ಹುಬ್ಬಳ್ಳಿ: ಬರ ಪರಿಹಾರ ನಿಟ್ಟಿನಲ್ಲಿ ರಾಜ್ಯ ಸರಕಾರ ಎಷ್ಟು ಹಣ ಬಿಡುಗಡೆ ಮಾಡಿದೆ, ಆಯಾ ಜಿಲ್ಲಾಧಿಕಾರಿಗಳು ಎಷ್ಟು ಹಣ ವೆಚ್ಚ ಮಾಡಿದ್ದಾರೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಒತ್ತಾಯಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 165 ತಾಲೂಕುಗಳನ್ನು ಬರಪೀಡಿತವೆಂದು ರಾಜ್ಯ ಸರಕಾರವೇ ಘೋಷಣೆ ಮಾಡಿದೆ. ಬಹುತೇಕ ಕಡೆಗಳಲ್ಲಿ ಕುಡಿಯುವ ನೀರು, ಮೇವಿಗೆ ತೊಂದರೆ ಇದ್ದರೂ ಸರಕಾರದಿಂದ ಸಮರ್ಪಕ ಕ್ರಮ ಇಲ್ಲವಾಗಿದೆ. ನಿರ್ವಹಣೆ ಸಾಧ್ಯವಾಗದೆ ಜನರು ಜಾನುವಾರುಗಳನ್ನು ಕಟುಕರಿಗೆ ನೀಡುತ್ತಿದ್ದಾರೆ. ಸರಕಾರ ಉಚಿತವಾಗಿ ಮೇವು ನೀಡಲಿ ಇಲ್ಲವೇ ಗೋಶಾಲೆ ಆರಂಭಿಸಲಿ ಎಂದು ಒತ್ತಾಯಿಸಿದರು.
ವಾರಕ್ಕೊಮೆ ಕೂಲಿ ಕೊಡಿ: ಉದ್ಯೋಗ ಖಾತರಿ ಯೋಜನೆಯಲ್ಲಿ ತಿಂಗಳು-ಎರಡು ತಿಂಗಳಿಗೆ ಕೂಲಿ ಹಣ ನೀಡುವ ಬದಲು ಏಳು ದಿನಕ್ಕೊಮ್ಮೆ ಹಣ ಪಾವತಿಸಿದರೆ ಗುಳೆ ಸಮಸ್ಯೆ ಕೊಂಚ ತಗ್ಗಲಿದೆ. ಬರ ವಿಚಾರದಲ್ಲಿ ಕೇವಲ ಕೇಂದ್ರ ಸರಕಾರದಿಂದ ಹಣ ಬಂದಿಲ್ಲ ಎಂದು ಸುಳ್ಳು ಆರೋಪದಲ್ಲಿ ಕಾಲ ಕಳೆಯುವ ಬದಲು ಬಂದ ಹಣ ಸಮರ್ಪಕವಾಗಿ ವೆಚ್ಚ ಮಾಡಲಿ, ತನ್ನ ಪಾಲಿನ ಎಷ್ಟು ಹಣ ವೆಚ್ಚ ಮಾಡಿದೆ ಎಂಬುದನ್ನು ತಿಳಿಸಲಿದೆ ಎಂದರು.
ಬರದ ಹಿನ್ನೆಲೆಯಲ್ಲಿ ರೈತರ ಬೆಳೆ ಸಾಲ ಮನ್ನಾ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಧ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದು, ಮೊದಲು ಮನ್ನಾ ಆದೇಶ ಹೊರಡಿಸಿ ನಂತರ ಇನ್ನರ್ಧ ಮನ್ನಾಕ್ಕೆ ಪ್ರಧಾನಿಗೆ ಪತ್ರ ಬರೆದರೆ ಕೇಂದ್ರದ ಮನವೊಲಿಸಿ ಸಾಲ ಮನ್ನಾಕ್ಕೆ ಯತ್ನಿಸಲಾಗುವುದು. ನಾನು ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ರೂ.ವರೆಗಿನ ಸಾಲ ಮನ್ನಾ ಹಣವನ್ನು ನಾವು ಪಾವತಿಸಿದ್ದೇವೆ ಎಂದು ಸಿಎಂ ಪದೇ ಪದೇ ಹೇಳುತ್ತಿದ್ದಾರೆ. ಅದು ಸರಕಾರದ ಖಜಾನೆಯಿಂದ ನೀಡಿದ ಹಣ ಎಂದರು.
ಸವಾಲು: ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲರು ರಾಜ್ಯದಲ್ಲಿ 8500ಕ್ಕೂ ಹೆಚ್ಚು ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಿದ್ದಾಗಿ ಹೇಳಿಕೊಳ್ಳುತ್ತಾ, ಈ ಬಗ್ಗೆ ಸವಾಲು ಹಾಕುತ್ತಾರೆ. ಆದರೆ, ಶೇ. 50ಕ್ಕಿಂತ ಹೆಚ್ಚು ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ ಇಲ್ಲವೇ ದುರಸ್ತಿಯಲ್ಲಿವೆ.
ಈ ಬಗ್ಗೆ ವಾಸ್ತವಿಕ ಸ್ಥಿತಿ ಪರಿಶೀಲನೆಗೆ ಮುಖ್ಯಮಂತ್ರಿ, ಗ್ರಾಮೀಣಾಭಿವೃದ್ಧಿ ಸಚಿವರು ಬಂದರೆ ಅವರಿಗೆ ತೋರಿಸುವುದಾಗಿ ಶೆಟ್ಟರ ಸವಾಲು ಹಾಕಿದರು. ಕೆಪಿಎಸ್‌ಸಿ ಅಡಿಯಲ್ಲಿ ನೇಮಕಾತಿಗೆ ಅಭ್ಯರ್ಥಿಗಳ ಅನುಪಾತವನ್ನು 1:5ಕ್ಕೆ ಹೆಚ್ಚಿಸಿದೆ. ಪೈಪೋಟಿ ಹೆಚ್ಚಿ ಹೆಚ್ಚು ಹೆಚ್ಚು ಹಣ ನೀಡಲು ಮುಂದಾಗಲಿ ಎಂಬುದೇ ಸರಕಾರದ ಉದ್ದೇಶ.
ಕಾಂಗ್ರೆಸ್ ಸರಕಾರವೇ ರಚಿಸಿದ ಹೋಟಾ ಸಮಿತಿ 1:3ಗೆ ಶಿಫಾರಸ್ಸು ಮಾಡಿದ್ದರೂ ಪಾಲನೆ ಆಗುತ್ತಿಲ್ಲ ಎಂದು ಆರೋಪಿಸಿದರು. ಜಿಪಂ ಸದಸ್ಯ ಯೋಗೀಶಗೌಡಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಅವರ ಪತ್ನಿ ಮಲ್ಲಮ್ಮಗೆ ರಕ್ಷಣೆ ನೀಡಬೇಕು. ಪ್ರಕರಣದ ಕುರಿತಾಗಿ ಅಶ್ಲೀಲ ಹಾಗೂ ಬೆದರಿಕೆ ಪತ್ರಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.