ಆನಂದಪುರ: ಕಳೆದ ಒಂದು ತಿಂಗಳಿಂದ ಆನಂದಪುರ ಸುತ್ತಮುತ್ತ ಕಾಡಾನೆಗಳು ರೈತರ ತೋಟಗಳಿಗೆ ನುಗ್ಗಿ ಬೆಳೆಯನ್ನು ಹಾನಿ ಪಡಿಸುತ್ತಿದ್ದು ಅರಣ್ಯ ಇಲಾಖೆಯವರು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಸ್ಥಳೀಯ ರೈತರಾದ ಶರತ್ ಕುಮಾರ್ ಆರೋಪಿಸಿದ್ದಾರೆ.
ಕಳೆದ ರಾತ್ರಿ ಆನಂದಪುರ ಸಮೀಪದ ಗೌತಮಪುರ ಗ್ರಾಮ ಪಂಚಾಯಿತಿಯ ದೋಣಂದೂರು ಗ್ರಾಮದ ಮೀನಾಕ್ಷಿ ಮಂಜಪ್ಪ ಎಂಬುವರ ಅಡಕೆ ಹಾಗೂ ಬಾಳೆ ತೋಟಗಳಿಗೆ ಕಾಡಾನೆಗಳು ನುಗ್ಗಿ ನೂರಾರು ಅಡಿಕೆ ಮರಗಳು, ತೆಂಗು, ಸಾವಿರಾರು ಬಾಳೆ, ಮೆಕ್ಕೆಜೋಳ ಸೇರಿದಂತೆ ಬೆಳೆಗಳನ್ನು ಸಂಪೂರ್ಣ ನಾಶಪಡಿಸಿವೆ.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಅರಣ್ಯಾಧಿಕಾರಿ ಮೋಹನ್ ಕುಮಾರ್ ಮಾತನಾಡಿ ಕಾಡಾನೆಗಳಿಂದ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು. ಅಲ್ಲದೆ ಶೆಟ್ಟಹಳ್ಳಿ ಅರಣ್ಯ ಪ್ರದೇಶದಿಂದ ಬಂದಿರುವಂತಹ ಆನೆಗಳನ್ನು ಈ ಭಾಗದಿಂದ ಓಡಿಸಲು ಸಕ್ರೆ ಬೈಲಿನಿಂದ ಮಾವುತರನ್ನು ಕರೆತರಲಾಗುತ್ತದೆ. ಕಾಡಿನ ಒಳಗಿರುವ ಆನೆಗಳನ್ನು ಮಾವುತರು ಆನೆ ಹೆಣ್ಣೋ ಅಥವಾ ಗಂಡೋ ಎಂದು ತಿಳಿದು ಪಳಗಿಸಿದ ಆನೆಯೊಂದನ್ನು ಕರೆತಂದು ಈ ಭಾಗದಿಂದ ಆನೆಗಳನ್ನು ಓಡಿಸಲಾಗುತ್ತದೆ ಎಂದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಗಲು ಮತ್ತು ರಾತ್ರಿ ಆನೆಗಳ ಚಲನ ವಲನವನ್ನು ತಿಳಿಯಲು ಹಾಗೂ ಪಟಾಕಿಗಳನ್ನು ಸಿಡಿಸಿ ಈ ಭಾಗದಿಂದ ಆನೆಗಳನ್ನು ಓಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಆನೆ ಸಂಚರಿಸುತ್ತಿರುವ ಕಾಡಿನ ಸಮೀಪ ಸಂಜೆ ವೇಳೆ ಅರಣ್ಯ ಕಡೆಯಾಗಲಿ, ತೋಟದ ಕಡೆಗಳಲ್ಲಿ ಯಾರು ಸಂಚರಿಸಬಾರದು ಎಂದು ತಿಳಿಸಿದ್ದಾರೆ. ಕಾಡಾನೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ಸಾಗರ ಅರಣ್ಯ ಇಲಾಖೆಯ ಎಸಿಎಫ್ ರವಿ ಕುಮಾರ್, ಚಂದ್ರಪ್ಪ ಕಳಸೆ, ಸೋಮಶೇಖರ್ ಲೌಗೆರೆ, ಚೇತನ್ ರಾಜ್ ಕಣ್ಣೂರ್, ಮಂಜುನಾಥ್, ಗಜೇಂದ್ರ ಯಾದವ್, ಸೇರಿದಂತೆ ಅನೇಕರು ಭೇಟಿ ನೀಡಿದರು.
ಇದನ್ನೂ ಓದಿ: ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್