ತೋಕೂರು: ಕಾಂಗ್ರೆಸ್ ಆಡಳಿತದ ಸರಕಾರ ಜನಪರ ಯೋಜನೆಯಿಂದ ಅಭಿವೃದ್ಧಿ ಪರವಾಗಿದ್ದರೆ, ಬಿಜೆಪಿ ತನ್ನ ಅಧಿಕಾರದ ರಾಜ್ಯದಲ್ಲಿ ಭ್ರಷ್ಟಾಚಾರದಿಂದಲೇ ಜನರಿಂದ ದೂರವಾಗುತ್ತಿದೆ. ಕಾಂಗ್ರೆಸ್‌ನ ಮನೆ ಮನೆ ಭೇಟಿ ಕಾರ್ಯಕ್ರಮದಿಂದ ಜನರಿಗೆ ಸರಕಾರದ ಸಾಧನೆಯ ಬಗ್ಗೆ ತಿಳಿಹೇಳಲು ಕಾರ್ಯಕರ್ತರು ಸಂಘಟಿತರಾಗಿರುವುದು ಪಕ್ಷದ ಬೆಳವಣಿಗೆಗೆ ಪೂರಕವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಪಡುಪಣಂಬೂರು ಕಾಂಗ್ರೆಸ್ ಸಮಿತಿಯಿಂದ ತೋಕೂರು, ಎಸ್. ಕೋಡಿ, 10ನೇ ತೋಕೂರು ಪರಿಸರದಲ್ಲಿ ಕಾಂಗ್ರೆಸ್ ಪಕ್ಷದ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೂಲ್ಕಿ ಬ್ಲಾಕ್ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿ, ಕಾಂಗ್ರೆಸ್ ನೇತೃತ್ವದ ಸಿದ್ಧರಾಮಯ್ಯರ ಸರಕಾರವನ್ನೇ ಮುಂದಿನ ಚುನಾವಣೆಯಲ್ಲೂ ಆಡಳಿತಕ್ಕೆ ತರುವ ವಿಶ್ವಾಸವನ್ನು ಜನರೇ ಕಾರ್ಯಕರ್ತರಿಗೆ ತಿಳಿಸುತ್ತಿದ್ದಾರೆ ಇದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಿದೆ ಎಂದು ಹೇಳಿದರು.
ಕೆ.ಪಿ.ಸಿ.ಸಿ. ಸದಸ್ಯ ಎಚ್. ವಸಂತ ಬೆರ್ನಾಡ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಕ್ಷೇತ್ರದಲ್ಲಿ ಶಾಸಕ ಕೆ.ಅಭಯಚಂದ್ರ ಜೈನ್ ಅವರು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕರಪತ್ರದ ಮೂಲಕ ಮಾಹಿತಿ ನೀಡಿದರು.
ಮಹಿಳಾ ಬ್ಲಾಕ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಮೂಲ್ಕಿ, ಮಾಜಿ ಜಿ.ಪಂ. ಅಧ್ಯಕ್ಷೆ ಸುಗಂಧಿ ಕೊಂಡಾಣ, ಕಿನ್ನಿಗೋಳಿ ಗ್ರಾಮ ಪಂಚಾಯ ತ್ ಸದಸ್ಯೆ ಸುನೀತಾ ಕಿನ್ನಿಗೋಳಿ, ಪಡುಪಣಂಬೂರು ಗ್ರಾಮ ಸಮಿತಿಯ ಅಧ್ಯಕ್ಷೆ ಸವಿತಾ ಶರತ್ ಬೆಳ್ಳಾಯರು, ಸ್ಥಳೀಯ ಪ್ರಮುಖರಾದ ಲತಾ ಕಲ್ಲಾಪು, ದಿನೇಶ್ ಸುವರ್ಣ, ರಾಜು ಕುಂದರ್, ಎಂ.ಎ.ವಾಹಿದ್ ತೋಕೂರು, ದಾಮೋದರ ಸುವರ್ಣ ಎಸ್.ಕೋಡಿ ಮತ್ತಿತರರು ಉಪಸ್ಥಿತರಿದ್ದರು.