ಬೆಂಗಳೂರು: ಮೂಲಸೌಕರ್ಯ ಇಲ್ಲದೆ ನಡೆಸುತ್ತಿದ್ದ ನರ್ಸಿಂಗ್ ಕಾಲೇಜುಗಳ ವಿರುದ್ಧ ಸಮರ ಸಾರಿದ್ದ ರಾಜ್ಯ ಸರಕಾರದ ವಿರುದ್ಧವೇ ಕಾಲೇಜುಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ನೀಡಿರುವ ತಡೆಯಾಜ್ಞೆ ತೆರವಿಗೆ ಸರಕಾರ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದಲ್ಲಿ 800 ಜಿಎನ್‌ಎಂ ಕಾಲೇಜು ಹಾಗೂ 600 ಬಿಎಸ್‌ಸಿ ನರ್ಸಿಂಗ್ ಕಾಲೇಜುಗಳಿದ್ದು, 2020-21ನೇ ಸಾಲಿನಲ್ಲಿ ಮೂಲಸೌಕರ್ಯ ಇಲ್ಲದಿದ್ದರೂ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳಿಗೆ ಅನುಮತಿ ನೀಡುವ ಮೂಲಕ ಇಂಡಿಯಾ ನರ್ಸಿಂಗ್ ಕೌನ್ಸಿಲ್ ಮಾರ್ಗಸೂಚಿ ಉಲ್ಲಂಘಿಸಲಾಗಿದೆ ಎಂಬ ಆರೋಪ ಇತ್ತು.
ಪ್ರಮುಖವಾಗಿ ನರ್ಸಿಂಗ್ ಕಾಲೇಜುಗಳಲ್ಲಿ ಕನಿಷ್ಠ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇರಬೇಕು, 23 ಸಾವಿರ ಚದರಡಿಯ ಕಟ್ಟಡ ಇರಬೇಕು, 20-23 ಬೋಧಕ ಸಿಬಂದಿ ಇರಬೇಕು ಎಂಬಿತ್ಯಾದಿ ನಿಯಮಗಳಿವೆ. ಆದರೆ ಹಲವು ಕಾಲೇಜುಗಳಲ್ಲಿ ಈ ಯಾವ ನಿಯಮಗಳೂ ಪಾಲನೆಯಾಗಿಲ್ಲ. ಬಹುತೇಕ ನರ್ಸಿಂಗ್ ಕಾಲೇಜುಗಳಲ್ಲಿ ವಿದೇಶಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ತರಗತಿಗೆ ಬಾರದೆ ಕೇವಲ ಪರೀಕ್ಷೆಯನ್ನಷ್ಟೇ ಬರೆದು ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಇದು ಭವಿಷ್ಯದಲ್ಲಿ ಅಪಾಯಕಾರಿ ಪರಿಣಾಮ ಬೀರಲಿದೆ ಎಂದು ವಿಧಾನ ಪರಿಷತ್ತಿನಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು.
ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಮೇಲ್ಮನೆ ಸದಸ್ಯ ಎನ್. ರವಿಕುಮಾರ್ ಅಧ್ಯಕ್ಷತೆಯಲ್ಲಿ ವಿಶೇಷ ಸದನ ಸಮಿತಿ ರಚಿಸಿದ್ದ ಸರಕಾರ, ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿ ಲಭ್ಯವಿರುವ ಮೂಲಸೌಕರ್ಯ ಹಾಗೂ ಭಾರತೀಯ ಶುಶ್ರೂಷ ಪರಿಷತ್ತಿನ ಮಾರ್ಗಸೂಚಿ ಪಾಲನೆ ಆಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಲು ಸಮಿತಿಗೆ ಜವಾಬ್ದಾರಿ ಕೊಡಲಾಗಿತ್ತು. ಇದಕ್ಕೆ ಕಾಲೇಜುಗಳು ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ ಮೆಟ್ಟಿಲೇರಿದ್ದವು. ಆದರೆ ಅಲ್ಲಿ ಹಿನ್ನಡೆಯಾ ಗಿದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ತಡೆ ಯಾಜ್ಞೆ ತರಲಾಗಿತ್ತು. ಈ ತಡೆಯಾಜ್ಞೆ ತೆರವು ಸಂಬಂಧ ಸಮಿತಿ ಅಧ್ಯಕ್ಷ ರವಿಕುಮಾರ್ ನೇತೃತ್ವದಲ್ಲಿ ಬುಧವಾರ ಸಭೆ ನಡೆದಿದ್ದು, ಸೆ. 17ರಂದು ಮತ್ತೊಮ್ಮೆ ಸಭೆ ಸೇರಿ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ಮುಂದಿನ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಯಿತು.