ಕುಡಲ್: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ರಾಣೆ ಶೀಘ್ರವೇ ಬಿಜೆಪಿಗೆ ಸೇರಲಿದ್ದಾರೆ ಅಥವಾ ತಮ್ಮದೇ ಆದ ಪಕ್ಷ ಸ್ಥಾಪನೆ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. 1999ರಲ್ಲಿ ಅವರು ಶಿವಸೇನೆಯಲ್ಲಿದ್ದಾಗ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದರು. 2005ರ ಜು.26ರಂದು ಕಾಂಗ್ರೆಸ್ ಸೇರಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ತಮ್ಮನ್ನು ಸಿಎಂ ಮಾಡುವ ವಾಗ್ಧಾನ ಮಾಡಿದ್ದರು. ಆದರೆ ಅವರು ನುಡಿದಂತೆ ನಡೆದುಕೊಂಡಿಲ್ಲ ಎಂದು ರಾಣೆ ದೂರಿದ್ದಾರೆ. ಸೆ.30ರ ಒಳಗಾಗಿ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ ರಾಣೆ. ಶಿವಸೇನೆ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆಯವರನ್ನು ಟೀಕಿಸಿದ ಬಳಿಕ ಅವರು ಅಮಾನತಾಗಿದ್ದರು. ಇತ್ತೀಚೆಗೆ ಅವರು ಅಹಮದಾಬಾದ್‌ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಿದ್ದರು. ಜತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇತ್ತೀಚೆಗೆ ರಾಣೆ ನಿವಾಸಕ್ಕೆ ಭೇಟಿ ನೀಡಿದ್ದರು. ಒಂದು ವೇಳೆ ರಾಣೆ ಬಿಜೆಪಿಗೆ ಸೇರ್ಪಡೆಯಾದರೆ ಶಿವಸೇನೆಗೆ ಇರುಸು ಮುರುಸು ಆಗಲಿದೆ ಎಂದು ಹೇಳಲಾಗುತ್ತಿದೆ.