Advertisement

ಮೇಲ್‌ಗ‌ಂಗೊಳ್ಳಿ : ರಸ್ತೆ ಬದಿಯಲ್ಲೇ ಕಸದ ರಾಶಿ

01:45 AM Sep 18, 2018 | Team Udayavani |

ಗಂಗೊಳ್ಳಿ: ದೇಶದೆಲ್ಲೆಡೆ ಸ್ವಚ್ಛ ಭಾರತದ ಕೂಗು ಬಲವಾಗಿ ಕೇಳಿ ಬರುತ್ತಿದ್ದರೂ, ಗಂಗೊಳ್ಳಿ ಗ್ರಾ.ಪಂ. ವ್ಯಾಪ್ತಿಯ ಮೇಲ್‌ ಗಂಗೊಳ್ಳಿಯ ರಸ್ತೆ ಬದಿಯಲ್ಲಿಯೇ ಕಸ ಎಸೆಯುತ್ತಿರುವುದು ಮಾತ್ರ ತಪ್ಪಿಲ್ಲ. ಘನ-ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕವನ್ನು ಕಳೆದ ತಿಂಗಳಿನಿಂದ ಆರಂಭಿಸಿದ್ದರೂ, ಅದನ್ನು ಎಲ್ಲ ಕಡೆಗೂ ವಿಸ್ತರಿಸದಿದ್ದುದರಿಂದ ಗ್ರಾಮದ ಕಸ ವಿಲೇವಾರಿ ಸಮಸ್ಯೆಯಾಗಿದೆ. ಗಂಗೊಳ್ಳಿಯ ಸಮೀಪದ ಮೇಲ್‌ ಗ‌ಂಗೊಳ್ಳಿ ಭಾಗದಲ್ಲಿ ಅನೇಕ ಮನೆಗಳಿದ್ದು, ಅಲ್ಲಿಯವರೆಲ್ಲ ಕಸ ವಿಲೇವಾರಿಗೆ ಸಮರ್ಪಕವಾದ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬದಿಯೇ ಕಸ ಎಸೆಯುತ್ತಿದ್ದಾರೆ. ಅದಲ್ಲದೆ ಬೇರೆ ಕಡೆಯಿಂದಲೂ ಬಂದು ಇಲ್ಲಿಯೇ ಕಸ ಎಸೆಯುತ್ತಿದ್ದಾರೆ.

Advertisement

ದುರ್ವಾಸನೆ
ತ್ಯಾಜ್ಯ ರಾಶಿಯಿಂದಾಗಿ ಮೇಲ್‌ ಗಂಗೊಳ್ಳಿ ಭಾಗದ ಪರಿಸರವಿಡೀ ದುರ್ವಾಸನೆ ಆವರಿಸಿದ್ದು, ಮೂಗು ಮುಚ್ಚಿಕೊಂಡೇ ದಿನ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿದೆ.

ರೋಗ ಭೀತಿ
ಕೊಳೆತ ತರಕಾರಿ, ಪ್ಲಾಸ್ಟಿಕ್‌ ಕಸಗಳನ್ನು ಇಲ್ಲಿಯೇ ಎಸೆಯಲಾಗುತ್ತಿದ್ದು, ಇದರಿಂದ ಈ ಪರಿ ಸರವು ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಾಡಾಗುವ ಸಂಭವವಿದ್ದು, ರೋಗ ಹರಡುವ ಭೀತಿ ಆವರಿಸಿದೆ.


ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆಯಿಲ್ಲ

ಗಂಗೊಳ್ಳಿ ಗ್ರಾ.ಪಂ. ವತಿಯಿಂದ ಕಳೆದ ಆಗಸ್ಟ್‌ನಲ್ಲಿ ಘನ-ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕ ಆರಂಭಿಸಲಾಗಿದೆ. ಇದು ಪ್ರಾಯೋಗಿಕವಾಗಿದ್ದು, ಕೇವಲ 210 ಮನೆಗಳಿಂದ ಹಸಿ- ಒಣ ಕಸವನ್ನು ಸಂಗ್ರಹಿಸಲಾಗುತ್ತಿದೆ. ಗಂಗೊಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು ಇರುವ 13 ವಾರ್ಡ್‌ ಗಳಲ್ಲಿ ಒಟ್ಟು 4,600 ಮನೆ ಹಾಗೂ ವಾಣಿಜ್ಯ ಮಳಿಗೆಗಳಿವೆ. ಅದರಲ್ಲಿ 275 ಅಂಗಡಿಗಳು, 10-12 ಹೊಟೇಲ್‌ಗ‌ಳು, 30 ಮಾಂಸದ ಅಂಗಡಿಗಳಿವೆ. 

ಪಂ. ಸೂಕ್ತ ಕ್ರಮ ಕೈಗೊಳ್ಳಲಿ
ಇಲ್ಲಿ ಈಗ ಕಸದ ರಾಶಿಯೇ ಆಗಿದೆ. ಎಲ್ಲರೂ ಬಂದು ಇಲ್ಲಿ ಕಸ ಎಸೆದು ಹೋಗುತ್ತಾರೆ. ಪಂಚಾಯತ್‌ಗೂ ಈ ಬಗ್ಗೆ ಗೊತ್ತಿದ್ದರೂ, ಕಸ ಎಸೆಯದಂತೆ ಯಾವುದೇ ಕಠಿನ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಎಸೆದ ಕಸವನ್ನು ವಿಲೇವಾರಿ ಮಾಡುವ ಕೆಲಸವನ್ನು ಕೂಡ ಅವರು ಮಾಡುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಗ್ರಾ.ಪಂ.ನವರು ಸೂಕ್ತ ಕ್ರಮಕೈಗೊಳ್ಳಲಿ. 
– ದಿನೇಶ್‌ ನಾಯಕ್‌, ಮೇಲ್‌ಗ‌ಂಗೊಳ್ಳಿ

Advertisement

ಶೀಘ್ರ ಕಸ ವಿಲೆೇವಾರಿಗೆ ಕ್ರಮ
ಮೊದಲಿಗೆ 210 ಮನೆಗಳಿಂದ ಕಸ ಸಂಗ್ರಹಿಸಲಾಗುತ್ತಿದ್ದು, ಈಗ ಅದನ್ನು 640 ಮನೆಗಳಿಗೆ ವಿಸ್ತರಿಸಲಾಗಿದೆ. ಪಂಚಾಯತ್‌ಗೆ ಕಸ ಸಂಗ್ರಹ ವಾಹನವೊಂದು ಸಿಕ್ಕರೆ ಎಲ್ಲ ಮನೆಗಳಿಂದಲೂ ತ್ಯಾಜ್ಯ ಸಂಗ್ರಹಿಸಲಾಗುವುದು. ಬ್ಯಾಂಕ್‌, ಉದ್ಯಮಿಗಳು ಅದನ್ನು ಕೊಡುತ್ತೇನೆಂದು ಮುಂದೆ ಬಂದಿದ್ದಾರೆ. ಗ್ರಾ.ಪಂ. ವ್ಯಾಪ್ತಿಯ ಎಲ್ಲ ಕಡೆಗಳ ಕಸ ವಿಲೇವಾರಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು. 
– ಮಾಧವ ಬಿ., ಗಂಗೊಳ್ಳಿ ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next