Advertisement

ಗಾಂಧಿ ಬದುಕು ಸಾರಲು ರಂಗ ಪಯಣ

11:13 AM Aug 01, 2018 | Team Udayavani |

ಬೆಂಗಳೂರು: ಮಹಾತ್ಮಾ ಗಾಂಧೀಜಿ ರಾಷ್ಟ್ರಪಿತ ಆಗಿದ್ದು ಹೇಗೆ ಎಂಬುದೂ ಒಳಗೊಂಡಂತೆ ಗಾಂಧೀಜಿಯವರ ಜೀವನದ ಪ್ರಮುಖ ಘಟ್ಟಗಳನ್ನು ಜನರ ಮುಂದೆ ತೆರೆದಿಡುವ ಪ್ರಯತ್ನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.

Advertisement

ರಾಷ್ಟ್ರಪಿತ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಪೂರ್ವಭಾವಿಯಾಗಿ ಇಲಾಖೆಯು ಗಾಂಧಿ 150 ರಂಗಪಯಣ ಯೋಜನೆ ರೂಪಿಸಿದೆ. ಬೊಳುವಾರು ಮೊಹಮ್ಮದ್‌ ಕುಂಞ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ “ಪಾಪು ಗಾಂಧಿ ಗಾಂಧಿ ಪಾಪು ಆದ ಕತೆ’ ಕಾದಂಬರಿಯನ್ನು ರಂಗರೂಪಕ್ಕಿಳಿಸಿ ಪ್ರದರ್ಶಿಸುವ ಯೋಜನೆ ಇದಾಗಿದೆ. ಡಾ.ಶ್ರೀಪಾದಭಟ್‌ ಅವರ ನಿರ್ದೇಶನದಲ್ಲಿ ರಂಗ ರೂಪಕ್ಕೆ ಅಳವಡಿಸುತ್ತಿರುವ ಪಾಪು ಗಾಂಧಿ ಗಾಂಧಿ ಪಾಪು ಆದ ನಾಟಕ ಧಾರವಾಡ ರಂಗಾಯಣ ನಿರ್ದೇಶಕ ಪ್ರಮೋದ್‌ ಶಿಗ್ಗಾಂವ್‌ ಅವರ ನಿರ್ವಹಣೆಯಲ್ಲಿ ಮೂಡಿಬರಲಿದೆ.

ಒಟ್ಟು ಐದು ತಿಂಗಳ ಅವಧಿಯ ಈ ರಂಗಪಯಣಕ್ಕೆ ಆ.8ರಂದು ಧಾರವಾಡದ ರಂಗಾಯಣದಲ್ಲಿ ಚಾಲನೆ ನೀಡಲಾಗುವುದು. ಬಳಿಕ ಒಂದು ತಂಡ ಉತ್ತರ ಕರ್ನಾಟಕದೆಡೆಗೆ ಹಾಗೂ ಇನ್ನೊಂದು ತಂಡ ದಕ್ಷಿಣ ಕರ್ನಾಟಕದೆಡೆ ರಂಗ ಸುತ್ತಾಟ ನಡೆಸಲಿದೆ.
 
ಆ.8ರಿಂದ ಡಿ.15ರವರೆಗೆ ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ತಲಾ ಎರಡು ಪ್ರದರ್ಶನ ನೀಡಲಾಗುವುದು. ಬೆಳಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಂಜೆ ವೇಳೆಗೆ ಸಾರ್ವಜನಿಕರಿಗಾಗಿ ನಾಟಕ ಪ್ರದರ್ಶಿಸಲಾಗು ವುದು.

ರಾಜ್ಯಾದ್ಯಂತ ಸುಮಾರು 450 ರಿಂದ 500 ಪ್ರದರ್ಶನಗಳನ್ನು ನೀಡುವ ಗುರಿ ಹೊಂದಲಾಗಿದೆ. ಯುವ ಸಮುದಾಯವನ್ನು ಗಮನದಲ್ಲಿ ಇರಿಸಿಕೊಂಡು ರೂಪಿಸಲಾಗಿರುವ ಈ ನಾಟಕ ಗಾಂಧೀಜಿಯ ಜೀವನ ಚರಿತ್ರೆಯ ಪ್ರಮುಖ ಘಟ್ಟಗಳನ್ನು ಒಳಗೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ನಾಟಕದಲ್ಲಿ ತೆರೆ ಮೇಲೆ ಹಾಗೂ ತೆರೆ ಮರೆಯಲ್ಲಿ ಕಾರ್ಯನಿರ್ವಹಿಸುವ ಕಲಾವಿದರು, ತಂತ್ರಜ್ಞರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರೋತ್ಸಾಹ ಧನ ನೀಡಲಾಗುವುದು. ಪುರುಷ ಕಲಾವಿದರಿಗೆ 10 ಸಾವಿರ ರೂ. ಹಾಗೂ ಮಹಿಳಾ ಕಲಾವಿದರಿಗೆ ಮತ್ತು ತಾಂತ್ರಿಕ ಸಿಬ್ಬಂದಿಗೆ 12 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು
ಎಂದೂ ಅವರು ಹೇಳಿದ್ದಾರೆ. 

Advertisement

ತರಬೇತಿ ಆರಂಭ: ಈಗಾಗಲೇ ನಾಟಕ ಪ್ರದರ್ಶ ನಕ್ಕೆ 2 ತಂಡಗಳಿಗೆ ತರಬೇತಿ ನೀಡಲಾಗುತ್ತಿದೆ. ಹಾವೇರಿಯ ಶೇಷಗಿರಿ ಹಳ್ಳಿಯಲ್ಲಿ ಒಟ್ಟು 30 ಕಲಾವಿದರಿಗೆ ಜು.8ರಿಂದ ತರಬೇತಿ ನೀಡಲಾಗುತ್ತಿದೆ. 

ಅ.2ರಂದು ನಗರದಲ್ಲಿ ಪ್ರದರ್ಶನ
2019ಕ್ಕೆ ಗಾಂಧೀಜಿಯವರು ಹುಟ್ಟಿ 150 ವರ್ಷ ಆಗುತ್ತದೆ. ಹೀಗಾಗಿ ಅವರ ಕುರಿತು ಜನರಿಗೆ ಇನ್ನಷ್ಟು ಮಾಹಿತಿ ನೀಡುವ ಉದ್ದೇಶದಿಂದ ರಂಗ ಪಯಣ ಆಯೋಜಿಸಲಾಗಿದೆ. ಅ.2ರಂದು ಗಾಂಧಿ ಜಯಂತಿಯಂದು ಎರಡು ತಂಡಗಳು ರಾಜಧಾನಿ ಬೆಂಗಳೂರಿನಲ್ಲಿ ನಾಟಕ ಪ್ರದರ್ಶನ ನೀಡಲಿವೆ. ಅಂದು ಬೆಳಗ್ಗೆ ಗಾಂಧಿ ಭವನದಲ್ಲಿ ಹಾಗೂ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next