Advertisement

Chess; ವಿಶ್ವವಿಜಯದ ಟ್ರೋಫಿ ಎತ್ತಿಹಿಡಿದ ಗುಕೇಶ್‌

10:45 PM Dec 13, 2024 | Team Udayavani |

ಸಿಂಗಾಪುರ: ಹದಿನೆಂಟನೇ ವರ್ಷಕ್ಕೇ ಚೆಸ್‌ ವಿಶ್ವ ಚಾಂಪಿಯನ್‌ ಆಗಿರುವ ಡಿ. ಗುಕೇಶ್‌ಗೆ ಫಿಡೆ ಅಧ್ಯಕ್ಷ ಅರ್ಕಾಡಿ ಡ್ವಾರ್ಕೊವಿಚ್‌ ಶುಕ್ರವಾರ ಟ್ರೋಫಿಯನ್ನು ಹಸ್ತಾಂತರಿಸಿದರು. ಗುರುವಾರವೇ ಪ್ರಶಸ್ತಿ ಗೆದ್ದಿದ್ದರೂ, ಅದನ್ನು ನೀಡುವರೆಗೆ ಮುಟ್ಟುವುದಿಲ್ಲ ಎಂದಿದ್ದ ಗುಕೇಶ್‌, ಶುಕ್ರವಾರ ಮುಕ್ತಾಯ ಸಮಾರಂಭದಲ್ಲಿ ಅದನ್ನು ಸ್ವೀಕರಿಸಿದರು. ವಿಶ್ವ ಚಾಂಪಿಯನ್‌ಶಿಪ್‌ ಗೆದ್ದ ವಿಶ್ವದ 18ನೇ, ಭಾರತದ ಕೇವಲ 2ನೇ ಆಟಗಾರನೆಂಬುದು ಗುಕೇಶ್‌ ಹೆಗ್ಗಳಿಕೆ.

Advertisement

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗುಕೇಶ್‌, “ಈ ಕ್ಷಣಕ್ಕಾಗಿ ನಾನು ಕಾಯುತ್ತಿದ್ದೆ. ನಾನು ಲಕ್ಷಾಂತರ ಬಾರಿ ಈ ಗಳಿಗೆಯನ್ನು ಅನುಭವಿಸಿದ್ದೇನೆ ಎಂಬ ಭಾವ ಬರುತ್ತಿದೆ. ಪ್ರತಿದಿನವೂ ಈ ಗಳಿಗೆಯನ್ನು ನಿರೀಕ್ಷಿಸುತ್ತ ಏಳುತ್ತಿದ್ದೆ. ಈ ಟ್ರೋಫಿಯನ್ನು ಎತ್ತಿ ಹಿಡಿಯುವುದು, ಈ ವಾಸ್ತವಿಕ ಕ್ಷಣ ನನ್ನ ಜೀವನದಲ್ಲಿ ಉಳಿದೆಲ್ಲದ್ದಕ್ಕಿಂತ ಶ್ರೇಷ್ಠ ಎಂದರು’.ಸಮಾರಂಭದಲ್ಲಿ ಗುಕೇಶ್‌ ಅವರ ತಂದೆ, ತಾಯಿ ಉಪಸ್ಥಿತರಿದ್ದರು.

ಲೋಕಸಭೆಯಲ್ಲಿ ಶ್ಲಾಘನೆ
ಗುಕೇಶ್‌ ಸಾಧನೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಶಂಸಿಸಲಾಗಿದೆ. ಲೋಕಸಭೆಯಲ್ಲಿ ಸಭಾಧ್ಯಕ್ಷ ಓಂ ಬಿರ್ಲಾ, ರಾಜ್ಯಸಭೆಯಲ್ಲಿ ಜಗದೀಪ್‌ ಧನ್ಕರ್‌ ಗುಕೇಶ್‌ಗೆ ಅಭಿನಂದನೆ ಸಲ್ಲಿಸಿದರು.

ಲಿರೆನ್‌ ಸೋಲು ಸಂಶಯಾಸ್ಪದ!
14ನೇ ಪಂದ್ಯದಲ್ಲಿ ಸೋತ ಚೀನದ ಡಿಂಗ್‌ ಲಿರೆನ್‌ ಆಟವನ್ನು ರಷ್ಯಾ ಚೆಸ್‌ ಸಂಸ್ಥೆ ಅಧ್ಯಕ್ಷ ಆ್ಯಂಡ್ರೆ ಫಿಲಾಟೊವ್‌ ತೀವ್ರವಾಗಿ ಟೀಕಿಸಿದ್ದಾರೆ. “ಲಿರೆನ್‌ ಆಟ ಸಂಶಯಾಸ್ಪದವಾಗಿದೆ. ಪ್ರಬಲ ಹಿಡಿತ ಹೊಂದಿದ್ದ ಲಿರೆನ್‌ ಅಂತಹ ಸ್ಥಿತಿಯಲ್ಲಿ ಸೋತಿದ್ದಾರೆ. ಒಬ್ಬ ಪ್ರಥಮ ದರ್ಜೆ ಆಟಗಾರ ಕೂಡ ಹೀಗೆ ಸೋಲುವುದಿಲ್ಲ, ಈ ಸೋಲಿನ ಬಗ್ಗೆ ತನಿಖೆಯಾಗಬೇಕು’ ಎಂದು ಫಿಲಾಟೊವ್‌ ಹೇಳಿದ್ದಾರೆ. ಭಾರತೀಯ ಚೆಸ್‌ ಸಾಧನೆ ಬಗ್ಗೆ ರಷ್ಯನ್ನಗಿರುವ ಅಸೂಯೆಯೇ ಈ ಟೀಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಗುಕೇಶ್‌ಗೆ 5 ಕೋಟಿ ರೂ.
ವಿಶ್ವವಿಜೇತ ಗುಕೇಶ್‌ಗೆ ತಮಿಳು ನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ 5 ಕೋಟಿ ರೂ. ನಗದು ಪುರಸ್ಕಾರ ಘೋಷಿಸಿ ದ್ದಾರೆ. ಈಗಾಗಲೇ ಗುಕೇಶ್‌ಗೆ ಪ್ರಶಸ್ತಿ ಮೊತ್ತವಾಗಿ 11.45 ಕೋಟಿ ರೂ. ಲಭಿಸಿದೆ.

Advertisement

ಪುತ್ರನಿಗಾಗಿ ವೈದ್ಯ ವೃತ್ತಿಯನ್ನೇ ಬಿಟ್ಟರು
ಗುಕೇಶ್‌ ಚೆಸ್‌ ಭವಿಷ್ಯಕ್ಕಾಗಿ ಚೆನ್ನೈನಲ್ಲಿ ಕಿವಿ, ಮೂಗು, ಗಂಟಲು ಶಸ್ತ್ರಚಿಕಿತ್ಸಕರಾಗಿರುವ ತಂದೆ ರಜನಿಕಾಂತ್‌ ವೃತ್ತಿಯನ್ನು ಬಿಟ್ಟು ಮಗನೊಂದಿಗೆ ಸುತ್ತಲಾರಂಭಿಸಿದರು. ಪರಿಣಾಮ ಕುಟುಂಬವನ್ನು ಸಾಕುವ ಹೊಣೆ ಜೀವಶಾಸ್ತ್ರಜ್ಞೆ, ತಾಯಿ ಪದ್ಮಕುಮಾರಿಯ ಮೇಲೆ ಬಿದ್ದಿತ್ತು.

ಗುಕೇಶ್‌ ತಮಗೆ ಸೇರಿದವನು!
ಮೂಲ ಆಂಧ್ರಪ್ರದೇಶಕ್ಕೆ ಸೇರಿದ ದೊಮ್ಮರಾಜು ಗುಕೇಶ್‌, ಹುಟ್ಟಿದ್ದು, ಬೆಳೆದದ್ದು ತಮಿಳುನಾಡಿನಲ್ಲಿ. ಅವರು ವಿಶ್ವ ಚಾಂಪಿಯನ್‌ ಆಗುತ್ತಿದ್ದಂತೆ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಗುಕೇಶ್‌ ತಮ್ಮ ರಾಜ್ಯಕ್ಕೆ ಸೇರಿದವನು ಎಂದು ವಾಗ್ವಾದ ಮಾಡಿದ್ದಾರೆ. “ಇಡೀ ತಮಿಳುನಾಡು ನಿಮ್ಮ ಸಾಧನೆಗೆ ಹೆಮ್ಮೆ ಪಡುತ್ತದೆ. ಚೆನ್ನೈ ಜಗತ್ತಿನ ಚೆಸ್‌ ರಾಜಧಾನಿ ಎನ್ನುವುದನ್ನು ನೀವು ಸಾಬೀತು ಮಾಡಿದ್ದೀರಿ’ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಟ್ವೀಟ್‌ ಮಾಡಿದ್ದರು. ಇದರ ಬೆನ್ನಲ್ಲೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು “ಗುಕೇಶ್‌ ನಮ್ಮ ತೆಲುಗಿನ ಕುವರ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next