ಶಿವಮೊಗ್ಗ : ತಾಲೂಕಿನ ಹನಸವಾಡಿಯಲ್ಲಿರುವ ಮೊರಾರ್ಜಿ ವಸತಿ ಶಾಲೆ ಹಾಗೂ ಬಾಪೂಜಿ ನಗರದ ಹಾಸ್ಟೆಲ್ ಒಂದರ 100 ಕ್ಕೂ ಹೆಚ್ಚು ಮಕ್ಕಳಲ್ಲಿ ಏಕಾಏಕಿ ಹೊಟ್ಟೆ ನೋವು, ವಾಂತಿ, ಸುಸ್ತು ಕಾಣಿಸಿಕೊಂಡು ಅಸ್ವಸ್ಥರಾದ ಘಟನೆ ನಡೆದಿದೆ.
ಸೋಮವಾರ ಸಂಜೆಯಿಂದ ರಾತ್ರಿವರೆಗೆ ಶಿವಮೊಗ್ಗ ತಾಲೂಕಿನ ಗೊಂದಿಚಟ್ನ ಹಳ್ಳಿಯ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 80 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಅವರನ್ನು ತತ್ ಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಡೀ ರಾತ್ರಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಮಂಗಳವಾರ ಮಧ್ಯಾಹ್ನ ಕೂಡ 30 ಮಕ್ಕಳು ದಾಖಲಾಗಿದ್ದರು. ವಿಷಾಹಾರ ಸೇವನೆ ಅಥವಾ ಕುಡಿಯುವ ನೀರಿನ ವ್ಯತ್ಯಾಸದಿಂದ ಮಕ್ಕಳು ದಿಢೀರ್ ಅಸ್ವಸ್ಥಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಕೂಡಲೇ ಚಿಕಿತ್ಸೆ ನೀಡಲಾಗಿದೆ.
ಸುಮಾರು 500 ಮಕ್ಕಳಿರುವ ಈ ವಸತಿ ಶಾಲೆಯಲ್ಲಿ ಊಟದ ಬಳಿಕ ಕೆಲವು ಮಕ್ಕಳು ಅಸ್ವಸ್ಥರಾಗಿದ್ದಾರೆ. ಮಕ್ಕಳಲ್ಲಿ ವಾಂತಿ ಸಮಸ್ಯೆ ಕಾಣಿಸಿಕೊಂಡಿದ್ದು, ತತ್ ಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಸ್ಥಳಕ್ಕೆ ಅ ಧಿಕಾರಿಗಳು ದೌಡಾಯಿಸಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸಿದ್ದಾರೆ. ಶಾಲೆಯ ಶಿಕ್ಷಕವೃಂದ ಮೆಗ್ಗಾನ್‌ನಲ್ಲಿ ಮೊಕ್ಕಾಂ ಹೂಡಿದ್ದು ಮಕ್ಕಳ ತಪಾಸಣೆಗೆ ನೆರವಾಗುತ್ತಿದೆ.
ಮಧ್ಯಾಹ್ನ ಚಪಾತಿ ಮತ್ತು ಅನ್ನ ಸಾಂಬಾರು ಊಟ ಮಾಡಿದ ಬಳಿಕ ವಿದ್ಯಾರ್ಥಿಗಳಲ್ಲಿ ವಾಂತಿ ಬೇ ಧಿ ಶುರುವಾಗಿದೆ. ವಾಂತಿ ಬೇ ಧಿಗೆ ಕಲುಷಿತ ನೀರು ಅಥವಾ ಊಟದ ಸಮಸ್ಯೆ ಇರುವ ಸಾಧ್ಯತೆ ಇದೆ. ಆದರೆ ಘಟನೆಗೆ ನೈಜ ಕಾರಣ ತನಿಖೆ ಪೂರ್ಣಗೊಂಡ ಅನಂತರವಷ್ಟೇ ತಿಳಿದುಬರಲಿದೆ.
**
ಬಾಲಕನ ಮೇಲೆ ಗೂಳಿ ದಾಳಿ; ಗಾಯ
ಶಿವಮೊಗ್ಗ: ಸೈಕಲ್ ಸವಾರಿ ಮಾಡುತ್ತಿದ್ದ ಏಳು ವರ್ಷದ ಬಾಲಕನೋರ್ವನ ಮೇಲೆ ಗೂಳಿ ದಾಳಿ ನಡೆಸಿದ ಘಟನೆ ನಗರದ ಗೋಪಿಶೆಟ್ಟಿ ಕೊಪ್ಪದಲ್ಲಿ ನಡೆದಿದೆ. ಗೂಳಿ ದಾಳಿ ಮಾಡಿದ ದೃಶ್ಯ ಸಿಸಿಟಿವಿ ಕೆಮರಾವೊಂದರಲ್ಲಿ ಸೆರೆಯಾಗಿದೆ.
ಸ್ಥಳೀಯ ನಿವಾಸಿ ಏಳು ವರ್ಷದ ಸನತ್ ಗೂಳಿ ದಾಳಿಗೊಳಗಾದ ಬಾಲಕ. ಈತ ಸೈಕಲ್ ನಲ್ಲಿ ತೆರಳಿ ಹಾಲು ತರುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಗೂಳಿ ಏಕಾಏಕಿ ದಾಳಿ ಮಾಡಿದೆ. ಸನತ್‌ನನ್ನು ಕೊಂಬಿನಿಂದ ಎತ್ತಿ ಬಿಸಾಕಿ, ತಿವಿದಿದೆ. ತತ್ ಕ್ಷಣ ಸ್ಥಳೀಯರು ಬಾಲಕನನ್ನು ಗೂಳಿಯಿಂದ ರಕ್ಷಿಸಿದ್ದಾರೆ.