Advertisement

ಅಂಡರ್‌ಪಾಸ್‌ಗಳಲ್ಲಿ ಕಸದ ಕಾರುಬಾರು

12:42 AM Aug 30, 2019 | Team Udayavani |

ಬೆಂಗಳೂರು: ಇಲ್ಲಿ ದಾರಿಯೊಂದು ಮೂರು ಬಾಗಿಲು. ಮಳೆ ಬಂದರೆ ಇರೋ ದಾರಿಯೂ ಬಂದ್‌! ಹೊಸಕೆರೆಹಳ್ಳಿ-ರಾಜರಾಜೇಶ್ವರಿ ನಗರದ ನಡುವೆ ಸಂಪರ್ಕ ಕಲ್ಪಿಸಲು ಪ್ರಮೋದಾ ಲೇಔಟ್‌ ಬಳಿ ಒಂದೇ ಕಡೆ ಮೂರು ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿದೆ. ಹೆಸರಿಗೆ ಇವು ಸಂಚಾರ ಮಾರ್ಗಗಳು. ಆದರೆ, ವಾಸ್ತವವಾಗಿ ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ. ಮನೆಯಲ್ಲಿ ಹಸಿ ಮತ್ತು ಒಣ ತ್ಯಾಜ್ಯ ಇರುವಂತೆಯೇ ಇಲ್ಲಿಯೂ ನಿರ್ಮಾಣ ತ್ಯಾಜ್ಯ ಮತ್ತು ಸಾಮಾನ್ಯ ತ್ಯಾಜ್ಯ ಎಂದು ವಿಂಗಡಿಸಲಾಗಿದೆ. ಮತ್ತೂಂದರಲ್ಲಿ ಮಳೆ ನೀರು ಹರಿಯಲು ಮೀಸಲಿಡಲಾಗಿದೆ!

Advertisement

ಪ್ರತಿ ನಿತ್ಯ 40 ಸಾವಿರಕ್ಕೂ ಹೆಚ್ಚು ಜನ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಒಂದರಲ್ಲಿ ನಿರ್ಮಾಣ ತ್ಯಾಜ್ಯ, ಮತ್ತೂಂದರಲ್ಲಿ ಸಾಮಾನ್ಯ ತ್ಯಾಜ್ಯ ಸುರಿಯಲಾಗಿದೆ. ಇದರಿಂದ ಉದ್ದೇಶಿತ ಅಂಡರ್‌ ಪಾಸ್‌ “ಲೆಕ್ಕಕ್ಕುಂಟು ಸೇವೆಗೆ ಇಲ್ಲ’ ಎನ್ನುವಂತಾಗಿದೆ. ಏಕೆಂದರೆ ಮೂರು ಮಾರ್ಗಗಳಿದ್ದರೂ, ಸದ್ಯಕ್ಕೆ ಸಂಚಾರಕ್ಕೆ ಯೋಗ್ಯವಾಗಿರುವುದು ಕೇವಲ ಒಂದು. ಇನ್ನು ಮಳೆಗಾಲದಲ್ಲಿ ಆಗಾಗ್ಗೆ ಆ ದ್ವಾರವೂ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿರುತ್ತದೆ. ಇದರಿಂದ ಜನ ಪರದಾಡುವಂತಾಗಿದೆ. ಮೈಸೂರು ರಸ್ತೆಯಿಂದ ಕನಕಪುರ ಮತ್ತು ಹೊಸೂರು ರಸ್ತೆಗೆ ಸಂಚರಿಸುವ ಸಾವಿರಾರು ವಾಹನಗಳು ಈ ಮಾರ್ಗವನ್ನೇ ಬಳಸುತಿದ್ದು, ನಿತ್ಯ ಒಂದಲ್ಲಾ ಒಂದು ರೀತಿಯ ಸಮಸ್ಯೆ ಎದುರಿಸುತಿದ್ದಾರೆ.

ನಾಯಿಗಳ ಹಾವಳಿ: ಕಸದ ಬೆನ್ನಲ್ಲೇ ನಾಯಿಗಳ ಹಾವಳಿ ಕೂಡ ಇಲ್ಲಿ ಹೆಚ್ಚಾಗಿದೆ. ಅಂಡರ್‌ ಪಾಸ್‌ ಸುತ್ತಲಿನ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಬೀದಿ ನಾಯಿಗಳು ವಾಹನ ಸವಾರರನ್ನು ಕಾಡುತ್ತವೆ. ಹೋಟೆಲ್‌ ತ್ಯಾಜ್ಯಕೂಡ ಇಲ್ಲಿ ಸುರಿಯುತ್ತಿರುವುದು ಇದಕ್ಕೆ ಕಾರಣ. ಹಲವು ಬಾರಿ ಇಲ್ಲಿ ಅವುಗಳು ದಾಳಿ ನಡೆಸಿದ್ದೂ ಇದೆ ಎನ್ನುತ್ತಾರೆ ಸವಾರರು. ಪಾಲಿಕೆಯಿಂದ ನಿರ್ಮಾಣ ತ್ಯಾಜ್ಯ ತೆರವುಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ಈವರೆಗೆ ಆರು ಬಾರಿ ತೆರವುಗೊಳಿಸಲಾಗಿದೆ. ಬೆಳಿಗ್ಗೆ ಕಸ ತೆರವುಗೊಳಿಸಿದರೆ ರಾತ್ರಿ ಮತ್ತೆ ಅದೇ ಸ್ಥಳದಲ್ಲೇ ಕಸ ಸುರಿಯುತಿದ್ದಾರೆ. ಸ್ವಲ್ಪ ಕಸವಾದರೆ, ಬಿಬಿಎಂಪಿ ಆರೋಗ್ಯ ವಿಭಾಗವೇ ತೆರವುಗೊಳಿಸುತ್ತದೆ. ಆದರೆ, ಇಲ್ಲಿ ಸುರಿದಿರುವ ಕಸ ತೆರವುಗೊಳಿಸಲು ಪ್ರತ್ಯೇಕ ಟೆಂಡರ್‌ ಆಹ್ವಾನಿಸಬೇಕಿದೆ. ಇದಕ್ಕೆ ಪಾಲಿಕೆಯ ಅನುಮತಿ ಪಡೆಯಬೇಕಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಮಾರ್ಷಲ್‌ಗ‌ಳ ಕಾರ್ಯಾಚರಣೆ: ಸದ್ಯದಲ್ಲೇ ಬಿಬಿಎಂಪಿ ಮಾರ್ಷಲ್‌ಗ‌ಳು ಕಾರ್ಯೋನ್ಮುಖರಾಗಲಿದ್ದು, ಕಸ ಸುರಿಯುತ್ತಿರುವ ಕಿಡಿಗೇಡಿಗಳ ವಿರುದ್ದ ಕ್ರಿಮಿನಲ್‌ ಕೇಸು ದಾಖಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ಬಿಬಿಎಂಪಿ ಜಂಟಿ ಆಯುಕ್ತ ಸಫ‌ìರಾಜ್‌ ಖಾನ್‌ ಎಚ್ಚರಿಸಿದ್ದಾರೆ.

ಯಾರ್ಯಾರಿಗೆ ಅನುಕೂಲ?: ಮೈಸೂರು ರಸ್ತೆಯಲ್ಲಿ ಸಹಜವಾಗಿಯೇ ಟ್ರಾಫಿಕ್‌ ಹೆಚ್ಚಾಗಿರುತ್ತದೆ. ಹಾಗಾಗಿ ಕೆಂಗೇರಿ, ರಾಜರಾಜೇಶ್ವರಿನಗರ, ಚನ್ನಸಂದ್ರ, ಕೃಷ್ಣಪ್ಪ ಲೇಔಟ್‌, ಪ್ರಮೋದ ಲೇಔಟ್‌ನಿಂದ ಹೊಸಕೆರೆಹಳ್ಳಿ, ಗಿರಿನಗರ, ಬಸವನಗುಡಿ, ಬನಶಂಕರಿ, ಸಾರಕ್ಕಿ, ಜಯನಗರ, ಜೆ.ಪಿ.ನಗರ, ಸಿಲ್ಕ್ ಬೋರ್ಡ್‌, ಎಲೆಕ್ಟ್ರಾನಿಕ್‌ ಸಿಟಿ, ಹೊಸೂರು ರಸ್ತೆ ಮತ್ತು ಕನಕಪುರ ರಸ್ತೆ ಕಡೆ ಹೋಗುವ ಬಹುತೇಕ ಪ್ರಯಾಣಿಕರು ಈ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ದಾರಿಯನ್ನು ಬಿಟ್ಟರೆ ಮೈಸೂರು ಮುಖ್ಯರಸ್ತೆ ಮೂಲಕ ಹೋಗಬೇಕಾಗುತ್ತದೆ.

Advertisement

ಒಂದೊಂದು ಕತೆ: ಏಳು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಮೂರು ಮಾರ್ಗಗಳು ಒಂದೊಂದು ಕತೆ ಹೇಳುತ್ತವೆ.

ಅಂಡರ್‌ ಪಾಸ್‌ 1: ನಿರ್ಮಾಣ ತ್ಯಾಜ್ಯದಿಂದ ಮುಚ್ಚಿಹೋಗಿದ್ದು, ಹಲವು ವರ್ಷಗಳಿಂದ ಇಲ್ಲಿ ಕಸ ತುಂಬಿಸಲಾಗಿದೆ. ಇತ್ತೀಚೆಗೆ ಇಲ್ಲಿ ಕೋಳಿ ತ್ಯಾಜ್ಯ, ಹೋಟೆಲ್‌ ತ್ಯಾಜ್ಯ ಸೇರುತ್ತಿದೆ. ತ್ಯಾಜ್ಯದ ಮೇಲೆ ಗಿಡ-ಬಳ್ಳಿಗಳು ಸೊಂಟದವರೆಗೆ ಬೆಳೆದುನಿಂತು, ಕ್ರಿಮಿ, ಕೀಟಗಳ ತಾಣವಾಗಿದೆ. ಅಂಡರ್‌ಪಾಸ್‌ ಆಚೆಗಿನ ದಾರಿ ಕಾಣುವುದಿಲ್ಲ.

ಅಂಡರ್‌ ಪಾಸ್‌ 2: ಸಾಮಾನ್ಯ ತ್ಯಾಜ್ಯದೊಂದಿಗೆ ನಿರ್ಮಾಣ ತ್ಯಾಜ್ಯವೂ ಸೇರಿಕೊಳ್ಳುತ್ತಿದ್ದು, ಒಂದು ತಿಂಗಳಿಂದ ಇಲ್ಲಿ ಬೆಂಗಳೂರು ಜಲಮಂಡಳಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ರಸ್ತೆ ತುಂಬೆಲ್ಲಾ ದೊಡ್ಡ ದೊಡ್ಡ ಪೈಪ್‌, ರಿಂಗ್‌, ಸ್ಲಾಬ್‌ಗಳು ಹರಡಿವೆ. ರಸ್ತೆಯ ಸಂಚಾರ ಕೂಡ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಅಂಡರ್‌ ಪಾಸ್‌ 3: ಇದೊಂದು ಮಾತ್ರ ಸಂಚಾರಕ್ಕೆ ಲಭ್ಯವಾಗಿದ್ದು, ಮಳೆ ಬಂದರೆ ಇದು ಕೂಡ ಬಂದ್‌ ಆಗಲಿದೆ. ಈಗಾಗಲೇ ಸಂಪೂರ್ಣವಾಗಿ ಗುಂಡಿಗಳಿಂದ ತುಂಬಿದೆ. ಅಂಡರ್‌ಪಾಸ್‌ನಲ್ಲಿ ಬೀದಿ ದೀಪಗಳಿಲ್ಲ. ನಾಯಿಗಳ ಹಾವಳಿ ಬೇರೆ.

ನಿತ್ಯ 40 ಸಾವಿರಕ್ಕೂ ಹೆಚ್ಚು ಮಂದಿ ಈ ಅಂಡರ್‌ಪಾಸ್‌ ಬಳಸುತಿದ್ದು, ರಾತ್ರಿ ನಾಯಿಗಳ ಕಾಟ ಅಧಿಕ. ಈ ಬಗ್ಗೆ ಪಾಲಿಕೆ ಸದಸ್ಯರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಮಳೆ ಬಂದರೆ ರಸ್ತೆ ಸಂಪೂರ್ಣವಾಗಿ ಮುಚ್ಚಿಹೋಗುತ್ತದೆ. ಕೂಡಲೇ ಮೂರು ಅಂಡರ್‌ಪಾಸ್‌ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕಿದೆ.
-ಬದ್ರಿನಾಥ್‌, ಸ್ಥಳೀಯ ನಿವಾಸಿ

ಎರಡು ಅಂಡರ್‌ಪಾಸ್‌ಗಳು ಮುಚ್ಚಿರುವ ಕಾರಣ “ಪೀಕ್‌ ಅವರ್‌’ಗಳಲ್ಲಿ ಟ್ರಾಫಿಕ್‌ ಹೆಚ್ಚಾಗುತ್ತಿದೆ. ಕೆಲ ಸಲ ಈ ಅಂಡರ್‌ಪಾಸ್‌ ಮಾರ್ಗದಲ್ಲಿ ಯಾವುದಾದರೂ ವಾಹನ ಕೆಟ್ಟು ನಿಂತರೆ, ಹೊರಹೋಗಲು ಅರ್ಧ ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ.
-ಶ್ರೀನಿವಾಸ್‌, ವಾಹನ ಸವಾರ

ಮೂರೂ ಮಾರ್ಗಗಳು ಸಂಚಾರಕ್ಕೆ ಲಭ್ಯವಾದರೆ, ನಿತ್ಯ ಒಂದರಿಂದ ಎರಡು ಗಂಟೆಗಳ ಸಂಚಾರ ಸಮಯ ಕಡಿಮೆಯಾಗುತ್ತದೆ. ಅಂಡರ್‌ಪಾಸ್‌ನಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಿ, ಕಸ ತೆರುವುಗೊಳಿಸಿದರೆ ಮಳೆ ನೀರು ನಿಲ್ಲುವುದಿಲ್ಲ. ಎರಡು ವರ್ಷಗಳ ಹಿಂದೆ ಅಂಡರ್‌ಪಾಸ್‌ ಚೆನ್ನಾಗಿತ್ತು.
-ರಾಜೇಶ್‌, ವಾಹನ ಸವಾರ

* ಲೋಕೇಶ್‌ ರಾಮ್‌

Advertisement

Udayavani is now on Telegram. Click here to join our channel and stay updated with the latest news.

Next