Advertisement

ಎಸ್‌ಟಿಗೆ ಮೀನುಗಾರ ಸಮುದಾಯ

10:08 AM Dec 16, 2019 | Lakshmi GovindaRaj |

ಬೆಂಗಳೂರು: ಮೊಗವೀರ, ಬೆಸ್ತ, ಅಂಬಿಗ, ಗಂಗಾಮತಸ್ತ ಸಹಿತವಾಗಿ 39 ಹೆಸರುಗಳಿಂದ ಗುರುತಿಸುವ ಮೀನುಗಾರ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಸೇರಿಸುವ ಸಂಬಂಧ ದೆಹಲಿ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

Advertisement

ರಾಷ್ಟ್ರೀಯ ಮೀನುಗಾರರ ಸಂಘ ನಗರದ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮೀನುಗಾರರ ಸ್ವಾಭಿಮಾನಿ ವಿಕಾಸ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮೀನುಗಾರ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಸೇರಿಸುವ ಸಂಬಂಧ ಕೇಂದ್ರದ ನಾಯಕರೊಂದಿಗೆ ಅತಿ ಶೀಘ್ರದಲ್ಲಿ ಮಾತುಕತೆ ನಡೆಸುತ್ತೇನೆ. ದೆಹಲಿಗೆ ಹೋದ ಸಂದರ್ಭದಲ್ಲಿ ಮೀನುಗಾರ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಅನುಮೋದನೆ ಕೋರಲಿದ್ದೇನೆ. ಕೇಂದ್ರದಿಂದಲೂ ಸಕಾರಾತ್ಮಕ ಸ್ಪಂದನೆ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದರು.

ಬೆಸ್ತ, ಮೊಗವೀರ, ಅಂಬಿಗ, ಗಂಗಾಮತಸ್ತ ಸಹಿತ 39 ಪದಗಳಿಂದ ಕರೆಯುವ ಮೀನುಗಾರ ಜನಾಂಗದವರು ಪ್ರಾದೇಶಿಕವಾಗಿ ಬೇರೆ, ಬೇರೆ ಇರುವವರು ಒಂದೆಡೆ ಸೇರಿರುವುದು ಸಂತೋಷ ತಂದಿದೆ. ಮೀನುಗಾರಿಕೆಯಲ್ಲಿ ಇಡೀ ಏಷ್ಯಾದಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಮೀನುಗಾರ ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ಮೀನುಗಾರರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ನಮ್ಮ ಸರ್ಕಾರ ರಚನೆಯಾದ ಕೂಡಲೇ ಮೀನುಗಾರರ ಸಾಲಮನ್ನಾ ಮಾಡಿದ್ದೇವೆ. ಮೀನುಗಾರರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.

ಗಂಗಾಮತಸ್ಥರನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸಿ: ನಾರಾಯಣ ರಾವ್‌ : ಶಾಸಕ ನಾರಾಯಣ ರಾವ್‌ ಮಾತನಾಡಿ, ಅಂಬಿಗರ ಸಮುದಾಯ ಯಾರಿಗೂ ಎಂದಿಗೂ ಕೈಕೊಟ್ಟಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲಿ ಎಂದು ಉತ್ತಮ ಫ‌ಲಿತಾಂಶ ಕೊಟ್ಟಿದ್ದಾರೆ. 1996ರಲ್ಲಿ ಮೊದಲ ಬಾರಿಗೆ ಎಸ್‌ಟಿಗೆ ಸೇರ್ಪಡೆ ಮಾಡಲು ಶಿಫಾರಸು ಮಾಡಲಾಗಿತ್ತು. ನಮ್ಮ ಸಮುದಾಯದ ಬಗ್ಗೆ ಅಧ್ಯಯನ ಮಾಡಲು ಬಿಜೆಪಿ ಸರ್ಕಾರ 25 ಲಕ್ಷ ರೂ.ನೀಡಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನಮ್ಮ ಸಮುದಾಯಕ್ಕೆ ಒಳ್ಳೆಯದನ್ನು ಮಾಡಿದ್ದಾರೆ.

ಈಗ ಕೇಂದ್ರ ಮತ್ತು ರಾಜ್ಯದಲ್ಲಿ ನಿಮ್ಮ ಸರ್ಕಾರವೇ ಇದೆ. ನಮ್ಮ ಸಮುದಾಯಕ್ಕೆ ಸಹಾಯ ಮಾಡಿ. ಗಂಗಾಮತಸ್ಥರನ್ನು ಎಸ್‌.ಟಿ ಸಮುದಾಯಕ್ಕೆ ಸೇರಿಸಿ, ಈ ಸಮುದಾಯದ ಒಬ್ಬರನ್ನು ಸಚಿವರನ್ನಾಗಿ ಮಾಡಿ ಎಂದು ಮನವಿ ಮಾಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಶಾಸಕರಾದ ಲಾಲಾಜಿ ಆರ್‌. ಮೆಂಡನ್‌, ರವಿ ಸುಬ್ರಹ್ಮಣ್ಯ, ಶಾಂತಭಿಷ್ಮಾ ಚೌಡಯ್ಯ ಮಹಾಸ್ವಾಮೀಜಿ ಸೇರಿ ಸಮುದಾಯದ ಗಣ್ಯರು, ಸಂಘದ ಪ್ರಮುಖರು ಉಪಸ್ಥಿತರಿದ್ದರು.

Advertisement

6 ತಿಂಗಳಲ್ಲಿ ವಿಮಾನ ನಿಲ್ದಾಣ ಆರಂಭಿಸಿ: ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಕೈಗೊಂಡು ಆರು ತಿಂಗಳಲ್ಲಿ ವಿಮಾನ ಹಾರಾಟ ಆರಂಭವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಿಳಂಬಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಗೃಹ ಕಚೇರಿ “ಕೃಷ್ಣಾ’ದಲ್ಲಿ ಶನಿವಾರ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿ, ಈ ಸಂಬಂಧ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಸಿಗಂದೂರು ಸೇತುವೆ ನಿರ್ಮಾಣ ಯೋಜನೆಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಅನುಮತಿ, ನಿರಾಕ್ಷೇಪಣಾ ಪತ್ರ ಪಡೆಯಲು ಸೂಚಿಸಿದರು.

ಪ್ರಮುಖ ಬೇಡಿಕೆಗಳು
-ಮೀನುಗಾರಿಕೆ ಜನಾಂಗವನ್ನು ಎಸ್‌.ಟಿ ಸಮುದಾಯಕ್ಕೆ ಸೇರಿಸಬೇಕು.

-ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಮಾದರಿಯಲ್ಲಿ ಕರ್ನಾಟಕದಲ್ಲಿ ಮೀನುಗಾರ ಜನಾಂಗಕ್ಕೆ ಕೆರೆ, ಸರೋವರ ಹಾಗೂ ಅಣೆಕಟ್ಟುಗಳಲ್ಲಿ ಮೀನು ಹಿಡಿಯುವ ಹಕ್ಕನ್ನು ಶೇ.90ರಷ್ಟು ಮೀನುಗಾರರ ಜನಾಂಗಗಳ ಸಹಕಾರಿ ಸಂಘಗಳಿಗೆ ಪ್ರಥಮ ಅದ್ಯತೆಯಲ್ಲಿ ನೀಡಬೇಕು.

-ಶಾಸಕ ಲಾಲಾಜಿ ಮೆಂಡನ್‌ ಅವರಿಗೆ ಸಚಿವ ಸ್ಥಾನ ನೀಡಬೇಕು.

-ಅಂಬಿಗರ ಚೌಡಯ್ಯ ಗುರುಪೀಠ ಅಭಿವೃದ್ಧಿಗಾಗಿ ನಿಜ ಶರಣ ಅಂಬಿಗರ ಚೌಡಯ್ಯ ನಿಗಮಕ್ಕೆ 100 ಕೋಟಿ ರೂ. ಮೀಸಲಿಡಬೇಕು.

-ಬೆಂಗಳೂರಿನಲ್ಲಿರುವ ರಾಜ್ಯ ಗಂಗಾಮತಸ್ಥ ಸಂಘದ ವಿದ್ಯಾರ್ಥಿ ನಿಲಯಕ್ಕೆ ಹಾಗೂ ಗಂಗಾ ಪರಮೇಶ್ವರಿ ದೇವಾಲಯದ ಜೀರ್ಣೋದ್ಧಾರಕ್ಕೆ 25 ಕೋಟಿ ರೂ.ಅನುದಾನ ಬಿಡುಗಡೆ ಮಾಡಬೇಕು.

ಗಂಗಾಮತಸ್ತ ಸಮುದಾಯವನ್ನು ಎಸ್‌ಟಿ ಪಂಗಡಕ್ಕೆ ಸೇರಿಸಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಸಮುದಾಯವೂ ಸಾಮೂಹಿಕ ಪ್ರಯತ್ನ ನಡೆಸಬೇಕು. ಎಲ್ಲವೂ ಸರ್ಕಾರದಿಂದಲೇ ಸಾಧ್ಯ ಎಂಬುದನ್ನು ನಂಬಿಕೊಳ್ಳಬಾರದು. ನಮ್ಮ ಪ್ರಯತ್ನವೂ ಇರಬೇಕು.
-ಎನ್‌.ರವಿಕುಮಾರ್‌, ವಿಧಾನ ಪರಿಷತ್‌ ಸದಸ್ಯ

ದೇಶದ ಜನಸಂಖ್ಯೆಯ ಶೇ.12ರಷ್ಟು ಹಾಗೂ ರಾಜ್ಯದ ಜನಸಂಖ್ಯೆಯ ಶೇ.10ರಷ್ಟು ಮೀನುಗಾರರಿದ್ದಾರೆ. ನಮ್ಮ ಸಮುದಾಯದಲ್ಲಿ ಎಲ್ಲ ವರ್ಗದವರಿದ್ದಾರೆ. ಅವರೆಲ್ಲರೂ ಮೀನುಗಾರಿಕೆ ಮಾಡುತ್ತಿದ್ದಾರೆ. ನಮ್ಮ ಜನಾಂಗ ಮೀನು ಹಿಡಿಯುವ ಬದಲಿಗೆ ಮೀನು ಹಿಡಿಯುವ ಬಲೆಯಲ್ಲಿ ಸಿಕ್ಕಿ ವಿಲವಿಲ ಒದ್ದಾಡುತ್ತಿದೆ. ಸೂಕ್ತ ಸೌಲಭ್ಯದ ಅಗತ್ಯವಿದೆ.
-ಭಾವನಾ, ನಟಿ

Advertisement

Udayavani is now on Telegram. Click here to join our channel and stay updated with the latest news.

Next