ಬೆಂಗಳೂರು: ವಿಧಾನ ಮಂಡಲ ಅಧಿವೇಶನಗಳು ಆಡಳಿತ ಪಕ್ಷ – ವಿರೋಧ ಪಕ್ಷಗಳ ನಡುವಿನ ಮಾತಿನ ಗಲಾಟೆಗೆ ಸಾಕ್ಷಿಯಾಗುವುದು ಸಾಮಾನ್ಯ. ಪರಸ್ಪರ ಆರೋಪ- ಪ್ರತ್ಯಾರೋಪಗಳು ನಡೆಯುತ್ತದೆ. ಆದರೆ ಇಂದು ನಡೆದ ಕಲಾಪದಲ್ಲಿ ಇದಕ್ಕಿಂತ ಭಿನ್ನವಾದ ಪ್ರಸಂಗ ನಡೆಯಿತು.
ಸಭಾಪತಿ ಪೀಠಕ್ಕೆ ಬರುವ ಮೊದಲೇ ಉಪಸಭಾಪತಿ ಧರ್ಮೇಗೌಡ ಅವರು ಪೀಠದಲ್ಲಿ ಬಂದು ಕುಳಿತರು. ಅದನ್ನು ವಿರೋಧಿಸಿದ ಕಾಂಗ್ರೆಸ್ ಸದಸ್ಯರು ಅವರನ್ನು ಪೀಠದಿಂದ ಎಳೆದರು. ಕಿತ್ತಾಟ, ನೂಕಾಟ, ಎಳೆದಾಟಗಳಿಗೆ ಪರಿಷತ್ ಇಂದು ಸಾಕ್ಷಿಯಾಯಿತು.
ಪರಿಷತ್ ಸಂಪ್ರದಾಯದಂತೆ ಬೆಲ್ ಆದ ನಂತರ ಮಾರ್ಷಲ್ ಗಳ ಜೊತೆಗೆ ಸಭಾಪತಿಗಳು ಪೀಠಕ್ಕೆ ಬರಬೇಕು. ಆದರೆ ಇಂದು ಪರಿಷತ್ ಬೆಲ್ ನಿಲ್ಲುವ ಮೊದಲೇ ಉಪಸಭಾಪತಿ ಧರ್ಮೇಗೌಡ ಪೀಠದಲ್ಲಿ ಬಂದು ಕುಳಿತರು. ಇದರ ಮಧ್ಯೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರು ಸದನಕ್ಕೆ ಬಾರದಂತೆ ಬಾಗಿಲನ್ನು ಲಾಕ್ ಮಾಡಲಾಗಿತ್ತು.
ಇದನ್ನೂ ಓದಿ:ಮೇಲ್ಮನೆಯಲ್ಲಿ ಹೊಯ್ ಕೈ, ಎಳೆದಾಟ.. ಪರಿಷತ್ ಪೀಠದ ಮೇಲೆ ಜಂಗೀಕುಸ್ತಿ: ಕಲಾಪ ಮುಂದೂಡಿಕೆ
ಪೀಠದಲ್ಲಿ ಉಪಸಭಾಪತಿ ಬಂದು ಕುಳಿತ ವಿಚಾರವನ್ನು ಆಕ್ಷೇಪಿಸಿದ ಕಾಂಗ್ರೆಸ್ ಮುಖ್ಯ ಸಚೇತಕ ಸೇರಿದಂತೆ ಕಾಂಗ್ರೆಸ್ ಸದಸ್ಯರು ಉಪಸಭಾಪತಿಗಳನ್ನು ಎಳೆದಾಡಿದದರು. ಇತ್ತ ಸಭಾಪತಿ ಬರದಂತೆ ಹಾಕಿದ್ದ ಬಾಗಿಲನ್ನು ಒದ್ದು ತೆಗೆಯಲು ಕಾಂಗ್ರೆಸ್ ನ ನಜೀರ್ ಅಹ್ಮದ್ ಮತ್ತು ಬಿ.ಕೆ ಹರಿಪ್ರಸಾದ್ ಮುಂತಾದವರು ಮುಂದಾದರು.
ಪೀಠದಿಂದ ಉಪಸಭಾಪತಿ ಧರ್ಮೇಗೌಡರನ್ನು ಕಾಂಗ್ರೆಸ್ ಸದಸ್ಯರು ಪೀಠದಿಂದ ಇಳಿಸಿ, ಚಂದ್ರಶೇಖರ್ ಪಾಟೀಲ್ ಅವರನ್ನು ಕೂರಿಸಿ, ಪ್ರತಿಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ, ಸದಸ್ಯ ಎಸ್.ರವಿ ಪೀಠದ ಎರಡು ಭಾಗದಲ್ಲಿ ನಿಂತು ಯಾರು ಪ್ರವೇಶಿಸದಂತೆ ತಡೆದರು.
ವೈ.ಎ ನಾರಾಯಣ ಸ್ವಾಮಿ, ಆಯನೂರು ಮಂಜುನಾಥ್, ಮಹಾಂತೇಶ ಕವಟಗಿ ಮಟ, ಅರುಣ್ ಶಹಾಪೂರ ಸೇರಿದಂತೆ ಸಚಿವರಾದ ಮಾಧುಸ್ವಾಮಿ ಸವದಿ ಹಾಗೂ ವಿರೋಧಪಕ್ಷದ ಸಚೇತಕ ಎಂ.ನಾರಾಯಣ ಸ್ವಾಮಿ ಸೇರಿದಂತೆ ಸದಸ್ಯರಿಂದ ಎಳೆದಾಟಕ್ಕೆ ಪರಿಷತ್ ಸಾಕ್ಷಿಯಾಯಿತು.
ಗಲಾಟೆ ತಡೆಯಲು ಬಂದ ಮಾರ್ಷಲ್ ಗಳನ್ನೂ ತಳ್ಳಲಾಯಿತು. ಸಭಾಪತಿ ಪೀಠದ ಮುಂಭಾಗದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಅಳವಡಿಸಿದ್ದ ಗಾಜಿನ ಕವಚನ್ನು ಎಳೆದು ಹಾಕಿದರು.
ಇದನ್ನೂ ಓದಿ: ಪರಿಷತ್ ನಲ್ಲಿ ಸದಸ್ಯರ ಹೊಯ್ ಕೈ: ಹಿರಿಯ ಸಚಿವರೊಂದಿಗೆ ಸಿಎಂ ಯಡಿಯೂರಪ್ಪ ಸಭೆ
ನಂತರ ಮಾರ್ಷಗಳ ಭದ್ರತೆಯೊಂದಿಗೆ ಆಗಮಿಸಿದ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಸಭೆಯನ್ನು ಅನಿರ್ಧಿಷ್ಠಾವಧಿಗೆ ಮುಂದೂಡಿದರು. ಆದರೆ ಸಭೆ ಮುಂದೂಡಿದರೂ ಸದಸ್ಯರ ವಾಗ್ವಾದ ಮಾತ್ರ ಮುಂದುವರಿಯಿತು.
ಕುರ್ಚಿಗಾಗಿ ಪರಸ್ಪರ ಸದಸ್ಯರ ವಾಗ್ವಾದ, ಗಲಾಟೆಗಳನ್ನು ಕುಳಿತಲ್ಲೇ ವೀಕ್ಷಿಸಿದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಗದ್ಗದಿತರಾದರು.
ಒಟ್ಟಾರೆ ಚಿಂತರ ಚಾವಡಿ ಎಂದೇ ಹೆಸರಾದ ವಿಧಾನ ಪರಿಷತ್ ನಲ್ಲಿ ಚಿಂತನೆಗಿಂತ ಶಕ್ತಿ ಪ್ರದರ್ಶನವೇ ನಡೆದಿದ್ದು ಮಾತ್ರ ವಿಪರ್ಯಾಸ.