Advertisement
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ ಅವರು ”ಸಿ.ಟಿ.ರವಿ ಅವರು ಬಳಸಿದ್ದಾರೆ ಎನ್ನಲಾದ ಪದ ಪರಿಷತ್ತಿನಲ್ಲಿ ದಾಖಲಾಗಿಲ್ಲ.ಸಿ.ಟಿ.ರವಿ ಮತ್ತು ಸಚಿವೆ ಲಕ್ಷ್ಮಿ ಇಬ್ಬರೂ ದೂರು ನೀಡಿದ್ದು, ನಾನು ಅವರೊಂದಿಗೆ ಮಾತನಾಡಿದ್ದೇನೆ, ನಂತರ ಈ ಬೆಳವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ.
ಸಭಾಪತಿಗಳ ಹೇಳಿಕೆ ಮಹತ್ವ ಪಡೆದಿದ್ದು, ಪೊಲೀಸರು ತನಿಖೆಯ ಭಾಗವಾಗಿ ಪರಿಷತ್ ಕಲಾಪದ ಆಡಿಯೋ ಮತ್ತು ವಿಡಿಯೋ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಪ್ರಕರಣ ದೊಡ್ಡ ಮಟ್ಟದ ರಾಜಕೀಯ ಸಮರಕ್ಕೆ ಕಾರಣವಾಗಿದ್ದು ಉನ್ನತ ಮಟ್ಟದ ತನಿಖೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಸೂಕ್ಷ್ಮಗಳನ್ನು ಕಂಡು ಹಿಡಿದು ಯಾವ ಪದ ಬಳಕೆ ಮಾಡಿದ್ದಾರೆ ಎನ್ನುವುದನ್ನು ಕಂಡು ಹಿಡಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಸಿ.ಟಿ.ರವಿ ಅವರನ್ನು ಬಂಧಿಸಿಸುವುದಕ್ಕೆ ಮತ್ತು ಸುವರ್ಣ ಸೌಧದ ಆವರಣದಲ್ಲೇ ಅವರ ಮೇಲೆ ದಾಳಿ ನಡೆಸಲುಯತ್ನಿಸಿರುವುದರ ವಿರುದ್ಧ ಬಿಜೆಪಿ ಸಮರ ಸಾರಿದೆ. ಕಾಂಗ್ರೆಸ್ ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ.
Related Articles
Advertisement
ಬಿಜೆಪಿ ಆಕ್ರೋಶ
ಸಿಟಿ.ರವಿ ಅವರನ್ನು ಬಿಡುಗಡೆ ಮಾಡಲು ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಬಿಜೆಪಿ ಆಕ್ರೋಶ ಇನ್ನಷ್ಟು ಹೆಚ್ಚಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ “ರಾಜ್ಯ ಉಚ್ಛ ನ್ಯಾಯಾಲಯ ಕಾಂಗ್ರೆಸ್ ಸರ್ಕಾರದ ಪೊಲೀಸ್ ದಬ್ಬಾಳಿಕೆಗೆ ಮಂಗಳಾರತಿ ಎತ್ತಿದೆ.ಪ್ರಜಾಪ್ರಭುತ್ವ ಗೆದ್ದಿದೆ,ಶಾಸಕ ಸಿ.ಟಿ.ರವಿ ಅವರಬಿಡುಗಡೆಗೆ ಆದೇಶ ಹೊರಟಿದೆ. ಜನಪ್ರತಿನಿಧಿಗಳು ಎಂಬುದನ್ನೂ ಲೆಕ್ಕಿಸದೇ ನೀತಿ-ನಿಯಮಗಳನ್ನು ಮೀರಿ ಪೊಲೀಸ್ ಬಲ ಬಳಸಿಕೊಂಡು, ಸರ್ವಾಧಿಕಾರಿ ಆಡಳಿತ ನೆನಪಿಸುವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ. ನಿನ್ನೆಯಿಂದ ಇಂದಿನವರಗೂ ಮಾನ್ಯ ಸಿ. ಟಿ. ರವಿ ಅವರನ್ನು ನಿಯಮ ಮೀರಿ ಬಂಧಿಸುವ ಮೂಲಕ ತುರ್ತು ಪರಿಸ್ಥಿತಿಯ ಕರಾಳತೆಯನ್ನು ಕಾಂಗ್ರೆಸ್ ಸರ್ಕಾರ ಇಂದಿನ ಪೀಳಿಗೆಗೆ ನೆನಪು ಮಾಡಿಕೊಟ್ಟಿದೆ. ಗೂಂಡಾಗಳನ್ನು ಪೋಷಿಸಿಕೊಂಡು ಸರ್ಕಾರ ನಡೆಸುವುದು, ಪೊಲೀಸರನ್ನು ಬಳಸಿಕೊಂಡು ಯಾರನ್ನು ಬೇಕಾದರೂ ಬಂಧಿಸುತ್ತೇವೆಂದು ದ್ವೇಷ ಸಾರಲು ಹೊರಟಿದ್ದ ಈ ಸರ್ಕಾರಕ್ಕೆ ಪಾಠ ಹೇಳುವ ರೀತಿಯಲ್ಲಿ ಉಚ್ಚ ನ್ಯಾಯಾಲಯ ಸಕಾಲದಲ್ಲಿ ಮದ್ಯ ಪ್ರವೇಶಿಸಿ ಸಂವಿಧಾನ ಹಾಗೂ ಈ ನೆಲದ ಕಾನೂನಿನ ಘನತೆಯನ್ನು ತಿಳಿಸಿಕೊಟ್ಟಿದೆ. ನ್ಯಾಯಾಲಯದ ಈ ತೀರ್ಪನ್ನು ಕರ್ನಾಟಕದ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸಿ, ಶಾಸಕ ಸಿ.ಟಿ ರವಿಯವರನ್ನು ಅಭಿನಂದಿಸುತ್ತೇನೆ. ”ಪ್ರಜಾಪ್ರಭುತ್ವ ದಮನಮಾಡಿ ದಬ್ಬಾಳಿಕೆ, ಕ್ರೌರ್ಯ ತುಂಬಿಕೊಂಡ ವರ್ತನೆಗಳು ಹಾಗೂ ಭ್ರಷ್ಟಾಚಾರದ ಹಗರಣಗಳನ್ನು ಮೈಗೆ ಮೆತ್ತಿಕೊಂಡಿರುವ ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ತಾರ್ಕಿಕ ಅಂತ್ಯ ಕಾಣುವವರೆಗೂ ಬಿಜೆಪಿ ವಿರಮಿಸದೇ ತನ್ನ ಹೋರಾಟ ಮುಂದುವರೆಸಲಿದೆ.ಪ್ರಜಾಪ್ರಭುತ್ವ ದೇಗುಲದಲ್ಲಿ ನಡೆದ ಪರಮ ದೌರ್ಜನ್ಯದ ಈ ಘಟನೆಯನ್ನು, ದೇಶದ ಗಮನ ಸೆಳೆಯುವಂತೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪರಿಣಾಮಕಾರಿ ಪಾತ್ರ ವಹಿಸಿದ ಮಾಧ್ಯಮಗಳನ್ನು ಈ ಸಂದರ್ಭದಲ್ಲಿ ಮನಃ ಪೂರ್ವಕವಾಗಿ ಅಭಿನಂದಿಸುವೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.