Advertisement
ಕೋಲಾರ ತಾಲೂಕು ವ್ಯಾಪ್ತಿಗೆ ಬರುವ ಸುಮಾರು 365 ಗ್ರಾಮಗಳ ಪೈಕಿ ಸುಮಾರು 25 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿದೆ. ಹದಿನೈದು ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆದು ನೀರು ನೀಡುವ ಪ್ರಯತ್ನ ಮಾಡಲಾಗುತ್ತಿದೆ.
Related Articles
Advertisement
ಮೊದಲ ವಾರವೇ ಬಿಲ್ ನೀಡಿ: ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಬಿಲ್ಲುಗಳನ್ನು ಏಳೆಂಟು ತಿಂಗಳ ನಂತರ ನೀಡಿ ಅವುಗಳಲ್ಲಿ ಪೂರೈಕೆ ಮಾಡದ ದಿನಗಳ ಬಿಲ್ಲುಗಳನ್ನು ಸೇರಿಸಲಾಗುತ್ತಿದೆ. ಆನಂತರ ಜಿಲ್ಲಾಡಳಿತದ ಮೇಲೆ ಒತ್ತಡ ತಂದು ಟ್ಯಾಂಕರ್ ಬಿಲ್ಲುಗಳನ್ನು ಪಾವತಿ ಮಾಡಿಸಿಕೊಳ್ಳಲಾಗುತ್ತಿದೆ. ಇದರಿಂದ ಅಕ್ರಮವಾಗಲು ಕಾರಣವಾಗುತ್ತಿದೆಯೆಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ವರ್ತೂರು ಪ್ರಕಾಶ್, ಇನ್ನು ಮುಂದೆ ಗ್ರಾಮ ಪಂಚಾಯ್ತಿಗಳು ಸರಬರಾಜು ಮಾಡುತ್ತಿರುವ ಟ್ಯಾಂಕರ್ ನೀರಿನ ಬಿಲ್ಲುಗಳನ್ನು ತಿಂಗಳು ಆಯಾ ತಿಂಗಳ ಮೊದಲ ವಾರದೊಳಗೆ ಸಲ್ಲಿಸಿ ಪಾವತಿಗೆ ಸಹಕರಿಸಬೇಕು. ಇದರಿಂದ ಆಗಿರುವ ಅಕ್ರಮಗಳನ್ನು ತಡೆಯಲು ಸಾಧ್ಯವೆಂದರು.
ನೀರು ಸೋರಿಕೆ ತಡೆಯಿರಿ: ತಾಲೂಕು ಪಂಚಾಯ್ತಿ ಸದಸ್ಯ ಮುರಳೀಧರ ಮಾತನಾಡಿ, ನೀರಿಗೆ ತೀವ್ರ ಅಭಾವವಿರುವುದರಿಂದ ಕುಡಿಯುವ ನೀರನ್ನು ಪೂರೈಕೆಯ ಜೊತೆಗೆ ಹಾಲಿ ನೀರು ಸರಬರಾಜು ವಿಧಾನದಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಯಬೇಕು ಮತ್ತು ಗ್ರಾಮಸ್ಥರಿಗೆ ನೀರಿನ ಮಿತ ಬಳಕೆ ಕುರಿತು ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು. ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಡಿಸಿ ಹಾಗೂ ಸಿಇಒ ಭರವಸೆ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದರು.
ಏಳು ವಾರಕ್ಕೆ ಮೇವು: ಕೋಲಾರ ತಾಲೂಕಿನಲ್ಲಿ ಹಾಲಿನ ಡೇರಿ ಜೊತೆ ಒಪ್ಪಂದ ಮಾಡಿ 1300 ಎಕರೆಯಲ್ಲಿ ಹಾಗೂ ಸಾರ್ವಜನಿಕರಿಂದ 1500 ಎಕರೆಯಲ್ಲಿ ಮೇವು ಬೆಳೆಸಿರುವುದರಿಂದ ಮುಂದಿನ ಏಳು ವಾರಕ್ಕೆ ಆಗುವಷ್ಟು ಮೇವು ಲಭ್ಯವಿದೆಯೆಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕ ವರ್ತೂರು ಪ್ರಕಾಶ್, ಬರದ ಮುಂಜಾಗ್ರತೆ ಅರಿತು ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಯಥೇತ್ಛವಾಗಿ ಮೇವು ಬೆಳೆಸಲು ಕ್ರಮ ಕೈಗೊಂಡಿರುವುದರಿಂದ ಮೇವು ಲಭ್ಯವಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋಲಾರ ಜಿಲ್ಲೆಯ ಎಲ್ಲಾ ಜಾನುವಾರುಗಳಿಗೆ ಮುಂದಿನ ವಾರದಿಂದಲೇ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕುವ ಕಾರ್ಯಕ್ರಮದ ಎರಡನೇ ಹಂತದ ಕಾರ್ಯಕ್ರಮ ಆರಂಭಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಜೆಟ್‌ನಲ್ಲಿ ಪಂಚಾಯ್ತಿ ಪ್ರತಿನಿಧಿಗಳ ವೇತನ ಗೌರವಧನವನ್ನು ಹೆಚ್ಚಳ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ಶಾಸಕ ವರ್ತೂರು ಪ್ರಕಾಶ್ ತಾಪಂ ಜಿಪಂ ಸದಸ್ಯರಿಗೆ ತಾವು ತಂದಿದ್ದ ಜಿಲೇಬಿ ಹಂಚಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ಉಪಾಧ್ಯಕ್ಷೆ ಲಕ್ಷ್ಮೀ, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ತಹಸೀಲ್ದಾರ್ ವಿಜಯಣ್ಣ ಇತರರು ಹಾಜರಿದ್ದರು.