗಿಯುವವರೆಗೆ ತಾಳ್ಮೆಯಿಂದಿರಿ ಎಂದೂ ಸೂಚಿಸಿದರು. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕಾಮಗಾರಿಯನ್ನು ಆಗಸ್ಟ್‌ ವೇಳೆಗೆ ಪೂರ್ಣಗೊಳಿಸಬೇಕಿದ್ದು, ಕಾಮಗಾರಿ ವೇಗವನ್ನು ನೋಡಿದರೆ ಅವಧಿಯೊಳಗೆ ಮುಗಿಯುವುದು ಅನುಮಾನವಾಗಿದೆ.ಹೀಗಾಗಿ ಮೂರು ಪಾಳಿಯಲ್ಲಿ ಕೆಲಸ ಮಾಡುವ ಮೂಲಕ ಕಾಮಗಾರಿ ಪೂರ್ಣಗೊಳಿಸಿ, ಸೆಪ್ಟೆಂಬರ್‌ ವೇಳೆಗೆ ರಸ್ತೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ. 

ತಿಂಗಳೊಳಗೆ ಕಾಮಗಾರಿ ಪೂರ್ಣ
ಕಿನೋ ಥಿಯೇಟರ್‌ ಬಳಿಯ ಅಂಡರ್‌ಪಾಸ್‌ ಕಾಮಗಾರಿ ಪರಿಶೀಲನೆ ನಡೆಸಿದ ಕೆ.ಜೆ ಜಾರ್ಜ್‌, “ಮಳೆಗಾಲದಲ್ಲಿ ಕಿನೋ ಥಿಯೇಟರ್‌ ಬಳಿಯ ಅಂಡರ್‌ಪಾಸ್‌ನಲ್ಲಿ ನೀರು ಸಂಗ್ರಹವಾಗಿ ಆಗುತ್ತಿದ್ದ ಅನಾಹುತ ತಪ್ಪಿಸಲು ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಕಿನೋ ಥಿಯೇಟರ್‌ ಬಳಿಯ ಅಂಡರ್‌ಪಾಸ್‌ನಿಂದ ನೀರನ್ನು ಮಂತ್ರಿಮಾಲ್‌ ಬಳಿಯ ರಾಜಕಾಲುವೆಗೆ ಹರಿಸುವ ಯೋಜನೆ ಇದಾಗಿದ್ದು, 3 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 820 ಮೀಟರ್‌ ಉದ್ದದ ಪೈಕಿ ಈಗಾಗಲೇ 515 ಮೀಟರ್‌ನಷ್ಟು ಪೈಪ್‌ಲೈನ್‌ ಅಳವಡಿಕೆಯಾಗಿದ್ದು, ಬಾಕಿ 300 ಮೀಟರ್‌ ಕಾಮಗಾರಿ ತಿಂಗಳೊಳಗೆ ಮುಗಿಸಲಾಗುವುದು ಎಂದರು. 

ಕಲಾಸಿಪಾಳ್ಯ ಮಾರುಕಟ್ಟೆ ಅಭಿವೃದ್ಧಿಗೆ 10 ಕೋಟಿ ರೂ.
ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕೆ.ಜೆ.ಜಾರ್ಜ್‌ ಅವರು ಗುರುವಾರ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿದ್ದು, ಮಾರುಕಟ್ಟೆ ಸುತ್ತ ತಡೆಗೋಡೆ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ನಿರ್ಮಾಣ, ಮಳೆ ನೀರು ಚರಂಡಿ ಹೂಳು ತೆಗೆಯುವುದು ಸೇರಿದಂತೆ ವಿವಿಧ ಮೂಲಸೌಕರ್ಯ ಒದಗಿಸುವ ಕಾರ್ಯ 8 ತಿಂಗಳಲ್ಲಿ ಮುಗಿಯಲಿದೆ. 

ಕಸ ನಿಯಂತ್ರಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ 
ಬೆಂಗಳೂರು:
ನಗರದಲ್ಲಿ ಎಲ್ಲೆಂದರಲ್ಲಿ ಸುರಿಯಲಾಗುತ್ತಿರುವ ತ್ಯಾಜ್ಯವನ್ನು ನಿಯಂತ್ರಿಸದ ಪಾಲಿಕೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ.ಜಾರ್ಜ್‌ ಎಚ್ಚರಿಕೆ ನೀಡಿದ್ದಾರೆ. 

ಗುರುವಾರ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಎಂಟೂ ವಲಯಗಳ ಜಂಟಿ ಆಯುಕ್ತರು ಹಾಗೂ ಪಾಲಿಕೆಯ ಮುಖ್ಯ ಎಂಜಿನಿಯರುಗಳೊಂದಿಗೆ ಸಭೆ ನಡೆಸಿದ ಅವರು, ರಾತ್ರಿ ವೇಳೆ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವ ಲಾರಿಗಳ ವಿರುದ್ಧ ಪಾಲಿಕೆ ಅಧಿಕಾರಿಗಳು ತೀವ್ರ ನಿಗಾವಹಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ರಾತ್ರಿ ವೇಳೆ ಲಾರಿಗಳ ಮೂಲಕ ತ್ಯಾಜ್ಯ ಸುರಿಯುವವರನ್ನು ಪತ್ತೆ ಮಾಡಿ, ಲಾರಿಗಳನ್ನು ಜಪ್ತಿ ಮಾಡಬೇಕು. ಒಂದೊಮ್ಮೆ ಕ್ರಮಕೈಗೊಳ್ಳುವಲ್ಲಿ ಜಂಟಿ ಆಯುಕ್ತರು ವಿಫ‌ಲವಾದರೆ ಅವರ ವಿರುದ್ಧ ಕ್ರಮಕ್ಕೆ ಖಚಿತ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, “ಮಾವಳ್ಳಿಪುರದಲ್ಲಿ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಪ್ರಾರಂಭಿಸಲಾಗುವುದು. ನಗರದ ಇತರೆ ಕಡೆಗಳಲ್ಲಿಯೂ ಸ್ಥಾವರಗಳನ್ನು ಪ್ರಾರಂಭಿಸಲು ಚಿಂತನೆ ನಡೆದಿದೆ,’ಎಂದು ಮಾಹಿತಿ ನೀಡಿದರು. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಮೇಯರ್‌ ಜಿ.ಪದ್ಮಾವತಿ, ಉಪಮೇಯರ್‌ ಎಂ.ಆನಂದ್‌, ಕೆಸಿಡಿಸಿ ಅಧ್ಯಕ್ಷ ಕೆಂಚೇಗೌಡ, ಆಡಳಿತ ಪಕ್ಷ ನಾಯಕ ಮಹಮದ್‌ ರಿಜ್ವಾನ್‌ ನವಾಬ್‌ ಇದ್ದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಪೌರಕಾರ್ಮಿಕರ ವೇತನವನ್ನು 7 ರಿಂದ 17 ಸಾವಿರಕ್ಕೆ ಹೆಚ್ಚಿಸಲಾಗಿದೆ. ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಮುಖ್ಯಮಂತ್ರಿಗಳು ಇತ್ತೀಚೆಗೆ ಚಾಲನೆ ನೀಡಿದ ಕಸ ಗುಡಿಸುವ ಯಂತ್ರಗಳಿಂದ ಪೌರಕಾರ್ಮಿಕರಿಗೆ ಯಾವುದೇ ತೊಂದರೆಯಿಲ್ಲ.
-ಕೆ.ಜೆ.ಜಾರ್ಜ್‌, ಬೆಂಗಳೂರು ನಗರಾಭಿವೃದ್ಧಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next