Advertisement

Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್‌!

02:51 PM Dec 19, 2024 | Team Udayavani |

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಪೌರ ಕಾರ್ಮಿಕರೊಬ್ಬರು ತಮ್ಮ ಕಲಾ ಶಕ್ತಿಯ ಮೂಲಕ ಸಾರ್ವಜನಿಕರು ಕಸ ಎಸೆಯೋ ಜಾಗದಲ್ಲಿ ಸುಂದರ ಕಲಾಕೃತಿಗಳ ಉದ್ಯಾನ ನಿರ್ಮಿಸಿ ಅವುಗಳನ್ನು ಸೆಲ್ಫಿ ಪಾಯಿಂಟ್‌ ಆಗಿ ಬೆಳೆಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

Advertisement

ಕಸದ ರಾಶಿಯಲ್ಲಿ ಸಿಗುವ ತ್ಯಾಜ್ಯ ವಸ್ತುಗಳನ್ನೇ ಬಳಸಿ ಅವುಗಳಿಂದ ಹೊಸ ಕಲಾಕೃತಿ ರೂಪಿಸಿ, ಬಣ್ಣಹಚ್ಚಿ ಅವುಗಳನ್ನೇ ಬಳಸಿಕೊಂಡು ಪಾರ್ಕ್‌ ಮಾಡಿದ ಪೌರ ಕಾರ್ಮಿಕರ ಹೆಸರು ಸೂರ್ಯ.

ಉಡುಪಿ ಮೂಲದ ಸೂರ್ಯ ಅವರಿಗೆ ಚಿತ್ರಕಲೆ, ಪೇಂಟಿಂಗ್‌ ನಲ್ಲಿ ಅಪಾರವಾದ ಆಸಕ್ತಿ ಇತ್ತು. ಹೀಗಾಗಿ ಕಸದ ರಾಶಿಯಲ್ಲಿ ಸಿಗುವ ತ್ಯಾಜ್ಯಗಳಿಂದ ಎನಾದ್ರು ಕಲಾತ್ಮಕ ಉಪಯುಕ್ತ ವಸ್ತುಗಳನ್ನು ತಯಾರಿಸಬೇಕು ಎನ್ನುವ ಆಸೆ ಅವರೊಳಗೆ ಮೂಡುತ್ತಿತ್ತು. ಅಲ್ಲಿನ ಕಿರಿಯ ಆರೋಗ್ಯ ಸಹಾಯಕಿ ಮಮತಾ ಅವರು ಇದಕ್ಕೆ ಬೆಂಬಲ ನೀಡಿದ್ದು, ಈಗ ಹತ್ತಾರು ಕಲಾಕೃತಿಗಳ ರಚನೆಯಾಗಿದೆ.

ಪರಿಸರ ಸ್ನೇಹಿಯಾಗಿ ಬಳಕೆ
ಈ ರೀತಿ ತಯಾರಿಸಿದ ಕಲಾಕೃತಿಗಳನ್ನು ಅಕ್ರಮ ಕಸ ವಿಲೇವಾರಿ ತಡೆಯುವುದಕ್ಕೆ ಬಳಸಿಕೊಳ್ಳಲು ಪ.ಪಂ. ಯೋಚಿಸಿತು. ಅತೀ ಹೆಚ್ಚು ರಸ್ತೆ ಬದಿಯಲ್ಲಿ ಕಸ ಎಸೆಯುವ ಸ್ಥಳಗಳನ್ನು ಗುರುತಿಸಿ ಕಲಾಪಾಯಿಂಟ್‌ಗಳನ್ನು ನಿರ್ಮಿಸಲು ಮುಂದಾಯಿತು. ಹೀಗೆ ಈ ಸುಂದರ ಕಲಾಕೃತಿಯನ್ನು ನೋಡಿದಾಗ ಅಕ್ರಮವಾಗಿ ನಿತ್ಯ ಕಸ ಎಸೆಯುವವರಿಗೆ ಕಸ ಎಸೆಯಲು ಮನಸ್ಸಾಗುವುದಿಲ್ಲ ಎನ್ನುವುದು ಪ.ಪಂ. ಯೋಜನೆಯಾಗಿದೆ.

ಕಸದಿಂದ ರಸ ಸೃಷ್ಟಿಸುವ ಕಾರ್ಮಿಕ
ಮೊದಲಿಗೆ ಕಸದ ರಾಶಿಯಲ್ಲಿ ಸಿಕ್ಕ ಬಿಯರ್‌ ಬಾಟಲ್‌, ಫಿಲ್ಟರ್‌ ನೀರಿನ ಡಬ್ಬಗಳು, ಟಯರ್‌, ಗರಟೆ, ಪುಟ್ಟ ಮಿಷನ್‌, ಹಾಳಾದ ಹೂದಾನಿ ಇದನ್ನೆಲ್ಲ ಆರಿಸಿಕೊಂಡರು. ಅನಂತರ ಇವುಗಳಿಗೆ ಸುಂದರವಾಗಿ ಬಣ್ಣ ಬಳಿಯಲು ಆರಂಭಿಸಿದರು. ಇದೀಗ ಆ ತ್ಯಾಜ್ಯಗಳೆಲ್ಲ ಜಿರಾಫೆ, ಬಾತುಕೋಳಿ, ದಸಾರ ಅಂಬಾರಿ, ಕಾಪು ದೀಪಸ್ತಂಭ, ಹೂದಾನಿ ಮುಂತಾದ ಸುಂದರ ಕಲಾಕೃತಿ ಗಳಾಗಿ ಮೈದುಂಬಿದೆ. ಈ ಯೋಜನೆಗೆ ಯಾವುದೇ ಹಣ ಹೂಡಿಕೆಯಾಗಿಲ್ಲ ಎನ್ನುವುದು ಮತ್ತೂಂದು ವಿಶೇಷ. ಕಲಾಕೃತಿಯ ಕಚ್ಛಾವಸ್ತುಗಳೆಲ್ಲವೂ ಕಸದಲ್ಲೇ ದೊರೆತಿದ್ದು, ಪ.ಪಂ.ನಲ್ಲೇ ಸಿಕ್ಕ ಅಲ್ಲಿದುಳಿದ ಪೇಯಿಂಟ್‌ ಗಳನ್ನೇ ಬಳಸಿಕೊಳ್ಳಲಾಗಿದೆ. ಮುಂದೆ ಹೆಚ್ಚಿನ ಕಲಾಕೃತಿಗಳನ್ನು ತಯಾರಿಸುವ ಸ್ವಲ್ಪ ಮಟ್ಟಿನ ಹಣ ಬೇಕಾಗಬಹುದು.

Advertisement

ಇನ್ನೂ ಹತ್ತು ಕಡೆ ಯೋಜನೆ
ಪೌರಕಾರ್ಮಿಕ ಸೂರ್ಯ ಅವರು ಸಾಕಷ್ಟು ಪ್ರತಿಭೆ ಹೊಂದಿದ್ದು ಇನ್ನೂ ಬೇರೆ- ಬೇರೆ ಮಾದರಿಯ ಕಲಾಕೃತಿ ರಚಿಸುವ ಉತ್ಸಾಹದಲ್ಲಿದ್ದಾರೆ.ಹೀಗಾಗಿ ಪ.ಪಂ. ವ್ಯಾಪ್ತಿಯಲ್ಲಿ ಅತೀ ಹೆಚ್ಚು ಕಸ ಬಿಸಾಡುವ ಹತ್ತು ಸ್ಥಳವನ್ನು ಗುರುತಿಸಿ ಇದೇ ರೀತಿ ಕಲಾಕೃತಿ ಪಾಯಿಂಟ್‌ಗಳನ್ನು ನಿರ್ಮಿಸುವ ಯೋಜನೆ ಪ.ಪಂ.ಗಿದೆ.

ಇದನ್ನು ಪ್ರಾಯೋಗಿಕವಾಗಿ ಗುಂಡ್ಮಿಯಲ್ಲಿ ವರ್ಷದ ಹಿಂದೆ ಕಾರ್ಯಗತಗೊಳಿಸಿದ್ದು, ಇದೀಗ ಕಾರ್ಕಡ ವಾರ್ಡ್‌ ನಲ್ಲಿ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದೆ. ಇವರ ಈ ಕಾರ್ಯಕ್ಕೆ ಸಿಬಂದಿ ಭೋಪೇಶ್‌ ಹಾಗೂ ಶಿವರಾಜ್‌ ಸಹಕಾರ ನೀಡುತ್ತಿದ್ದಾರೆ.

ಹಿಂದೊಮ್ಮೆ ಜಿ.ಪಂ. ರೂಪಿಸಿತು
ರಸ್ತೆ ಬದಿಯಲ್ಲಿ ಕಸಎಸೆಯುವ ಸ್ಥಳದಲ್ಲಿ ಇದೇ ರೀತಿ ಕಲಾಕೃತಿ ಪಾಯಿಂಟ್‌ ನಿರ್ಮಿಸುವ ಯೋಜನೆಯನ್ನು ಉಡುಪಿ ಜಿ.ಪಂ. ರೂಪಿಸಿ ಹಲವು ಕಡೆಗಳಲ್ಲಿ ಕಾರ್ಯಗತಗೊಳಿಸಿತ್ತು. ಆದರೆ, ಇದರ ಕಚ್ಚಾವಸ್ತು, ಸಿಬಂದಿ ಪ್ರತ್ಯೇಕವೇ ಇತ್ತು. ಹೀಗಾಗಿ ನಿರ್ವಹಣೆ ಕೊರತೆಯಿಂದ ನನೆಗುದಿಗೆ ಬಿದ್ದಿತ್ತು.

ಸೂರ್ಯ ಅವರ ಪ್ರತಿಭೆ ನೋಡಿ ತುಂಬಾ ಖುಷಿಯಾಗಿದೆ. ಇಂತಹ ಕಾರ್ಮಿಕರು ತುಂಬಾ ಅಪರೂಪ. ಅವರ ಯೋಚನೆ-ಯೋಜನೆಗಳಿಗೆ ನಾವು ಸಹಕಾರ ನೀಡಲಿದ್ದೇವೆ ಎಂದು ಸಾಲಿಗ್ರಾಮ ಪ.ಪಂ. ಮುಖ್ಯಾಧಿಕಾರಿ ಅಜಯ್‌ ಭಂಡಾರ್ಕರ್‌ ತಿಳಿಸಿದ್ದಾರೆ.

ಬಾಲ್ಯದ ಕನಸು ನನಸಾಗಿದೆ
ನನಗೆ ಬಾಲ್ಯದಿಂದಲೂ ಕಲೆಯ ಬಗ್ಗೆ ತುಂಬಾ ಆಸಕ್ತಿ. ಕಸದ ರಾಶಿಯಲ್ಲಿನ ಕೆಲವು ವಸ್ತುಗಳನ್ನು ನೋಡಿದಾಗ ಇವುಗಳಿಂದ ಯಾಕೆ ಕಲಾಕೃತಿ ರಚಿಸಬಾರದು ಎನ್ನುವ ಮನಸಾಗುತ್ತಿತ್ತು. ಅನಂತರ ಮುಖ್ಯಾಧಿಕಾರಿ ಅಜಯ್‌ ಸರ್‌, ಕಿರಿಯ ಆರೋಗ್ಯ ಸಹಾಯಕಿ ಮಮತಾ ಮೇಡಂ ಸಲಹೆ ಮೇರೆಗೆ ಪ.ಪಂ.ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ ಪೂಜಾರಿ ಹಾಗೂ ಸದಸ್ಯರ ಸಹಕಾರದಲ್ಲಿ ಕಲಾಕೃತಿ ಪಾಯಿಂಟ್‌ ನಿರ್ಮಾಣಕ್ಕೆ ಪ್ರಯತ್ನಿಸಿದ್ದು ಅದು ಯಶಸ್ವಿಯಾಗಿದ್ದು ಖುಷಿ ಎನಿಸಿದೆ.
-ಸೂರ್ಯ, ಪೌರಕಾರ್ಮಿಕರು

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next