ದೋಹಾ: ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಸಲ ಆಡಲಿಳಿದ ಕತಾರ್, ರವಿವಾರ ರಾತ್ರಿಯ ಉದ್ಘಾಟನ ಪಂದ್ಯದಲ್ಲಿ ಈಕ್ವಡಾರ್‌ಗೆ 2-0 ಗೋಲುಗಳಿಂದ ಶರಣಾಗಿದೆ. ತವರಿನ ತಂಡವನ್ನು ಬೆಂಬಲಿಸಲು “ಅಲ್ ಬೈತ್ ಕ್ರೀಡಾಂಗಣ’ದಲ್ಲಿ ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳು ಭಾರೀ ನಿರಾಸೆ ಅನುಭವಿಸಿದರು.
“ಎ’ ವಿಭಾಗದ ಈ ಮುಖಾ ಮುಖೀಯಲ್ಲಿ ಈಕ್ವಡಾರ್‌ನ ಅನು ಭವಿ ಸ್ಟ್ರೈಕರ್ ಎನೆರ್ ವಲೆನ್ಸಿಯ ಮೊದಲಾರ್ಧದಲ್ಲೇ ಪಂದ್ಯದ ಅವಳಿ ಗೋಲು ಸಿಡಿಸಿ ಹೀರೋ ಎನಿಸಿದರು. ಮೊದಲ ಗೋಲನ್ನು 16ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಹೊಡೆದರು. 31ನೇ ನಿಮಿಷದಲ್ಲಿ ಅತ್ಯಾಕರ್ಷಕ ಹೆಡ್ ಗೋಲ್ ಮೂಲಕ ಅಂತರವನ್ನು ಹೆಚ್ಚಿಸಿದರು.
16ನೇ ನಿಮಿಷದಲ್ಲಿ ಗೋಲು ಬಾರಿಸಲು ಮುನ್ನುಗ್ಗಿ ಬಂದ ವಲೆನ್ಸಿಯ ಅವರನ್ನು ಕತಾರ್‌ನ ಗೋಲ್ ಕೀಪರ್ ಸಾದ್ ಅಲ್‌ಶೀಬ್ ಕೆಳಗೆ ಉರುಳಿಸಿದ್ದರಿಂದ ಈಕ್ವಡಾರ್‌ಗೆ
ಪೆನಾಲ್ಟಿ ಕಾರ್ನರ್ ಲಭಿಸಿತು. ಇದನ್ನು ವಲೆನ್ಸಿಯ ವ್ಯರ್ಥಗೊಳಿಸಲಿಲ್ಲ. ದ್ವಿತೀಯ ಗೋಲಿನ ವೇಳೆ ಏಂಜೆಲೊ ಪ್ರಸಿಯಾಡೊ ನೆರವಿತ್ತು. ಅವರಿಂದ ಕ್ರಾಸ್ ಆಗಿ ಬಂದ ಚೆಂಡನ್ನು ಹೆಡ್ ಮಾಡಿ ಗೋಲು ಪೆಟ್ಟಿಗೆಗೆ ತಳ್ಳಿದರು.
ಈ ನಡುವೆ ಕತಾರ್ ಆಟಗಾರರಿಗೂ ಗೋಲು ಬಾರಿಸುವ ಒಂದೆರಡು ಉತ್ತಮ ಅವಕಾಶವಿದ್ದರೂ ಯಶಸ್ಸು ಕಾಣಲಿಲ್ಲ. ಇದು ವಿಶ್ವಕಪ್ ಇತಿಹಾಸದ ಆರಂಭಿಕ ಪಂದ್ಯದಲ್ಲಿ ಆತಿಥೇಯ ದೇಶವೊಂದಕ್ಕೆ ಎದುರಾದ ಮೊದಲ ಸೋಲು. ಈಕ್ವಡಾರ್ ತನ್ನ 2ನೇ ಪಂದ್ಯವನ್ನು ಶುಕ್ರವಾರ ನೆದರ್ಲೆಂಡ್ಸ್ ವಿರುದ್ಧ ಆಡಲಿದೆ. ಕತಾರ್ ಅದೇ ದಿನ ಸೆನೆಗಲ್ ವಿರುದ್ಧ ಸೆಣಸಲಿದೆ.