ಪಡುಬಿದ್ರಿ: ಇಲ್ಲಿನ ಕೆಪಿಎಸ್(ಬೋರ್ಡ್ ಶಾಲಾ) ಆಟದ ಮೈದಾನದ ಅಂಚಿನಲ್ಲಿ ಪಂಚಾಯತ್ ಉಪಾಧ್ಯಕ್ಷ ಹೇಮಚಂದ್ರ ಹಾಗೂ ಗ್ರಾ. ಪಂ. ಸದಸ್ಯೆ ಭವಾನಿ ಅವರ 5ಲಕ್ಷ ರೂ. ಗಳ ಅನುದಾನದಲ್ಲಿ ಚರಂಡಿ ನಿರ್ಮಾಣವು ಇಲ್ಲಿನ ಕ್ರೀಡಾಪ್ರೇಮಿಗಳಿಗೆ ಬೇಸರವನ್ನು ಉಂಟುಮಾಡಿದೆ.
ಆಟಕ್ಕೆ ಇಂತಹಾ ಯಾವುದೇ ಕಾಮಗಾರಿಯಿಂದ ತೊಂದರೆಯಾದರೂ ಸಹಿಸೆವು. ಯುವ ಜನತೆಯ ಪರವಾಗಿ ಮೈದಾನವನ್ನು ಆಟೋಟಕ್ಕೆ ಉಳಿಸುವ ನಿಟ್ಟಿನಲ್ಲಿ ತಾವು ಹೋರಾಟಕ್ಕೂ ಸಿದ್ಧ ಎಂಬುದಾಗಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಎಸೋಸಿಯೇಶನ್ನ ಗೌರವ ಅಧ್ಯಕ್ಷ ಶರತ್ ಶೆಟ್ಟಿ ತಿಳಿಸಿದ್ದಾರೆ.
ಪಡುಬಿದ್ರಿ ಗ್ರಾ. ಪಂ. ವ್ಯಾಪ್ತಿಯಲ್ಲಿನ ಏಕೈಕ ದೊಡ್ಡ ಆಟದ ಮೈದಾನ ಇದಾಗಿದೆ. ಈ ಭಾಗದ ಯಾವುದೇ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ ಇದೇ ಮೈದಾನವು ಬಳಸಲ್ಪಡುತ್ತಿದೆ. ಇದೀಗ ಚರಂಡಿ ಕಾಮಗಾರಿಗೆ ಮುಂದಾಗಿದ್ದು, ನೆಲ ಮಟ್ಟದಲ್ಲಿ ಕಾಮಗಾರಿ ನಡೆಸಿದರೆ ಆಕ್ಷೇಪವಿಲ್ಲ. ಅಧಿಕಾರಿಗಳು ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಈ ಕುರಿತಾದ ಮನವಿಯೊಂದನ್ನು ಕಾಲೇಜು ಪ್ರಾಂಶುಪಾಲರಿಗೆ ಇತ್ತೀಚೆಗೆ ಯುವ ಕ್ರೀಡಾಸಕ್ತರು ಕಾಲೇಜಿಗೆ ತೆರಳಿ ನೀಡಿದ್ದರು. ಸರಕಾರಿ ಪ. ಪೂ. ಕಾಲೇಜು ಪ್ರಾಂಶುಪಾಲ ಅಜಯ್ ಈ ಕುರಿತಾಗಿ ತನ್ನ ಗಮನಕ್ಕೆ ಬಂದಿಲ್ಲ. ಮುಂದೆ ಶಾಸಕರ ಗಮನಕ್ಕೂ ತರವೆನೆಂದಿದ್ದರು.ಈ ವಿಚಾರವಾಗಿ ಜ. 7ರಂದು ಗ್ರಾ.ಪಂ. ಸದಸ್ಯರು, ಕಾಲೇಜು ಪ್ರಾಂಶುಪಾಲ ಅಜಯ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಶೆಟ್ಟಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಬಂಗೇರ, ಕಿಶರತ್ ಶೆಟ್ಟಿ, ವೈ. ಸುಕುಮಾರ್ ಮುಂತಾದವರ ಸಮಕ್ಷಮ ಸಮಸ್ಯೆಯ ಕುರಿತಾಗಿ ಸಭೆಯೊಂದನ್ನು ಸಂಘಟಿಸಿ ಚರ್ಚೆಯನ್ನು ನಡೆಸಲಾಗಿದೆ. ಸಭೆಯ ತೀರ್ಮಾನದಂತೆ ಆಟದ ಮೈದಾನಕ್ಕೆ ತೊಂದರೆಯಾಗದ ರೀತಿಯಲ್ಲಿ, ಕ್ರಿಕೆಟ್ ಆಟಕ್ಕೂ ಪ್ರತಿಕೂಲವೆನಿಸದಂತೆ ಚರಂಡಿ ನಿರ್ಮಾಣವನ್ನು ಕೈಗೊಳ್ಳಲು ನಿರ್ಣಯಿ ಸಲಾಗಿದೆ. ಕ್ರಿಕೆಟ್ ಪಿಚ್ ಗುಣಮಟ್ಟವನ್ನೂ ಕಾಯ್ದುಕೊಳ್ಳಲು ಅದರ ಸುತ್ತಲೂ ಚೈನ್ ಅಳವಡಿಕೆಗೆ ತೀರ್ಮಾನಿಲಾಗಿದೆ. ಅಗತ್ಯವಾದಲ್ಲಿ ಶಾಸಕರ ಅನುದಾನಕ್ಕೂ ಬೇಡಿಕೆ ಸಲ್ಲಿಸಲಾಗುವುದು ಎಂದು ಪಡುಬಿದ್ರಿ ಗ್ರಾ. ಪಂ. ಉಪಾಧ್ಯಕ್ಷ ಹೇಮಚಂದ್ರ ಅವರು ತಿಳಿಸಿದ್ದಾರೆ.
ನರೇಗಾ ಕಾಮಗಾರಿಯ ಆಮೆ ನಡಿಗೆ
ನರೇಗಾ ಕಾಮಗಾರಿಯಿಂದ ಶಾಲಾ ಆವರಣಗೋಡೆ ನಿರ್ಮಾಣ ಮಾಡುವ ಪಡುಬಿದ್ರಿ ಗ್ರಾ. ಪಂ. ಯೋಜನೆಗೆ ಗುತ್ತಿಗೆದಾರಿಕೆ ವಹಿಸಿಕೊಳ್ಳಲು ಕೂಲಿಯಾಳುಗಳ ಸಹಿತ ಯಾರೂ ಮುಂದೆ ಬಾರದೆ ಹಿನ್ನಡೆಯಗಿದೆ. ನರೇಗಾ ಯೋಜನೆಯ ಪ್ರತಿನಿತ್ಯದ ಮಾಹಿತಿ ಫೋಟೋ ಸಹಿತ ಅದರ ವೆಬ್ಸೈಟ್ಗೆ ರವಾನೆಯಾಗಬೇಕಿದ್ದು ಇದು ಕ್ಲಿಷ್ಟಕರವೆನಿಸಿದೆ. ಆದರೂ ಸದ್ಯವೇ ಮೈದಾನದ ಉತ್ತರಬದಿಯ ಆವರಣಗೋಡೆ ನಿರ್ಮಾಣಕ್ಕೆ ನರೇಗಾ ಕಾರ್ಡುದಾರರ ಸಹಾಯಪಡೆದು ಕೆಲಸಗಳನ್ನು ನಿರ್ವಹಿಸಲಾಗುವುದು. ಶಾಲಾ ಆವರಣಗೋಡೆ ನಿರ್ಮಾಣದ ಜತೆಗೇ ಚರಂಡಿ ನಿರ್ಮಾಣದ ಗುರಿಯನ್ನೂ ಇರಿಸಿಕೊಳ್ಳಲಾಗಿತ್ತು ಎಂದು ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ಶಶಿಕಲಾ ಪೂಜಾರಿ ತಿಳಿಸಿದ್ದಾರೆ.