ಮಣಿಪಾಲ: ಮಾಹೆ ವಿ.ವಿ.ಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್ (ಪಿಎಸ್‌ಪಿಎಚ್) ಏಜೆನ್ಸಿ ಫಾರ್ ಪಬ್ಲಿಕ್ ಹೆಲ್ತ್ ಎಜುಕೇಶನ್ ಅಕ್ರೆಡಿಟೇಶನ್(ಎಪಿಎಚ್‌ಇಎ) ಪಡೆಯುವ ಮೂಲಕ ಜಾಗತಿ ಮಟ್ಟದ ಸಾಧನೆ ಮಾಡಿರುವ ಜತೆಗೆ ಈ ಹೆಗ್ಗಳಿಕೆ ಪಡೆದ ಏಷ್ಯಾದ ಮೊದಲ ಸಂಸ್ಥೆಯಾಗಿದೆ ಹಾಗೂ ವಿಶ್ವದ 11ನೇ ಸಂಸ್ಥೆಯಾಗಿದೆ.
ಎಪಿಎಚ್‌ಇಎ ಕಚೇರಿಯು ಬೆಲ್ಜಿಯಂನಲ್ಲಿದೆ. 2024ರ ಸೆ.5ರಿಂದಲೇ ಜಾರಿಗೆ ಬರುವಂತೆ ಐದು ವರ್ಷಕ್ಕೆ ಅನ್ವಯವಾಗುವಂತೆ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಶಿಕ್ಷಣ, ತರಬೇತಿ ಮತ್ತು ಸಂಶೋಧನೆ ಶ್ರೇಷ್ಠತೆಗಾಗಿ ಈ ಮಾನ್ಯತೆ ನೀಡಿದೆ.
ಪಿಎಸ್‌ಪಿಎಚ್‌ನ ಈ ಸಾಧನೆಯು ಯು.ಕೆ.ಯ ಲಂಡನ್ ಸ್ಕೂಲ್ ಆಫ್ ಹೈಜೀನ್ ಆ್ಯಂಡ್ ಟ್ರಾಪಿಕಲ್ ಮೆಡಿಸಿನ್ ಮತ್ತು ಯುಎಸ್‌ಎ ಅಲ್ಲಿರುವ ರಿಚರ್ಡ್ ಎಂ ಫೇರ್‌ಬ್ಯಾಂಕ್ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳ ಸಾಲಿಗೆ ಸೇರುವಂತೆ ಮಾಡಿದೆ.
ಮಾಹೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಸಹ ಕುಲಪತಿ ಡಾ| ಶರತ್ ಕೆ. ರಾವ್ ಅವರು ಪಿಎಸ್‌ಪಿಎಚ್ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಪಿಎಸ್‌ಪಿಎಚ್ ನಿರ್ದೇಶಕ ಡಾ| ಚೆರಿಯನ್ ವರ್ಗೀಸ್ ಮಾತನಾಡಿ, ಈ ಮಾನ್ಯತೆಯು ಅತ್ಯುನ್ನತ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಹಾಗೂ ನಮ್ಮ ವಿದ್ಯಾರ್ಥಿಗಳು ಜಾಗತಿಕ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಇನ್ನಷ್ಟು ಪ್ರೇರಣೆಯಾಗಲಿದೆ ಎಂದು ಹೇಳಿದರು.ಕುಲಸಚಿವ ಡಾ| ಪಿ. ಗಿರಿಧರ ಕಿಣಿ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.