ಬೆಂಗಳೂರು: ಕಾಂಗ್ರೆಸ್ನ ಔತಣಕೂಟ ರಾಜಕಾರಣಕ್ಕೆ ಹೈ ಕಮಾಂಡ್ನಿಂದ ತಾತ್ಕಾಲಿಕ ತಡೆ ಬಿದ್ದಿದ್ದರೂ ಅದರ ಬೆನ್ನಲ್ಲೇ ಹೊತ್ತಿಕೊಂಡಿರುವ ಅಸಮಾ ಧಾನದ ಕಿಡಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಪರಿಣಾಮ ವಾಗಿ ಒಂದು ವೇಳೆ ಅನುಮತಿ ಸಿಗದಿದ್ದರೂ ಅಂದುಕೊಂಡಂತೆ ಔತಣಕೂಟ ಮಾಡಿಯೇ ತೀರಬೇಕು ಎಂಬ ತೀರ್ಮಾನಕ್ಕೆ ಒಂದು ಗುಂಪು ಬಂದಂತಿದೆ.
ಇದರೊಂದಿಗೆ ಬಣಗಳ ನಡುವಿನ ಶೀತಲ ಸಮರ ಮತ್ತಷ್ಟು ತಾರಕಕ್ಕೇರುವ ಸ್ಪಷ್ಟ ಸೂಚನೆ ಇದೆ. ಇದರ ಮಧ್ಯೆಯೇ ಗೃಹ ಸಚಿವ ಡಾ| ಪರಮೇಶ್ವರ ಅವರಿಗೆ ಹೈಕಮಾಂಡ್ನಿಂದ ಬುಲಾವ್ ಬಂದಿದೆ ಎನ್ನಲಾಗಿದೆ. ಸರಣಿ ಔತಣಕೂಟ ಸಭೆಗಳ ಹಿನ್ನೆಲೆ ಮತ್ತು ಅದ ರಿಂದಾಗಬಹುದಾದ ಪರಿಣಾಮಗಳ ಕುರಿತು ಚರ್ಚಿಸಲು ಆಹ್ವಾನ ನೀಡ ಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆ ಮುಂದೂಡಿ 2 ದಿನಗಳಾದರೂ ಅದರ ಮೇಲಿನ ಚರ್ಚೆಗಳಿಗೆ ಮಾತ್ರ ತೆರೆ ಬಿದ್ದಿಲ್ಲ. ಬದಲಿಗೆ ಸಭೆಯಲ್ಲಿ ಭಾಗವಹಿಸಲಿದ್ದ ನಾಯಕರ ದನಿ ಮತ್ತಷ್ಟು ಬಲಗೊಳ್ಳುತ್ತಿದೆ. ಸಭೆಗೆ ತಡೆ ಹಾಗೂ ಅನಂತರದ ಪರಿಣಾಮಗಳು ಮತ್ತು ರಾಜ ಕೀಯ ಲೆಕ್ಕಾಚಾರಗಳು ಔತಣ ಕೂಟ ಆಯೋಜಕರ ಬಣಕ್ಕೆ ಪ್ರತಿಷ್ಠೆ ಯಾಗಿದೆ. “ಎದುರಾಳಿ ಬಣದ ಸಮು ದಾಯಗಳ ಸಭೆ ಮಾಡುತ್ತಾರೆ. ಅದಕ್ಕೆ ಬೇರೆ ಅರ್ಥ ಇರುವುದಿಲ್ಲ. ನಮ್ಮ ಸಭೆಗೆ ಮಾತ್ರ ಬೇರೆ ಅರ್ಥವೇಕೆ’ ಎಂಬ ಪ್ರಶ್ನೆ ಈ ಬಣದವರಿಂದ ಕೇಳಿಬರುತ್ತಿದೆ.
ಇದಕ್ಕೆ ಪೂರಕವಾಗಿ ಒಂದು ದಿನದ ಹಿಂದಷ್ಟೇ, “ಎಸ್ಸಿ-ಎಸ್ಟಿ ಸಮಾವೇಶ ಕುರಿತು ಚರ್ಚೆ ಮಾಡುವುದನ್ನು ಸಹಿಸುವುದಿಲ್ಲ ಎಂದು ನನಗೆ ಯಾರೂ ಹೇಳಿಲ್ಲ.
ಯಾರಾದರೂ ಹೇಳಿದರೆ ಅದಕ್ಕೆ ಸರಿಯಾಗಿ ಉತ್ತರ ಕೊಡುತ್ತೇವೆ. ಆ ಶಕ್ತಿಯೂ ನಮಗಿದೆ’ ಎಂದು ಸ್ವತಃ ಔತಣಕೂಟ ಸಭೆ ಕರೆದಿದ್ದ ಗೃಹ ಸಚಿವ ಡಾ| ಪರಮೇಶ್ವರ ಖಡಕ್ ಎಚ್ಚರಿಕೆ ನೀಡಿದ್ದರು. ಗುರುವಾರವೂ ಅವರು ಅಸಮಾಧಾನ ಹೊರಹಾಕಿದ್ದು, “ಪಕ್ಷದಿಂದ ಹೊರತಾಗಿ ಸಮಾವೇಶ ಮಾಡುತ್ತಿಲ್ಲ. ನಾನಾ ವಿಶ್ಲೇಷಣೆಗಳಿಗೆ ನಾನು ಉತ್ತರ ಕೊಡುವುದಿಲ್ಲ’ ಎಂದು ಗುಡುಗಿದ್ದಾರೆ. ಈ ಹಿನ್ನೆಲೆಯಲ್ಲಿ ಶತಾಯಗತಾಯ ಸಭೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.
ಇನ್ನೊಂದು ಬಣದ ವಾದವೇನು?
ಹಾಗೊಂದು ವೇಳೆ ಸಭೆ ಆಗುವುದಾದರೆ, ಸಿಎಂ-ಡಿಸಿಎಂ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುಜೇìವಾಲ ನೇತೃತ್ವದಲ್ಲೇ ಆಗಲಿ. ಆಗ ಬೇರೆ ಯಾವುದೇ ಚರ್ಚೆಗಳಿಗೆ ಅವಕಾಶ ಇರುವುದಿಲ್ಲ. ಹೊರಗಡೆಯೂ ಸ್ಪಷ್ಟ ಸಂದೇಶ ನೀಡಿದಂತಾಗುತ್ತದೆ ಎಂಬ ಲೆಕ್ಕಾಚಾರ ಮತ್ತೊಂದು ಬಣದ್ದಾಗಿದೆ. ಈ ಮಧ್ಯೆಯೇ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಮುನ್ನ ಸಭೆ ನಡೆಸುವುದಾ ಅಥವಾ ಅನಂತರ ಏರ್ಪಡಿಸಬೇಕಾ ಎಂಬುದರ ಚರ್ಚೆಯೂ ಇದೆ ಎನ್ನಲಾಗುತ್ತಿದೆ.
ಸಭೆ ಮುಂದೂಡಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಹದೇವಪ್ಪ, “ಯಾರೂ ದಲಿತ ಸಮಸ್ಯೆ ಚರ್ಚೆಗೆ ತಡೆ ಹಾಕಲು ಆಗುವುದಿಲ್ಲ. ಚರ್ಚೆಯನ್ನು ಇಂದೂ ಮಾಡುತ್ತೇವೆ. ಮುಂದೆಯೂ ಮಾಡುತ್ತೇವೆ. ಅಷ್ಟಕ್ಕೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುಜೇìವಾಲಾ ಮಾಡಬೇಡಿ ಎಂದು ಹೇಳಿಲ್ಲ. ಸ್ವತಂತ್ರರು. ಇದರಲ್ಲಿ ಕಾಣದ ಕೈ ಯಾವುದೂ ಇಲ್ಲ’ ಎಂದರು.