Advertisement

ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣ

04:31 PM May 12, 2018 | |

ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಮೇ 12 ರಂದು ಮತದಾನ ನಡೆಯಲಿದ್ದು, ಈಗಾಗಲೇ ನಿಗದಿಪಡಿಸಲಾದ ಮತಗಟ್ಟೆಗಳಿಗೆ ನಿಯೋಜಿತ ಸಿಬ್ಬಂದಿ ತೆರಳಿದರು. ಶಿವಮೊಗ್ಗದ ಎನ್‌ಇಎಸ್‌ ಪಪೂ ಕಾಲೇಜಿನಲ್ಲಿ ಮಸ್ಟರಿಂಗ್‌ ಕೇಂದ್ರ ತೆರೆಯಲಾಗಿದ್ದು, ಅಲ್ಲಿಂದ ಮತಪೆಟ್ಟಿಗೆಗಳೊಂದಿಗೆ ನಿಯೋಜಿತ ಸಿಬ್ಬಂದಿಗಳು ಶುಕ್ರವಾರ ಕರ್ತವ್ಯಕ್ಕೆ ತೆರಳಿದರು.

Advertisement

ಭದ್ರಾವತಿ ಸಂಚಿಹೊನ್ನಮ್ಮ ಪಪೂ ಕಾಲೇಜಿನಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರ, ತೀರ್ಥಹಳ್ಳಿ ಯು. ಆರ್‌. ಅನಂತಮೂರ್ತಿ ಕಾಲೇಜಿನಲ್ಲಿ ತೀರ್ಥಹಳ್ಳಿ ಕ್ಷೇತ್ರ, ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕಾರಿಪುರ ಕ್ಷೇತ್ರ, ಸೊರಬ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೊರಬ ಕ್ಷೇತ್ರ, ಸಾಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಗರ ಕ್ಷೇತ್ರ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ ಮಸ್ಟರಿಂಗ್‌, ಡಿಮಸ್ಟರಿಂಗ್‌ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಮಸ್ಟರಿಂಗ್‌, ಡಿಮಸ್ಟರಿಂಗ್‌ ಕೇಂದ್ರ ಸ್ಥಾಪಿಸಲಾಗಿದೆ. ಈ ಕೇಂದ್ರಗಳಿಂದ ಮತಗಟ್ಟೆಗಳಿಗೆ ಮತಪೆಟ್ಟಿಗೆಯನ್ನು ಚುನಾವಣಾ ಸಿಬ್ಬಂದಿ ಕೊಂಡೊಯ್ದರು.

ಮತದಾರರ ವಿವರ: ಜಿಲ್ಲೆಯಲ್ಲಿ ಒಟ್ಟು 14,26,208 ಮತದಾರರಿದ್ದಾರೆ. ಇದರಲ್ಲಿ ಪುರುಷರು 7,11,732, ಮಹಿಳೆಯರು 7,14,415 ಹಾಗು 61 ಮಂದಿ ಇತರರು ಮತದಾನದ ಹಕ್ಕು ಹೊಂದಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ 1756 ಮತಗಟ್ಟೆಗಳನ್ನು ತೆರೆಯಲಾಗಿದೆ. 

ಜಿಲ್ಲೆಯಲ್ಲಿ 9563 ಮತಗಟ್ಟೆ ಸಿಬ್ಬಂದಿ, 325 ಮೈಕ್ರೋ ಅಬ್ಸರ್‌ವರ್‌, 2 ಆದಿವಾಸಿ ಬೂತ್‌, 18 ಪಿಂಕ್‌ ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಪಿಂಕ್‌ ಮತಗಟ್ಟೆಗಳಿಗೆ ಸಂಪೂರ್ಣ ಪಿಂಕ್‌ ಬಣ್ಣ ಬಳಿಯಲಾಗಿದೆ. ಮಹಿಳೆಯರೇ ಮತಗಟ್ಟೆ ಸಿಬ್ಬಂದಿಗಳಾಗಿದ್ದು, ಅವರಿಗೆ ಪಿಂಕ್‌ ಬಣ್ಣದ ಸಮವಸ್ತ್ರ ನೀಡಲಾಗಿದೆ. ಮಹಿಳಾ ಮತದಾರರು ಹೆಚ್ಚಿರುವ ಕಡೆಗಳಲ್ಲಿ ಈ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಕಣದಲ್ಲಿರುವ ಅಭ್ಯರ್ಥಿಗಳು: ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅತಿ ಹೆಚ್ಚು 20 ಅಭ್ಯರ್ಥಿಗಳಿದ್ದರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಕಡಿಮೆ 7 ಮಂದಿ ಸ್ಪರ್ಧಿಸಿದ್ದಾರೆ. ಭದ್ರಾವತಿಯಲ್ಲಿ -14, ತೀರ್ಥಹಳ್ಳಿಯಲ್ಲಿ -8, ಶಿಕಾರಿಪುದಲ್ಲಿ-9,
ಸೊರಬ-8, ಸಾಗರ-8 ಒಟ್ಟು 74 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಎಲ್ಲರೂ ಮತ ಚಲಾಯಿಸಬಹುದು. ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಮತ ಚಲಾಯಿಸಲು ಈ ಕೆಳಗಿನ ಗುರುತಿನ ಚೀಟಿಗಳನ್ನು ಹಾಜರುಪಡಿಸಬಹುದಾಗಿದೆ.
 
ಡ್ರೈವಿಂಗ್‌ ಲೈಸೆನ್ಸ್‌, ಕೇಂದ್ರ, ರಾಜ್ಯ ಸರ್ಕಾರಿ ಉದ್ಯೋಗಿಗಳ ಭಾವಚಿತ್ರದ ಗುರುತಿನ ಚೀಟಿ, ಉದ್ಯೋಗ ಖಾತ್ರಿ ಸ್ಮಾರ್ಟ್‌ಕಾರ್ಡ್‌, ಕೇಂದ್ರ ಕಾರ್ಮಿಕ ಇಲಾಖೆ ವಿಮೆ ಸ್ಮಾರ್ಟ್‌ ಕಾರ್ಡ್‌, ಭಾವಚಿತ್ರವಿರುವ ಪಿಂಚಣಿ ದಾಖಲೆಗಳು, ಆಧಾರ್‌ ಕಾರ್ಡ್‌, ಸ್ಮಾರ್ಟ್‌ ಸೇರಿದಂತೆ ಚುನಾವಣಾ ಆಯೋಗ ನಿಗದಿಪಡಿಸಿರುವ ಗುರುತಿನ ಚೀಟಿ ಹಾಜರುಪಡಿಸಿ ಮತ ಚಲಾಯಿಸಬಹುದು.  

Advertisement
Advertisement

Udayavani is now on Telegram. Click here to join our channel and stay updated with the latest news.

Next