Advertisement

ಕೈ ಮಗ್ಗದ ಉತ್ಪನ್ನ ಖರೀದಿಸಿ ಪ್ರೋತ್ಸಾಹಿಸಿ: ಉದಾಸಿ

04:50 PM Oct 13, 2018 | |

ಹಾವೇರಿ: ಕೈ ಮಗ್ಗದ ಉತ್ಪನ್ನಗಳನ್ನು ಖರೀದಿಸುವ ಮೂಲಕ ನೇಕಾರರಿಗೆ ಹಾಗೂ ಜವಳಿ ಉದ್ಯಮಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಹಾನಗಲ್ಲ ಶಾಸಕ ಸಿ.ಎಂ. ಉದಾಸಿ ಹೇಳಿದರು. ಭಾರತ ಸರ್ಕಾರದ ಜವಳಿ ಮಂತ್ರಾಲಯ, ಕರ್ನಾಟಕ ಸರ್ಕಾರದ ಕೈ ಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಕಾವೇರಿ ಹ್ಯಾಂಡ್‌ ಲೂಮ್‌ ಸಹಯೋಗದಲ್ಲಿ ನಗರದ ಜಿಲ್ಲಾ ಗುರುಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಸ್ತ್ರ ಕೌಶಲ್ಯ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಕೈ ಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದಿಂದ ಖಾದಿ ಉದ್ಯಮ ಹಾಗೂ ಕೈ ಮಗ್ಗ ಉದ್ಯಮದ ಬೆಳವಣಿಗೆಗೆ ಅನುಕೂಲವಾಗಲಿದೆ. ಈ ಉದ್ಯಮದಲ್ಲಿ ತೊಡಗಿಸಿಕೊಂಡ ಸಣ್ಣಪುಟ್ಟ ನೇಕಾರರಿಗೆ ಮಾರುಕಟ್ಟೆ ಸೌಕರ್ಯ ಕಲ್ಪಿಸಿದಂತಾಗುತ್ತದೆ. ವಿಶೇಷವಾಗಿ ಜನರಿಗೆ ಕೈ ಮಗ್ಗ ಉತ್ಪನ್ನಗಳನ್ನು ಪರಿಚಯಿಸಲು ಅನುಕೂಲವಾಗಲಿದೆ ಎಂದರು.

Advertisement

ಕೈ ಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಬಿ.ತಿಪ್ಪೇಸ್ವಾಮಿ ಮಾತನಾಡಿ, ಕೈ ಮಗ್ಗ ನೇಕಾರರು ಉತ್ಪಾದಿಸಿರುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ, ಗುಲ್ಬರ್ಗ, ತುಮಕೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಹಾಗೂ ಹೊರ ರಾಜ್ಯಗಳ ಕೈಮಗ್ಗ ಸಂಘಗಳ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ನೆಹರು ಓಲೇಕಾರ, ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಕೈ ಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಬಿ. ತಿಪ್ಪೇಸ್ವಾಮಿ ಇತರರು ಇದ್ದರು.

ಶೇ. 20 ರಿಯಾಯಿತಿ
ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಜಿಲ್ಲೆಗಳಿಂದ 40 ಕೈ ಮಗ್ಗ ಸಹಕಾರಿ ಸಂಘಗಳು ವಸ್ತ್ರ ಕೌಶಲ್ಯ ವಿಶೇಷ ಕೈ ಮಗ್ಗ ಮೇಳದಲ್ಲಿ ಭಾಗವಹಿಸಿವೆ. ರೇಷ್ಮೆ ಸೀರೆ, ಇಳಕಲ್‌ ಮಾದರಿ ಸೀರೆ, ಬೆಡ್‌ ಶಿಟ್‌, ಪಂಚೆ, ಲುಂಗಿ, ದೇವರ ವಸ್ತ್ರ, ತಲೆದಿಂಬಿನ ಹೊದಿಕೆ, ಕಂಬಳಿ ಸೇರಿದಂತೆ ವಿವಿಧ ಕೈ ಮಗ್ಗ ವಸ್ತುಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಹಬ್ಬದ ಪ್ರಯುಕ್ತ ಶೇ.20 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಅ. 26ರ ವರೆಗೆ ಮಾರಾಟ ಮೇಳ ನಡೆಯಲಿದೆ.

ಹನುಮನಮಟ್ಟಿಯ ತೋಟಗಾರಿಕಾ ಇಲಾಖೆಗೆ ಸೇರಿದ 18 ಎಕರೆ ಜಾಗೆಯಲ್ಲಿ ಜವಳಿ ಪಾರ್ಕ್‌ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈ ಜಮೀನಿಗೆ ಪರ್ಯಾಯವಾಗಿ ತೋಟಗಾರಿಕೆ ಇಲಾಖೆಗೆ ಬೇರೆ ಜಮೀನು ಗುರುತಿಸಿ ನೀಡಬೇಕಾಗಿದೆ. ಈ ಕುರಿತು ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಕೆಯಾಗಿರುವ ಮಾಹಿತಿ ಇದೆ. ಜವಳಿ ಪಾರ್ಕ್‌ ಸ್ಥಾಪನೆಯಿಂದ ಉದ್ಯೋಗಾವಕಾಶಗಳಿಗೆ ಅನುಕೂಲವಾಗಲಿದೆ.
 ಸಿ.ಎಂ. ಉದಾಸಿ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next