ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ತಾಲೂಕಿನ ಹಲವು ಕೆರೆಗಳು ಸಂಪೂರ್ಣ ಬತ್ತಿ ಬರಿದಾಗಿವೆ. ಗಜೇಂದ್ರಗಡದಾದ್ಯಂತ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದೆ. ಇದು ರೈತಾಪಿ ವಲಯದಲ್ಲಿ ತಳಮಳ ಮೂಡಿಸಿದೆ.
ಗಜೇಂದ್ರಗಡ: ಸಮರ್ಪಕ ಮಳೆ ಬಾರದ ಹಿನ್ನೆಲೆ ತಾಲೂಕಿನ ಹಲವು ಗ್ರಾಮಗಳ ಜನತೆಯ ಜಲ ಜೀವನಾಡಿಯಾಗಿರುವ ರೈತ ಕಾಯಕ ಕೆರೆಗಳು ಸಂಪೂರ್ಣ ಬತ್ತಿ ಬರಿದಾಗಿವೆ. ತಾಲೂಕಿನಾದ್ಯಾಂತ ಹಿಂದೆಂದು ಕಂಡರಿಯದ ರೀತಿಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದೆ. ಕೆರೆ-ಕಟ್ಟೆಗಳು ಹಾಗೂ ಹಳ್ಳ-ಕೊಳ್ಳಗಳು ನೀರಿಲ್ಲದೇ ಒಣಗಿ ನಿಂತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ. ಬಯಲುಸೀಮೆ ನಾಡಿನಲ್ಲಿ ಆವರಿಸಿರುವ ಬರದ ಕರಿನೆರಳಿನಿಂದಾಗಿ ಕೆರೆಗಳು ಕಾಲಗರ್ಭ ಸೇರುವ ಹಂತ ತಲುಪಿರುವುದು ರೈತಾಪಿ ವಲಯದಲ್ಲಿ ತಳಮಳ ಮೂಡಿಸಿದೆ.
ಸಮೀಪದ ಬೆಣಚಮಟ್ಟಿ, ನಾಗರಸಕೊಪ್ಪ, ಜಿಗೇರಿ, ಕುಂಟೋಜಿ, ನಾಗೇಂದ್ರಗಡ, ದಿಂಡೂರು ಗ್ರಾಮ ಸೇರಿ ತಾಲೂಕಿನಲ್ಲಿರುವ ರೈತ ಕಾಯಕ ಕೆರೆಗಳು ಬತ್ತಿವೆ. ಈ ಕೆರೆಗಳು ಸುತ್ತಲಿನ ಸಾವಿರಾರು ಎಕರೆ ಹೊಲಗಳಿಗೆ ಜೀವನಾಡಿಯಾಗಿವೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಕೆರೆಗಳಲ್ಲಿ ನೀರು ಸಂಗ್ರಹವಾಗಿಲ್ಲ. ಇನ್ನು ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿ ಕುಡಿಯುವ ನೀರಿಗಾಗಿ ನಿತ್ಯ ಪರದಾಡುವಂತಾಗಿದೆ. ಇದರಿಂದ ಜಾನುವಾರುಗಳ ಸ್ಥಿತಿಯಂತೂ ಹೇಳತೀರದು. ಅಲ್ಲದೇ ಕುರಿ-ಮೇಕೆಗಳು ನೀರಿಗಾಗಿ ತೋಟಗಳಲ್ಲಿರುವ ಪಂಪ್‌ಸೆಟ್ ಬಳಿ ನಿರ್ಮಿಸಿ ನೀರಿನ ತೊಟ್ಟಿಗಳನ್ನು ಹುಡುಕಬೇಕಿದೆ.
ದೊಡ್ಡಮೇಟಿ ಕನಸಿನ ಕೆರೆ: ತಲಾ ತಲಾಂತರಗಳಿಂದಲೂ ಮಳೆ ಆಶ್ರಿತ ಬೆಸಾಯವನ್ನೇ ಅವಲಂಬಿಸಿ ಸಂಕಷ್ಟದ ಬದುಕನ್ನು ಸಾಗಿಸುತ್ತಿರುವ ಈ ಭಾಗದ ರೈತ ಸಮುದಾಯದ ಕೃಷಿ ಶ್ರೀಮಂತಗೊಳಿಸಬೇಕೆಂದು ಮಹತ್ವಾಕಾಂಕ್ಷೆ ಹೊಂದಿದ್ದ ಅಂದಿನ ಶಾಸಕ ದಿ| ಅಂದಾನಪ್ಪ ದೊಡ್ಡಮೇಟಿ 1970ರ ದಶಕದಲ್ಲಿ ಸಣ್ಣ ನಿರಾವರಿ ಇಲಾಖೆ ವತಿಯಿಂದ ಸಮೀಪದ ನಾಗರಸಕೊಪ್ಪ, ಜಿಗೇರಿ, ಬೆಣಸಮಟ್ಟಿ, ಕುಂಟೊಜಿ, ನಾಗೇಂದ್ರಗಡ ಪಾರ್ವತಿಕೊಳ್ಳ, ದಿಂಡೂರ ಸೇರಿ ತಾಲೂಕಿನಲ್ಲಿ ಹಲವಾರು ಬೃಹತ್ ಕೆರೆಗಳನ್ನು ನಿರ್ಮಿಸಿದ್ದರು. ಇದರಿಂದ 80 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಭೂ ಪ್ರದೇಶ ನೀರಾವರಿಯಿಂದ ಕಂಗೊಳಿಸುತ್ತಿತ್ತು. ಆದರಿಂದ ಮಳೆಯ ಅಭಾವದಿಂದ ರೈತ ಕಾಯಕ ಕೆರೆಗಳು ಬರಿದಾಗಿವೆ.
ರೈತ ಕಾಯಕ ಕೆರೆಗಳ ವಿಸ್ತೀರ್ಣ : ಜಿಗೇರಿ ಕೆರೆ 151 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, 22.41 ಎಂಸಿಎಫ್ (ಮಿಲಿಯನ್ ಕ್ಯೂಬಿಕ್ ಫೀಟ್) ನೀರು ಸಂಗ್ರಹ ಸಾಮರ್ಥ್ಯ ಜೊತೆ 34.80 ಹೆಕ್ಟೇರ್ ಹಿನ್ನೀರ ಸಂಗ್ರಹ ಸಾಮರ್ಥ್ಯ ಹೊಂದಿದೆ. ನಾಗೇಂದ್ರಗಡ ಕೆರೆ 101 ಹೆಕ್ಟೇರ್ ವಿಸ್ತೀರ್ಣವಿದ್ದು, 12.83 ಎಂ.ಸಿ.ಎಫ್ ನೀರು ಸಂಗ್ರಹ ಸಾಮರ್ಥ್ಯ ಮತ್ತು 54.83 ಹಿನ್ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ನಾಗರಸಕೊಪ್ಪ ಕೆರೆ 254 ಹೆಕ್ಟೇರ್ ವಿಸ್ತೀರ್ಣವಿದ್ದು, 18.37 ಎಂಸಿಎಫ್ ನೀರು ಸಂಗ್ರಹ ಸಾಮರ್ಥ್ಯ, 28.02 ಹೆಕ್ಟೇರ್ ಹಿನ್ನೀರು ಸಾಮರ್ಥ್ಯ ಹೊಂದಿದೆ. ಪಾರ್ವತಿಕೊಳ್ಳ ಕೆರೆ-93 ಹೆಕ್ಟೇರ್ ವಿಸ್ತೀರ್ಣವಿದ್ದು, 11.50 ಎಂ.ಸಿ.ಎಫ್ ನೀರು ಸಂಗ್ರಹ ಸಾಮರ್ಥ್ಯ ಹಾಗೂ 21.63 ಹೆಕ್ಟೇರ್ ಹಿನ್ನೀರು ಸಂಗ್ರಹ ಸಾಮರ್ಥ್ಯವಿದೆ.
ಬೆಣಚಮಟ್ಟಿ ಕೆರೆ 174 ಹೆಕ್ಟೇರ್ ವಿಸ್ತೀರ್ಣವಿದ್ದು, 10.11 ಎಂ.ಸಿ.ಎಫ್ ನೀರು ಸಂಗ್ರಹ ಸಾಮರ್ಥ್ಯ ಮತ್ತು 22 ಹೆಕ್ಟೇರ್ ಹಿನ್ನೀರು ಸಾಮರ್ಥ್ಯ ಹೊಂದಿದೆ. ಇಂತಹ ಬೃಹತ್ ಪ್ರಮಾಣದಲ್ಲಿ ನೀರು ಸಂಗ್ರಹ ಮತ್ತು ಹಿನ್ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆರೆಗಳು ಇಂದು ಬತ್ತಿ ಬರಿದಾಗಿ ಕಾಲಗರ್ಭ ಸೇರುವ ಹಂತಕ್ಕೆ ತಲುಪಿವೆ.
ಕಳೆದ ನಾಲ್ಕಾರು ವರ್ಷದಿಂದ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆ ಆಗದ ಹಿನ್ನೆಲೆಯಲ್ಲಿ ಕೆರೆಗಳು ಸಂಪೂರ್ಣವಾಗಿ ಬತ್ತಿವೆ. ಜೊತೆಗೆ ಬಿಸಿಲಿನ ಬೇಗೆಗೆ ಜಮೀನಿನಲ್ಲಿ ಕೊರೆಯಿಸಿದ ಬೋರ್‌ವೆಲ್ ನಲ್ಲಿಯೂ ನೀರಿನ ಸಾಂದ್ರತೆ ಕ್ಷೀಣಿಸುತ್ತಿದೆ. ಹೀಗೆ ಮುಂದುವರೆದರೆ ಹನಿ ನೀರಿಗೂ ಪರದಾಡುವುದರಲ್ಲಿ ಸಂದೇಹವೇ ಇಲ್ಲ.
ಬಸಪ್ಪ ಕಲ್ಲಿಗನೂರ, ರೈತ
ಕೃಷ್ಣಾ ಬಿಸ್ಕಿಂನ ವಿದ್ಯುತ್ತಿಕರಣ ಕಾಮಗಾರಿ ಈಗಾಗಲೇ ಮುಗಿಯುವ ಹಂತದಲ್ಲಿದೆ. ಅಲ್ಲಿಂದ ಹರಿ ಬಿಡುವ ನೀರು ಹೆಚ್ಚುವರಿಯಾಗಿ ಕಲಾಲಬಂಡಿಗೆ ಬರುತ್ತದೆ. ಆ ನೀರನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಭಾಗದ ಕೆರೆಗಳಿಗೆ ತುಂಬಿಸುವ ಕಾರ್ಯಕ್ಕೆ ಜನಪ್ರತಿನಿಧಿಗಳು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಯೋಜನೆ ರೂಪಿಸಲು ಮುಂದಾಗದಿದ್ದರೆ ಉಗ್ರ ಹೋರಾಟ ಮಾಡಲಾಗುವುದು.
ಎಂ.ಎಸ್. ಹಡಪದ, ಸಿಪಿಐ(ಎಂ) ಮುಖಂಡ
ಡಿ.ಜಿ. ಮೋಮಿನ್