Advertisement

ರೈತರ  ಬೆಳೆ ಸಾಲಮನ್ನಾ: ಸರ್ವರ್‌ ಸಮಸ್ಯೆಯೇ ಸದ್ಯ ತಲೆನೋವು!

10:43 AM Dec 01, 2018 | Harsha Rao |

ಕಡಬ: ರಾಜ್ಯ ಸರಕಾರ ರೈತರ ಬೆಳೆ ಸಾಲ ಮನ್ನಾ ಘೋಷಿಸಿ ತಿಂಗಳುಗಳು ಕಳೆದಿವೆ. ನ. 25ರೊಳಗೆ ರೈತರಿಂದ ಅಗತ್ಯ ದಾಖಲೆಗಳನ್ನು ಪ್ರಾಥಮಿಕ ಸಹಕಾರಿ ಸಂಘಗಳು ಸಂಗ್ರಹಿಸಿ ಸರ್ವರ್‌ಗೆ ಅಪ್ಲೋಡ್‌ ಮಾಡಬೇಕಾಗಿತ್ತು. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ನಿಗದಿತ ಸಮಯದಲ್ಲಿ ಅಪ್ಲೋಡ್‌ ಮಾಡಲಾಗದೆ ಸಹಕಾರಿ ಸಂಘಗಳು ಪರದಾಡುತ್ತಿವೆ.

Advertisement

ಸಾಲಮನ್ನಾಕ್ಕಾಗಿ ಸಂಘಗಳು
ಸಾಲಗಾರ ಕುಟುಂಬದ ಯಜಮಾನ ಒದಗಿಸಿದ ರೇಷನ್‌ ಕಾರ್ಡ್‌ನಲ್ಲಿ ನಮೂದಿಸಲಾದ ಕುಟುಂಬ ಸದಸ್ಯರೆಲ್ಲರ ಪಾನ್‌ ಕಾರ್ಡ್‌ (ಇದ್ದರೆ), ಆಧಾರ್‌ ಹಾಗೂ ಜಿಲ್ಲಾ ಮಧ್ಯವರ್ತಿ ಬ್ಯಾಂಕಲ್ಲಿ ತೆರೆಯಲಾದ ಖಾತೆ ಸಂಖ್ಯೆ ಪಡೆದು ಅಪ್ಲೋಡ್‌ ಮಾಡಬೇಕು. ಕುಟುಂಬ ಸದಸ್ಯರು ಬೇರೆ ಊರಿನಲ್ಲಿದ್ದರೆ ಅವರ ವಿವರಗಳನ್ನೂ ಸಂಗ್ರಹಿಸಬೇಕು. ಸರ್ವರ್‌ ಸಮಸ್ಯೆಯ ಜತೆಗೆ ಸರಕಾರ ಪದೇ ಪದೇ ವೆಬ್‌ಸೈಟ್‌ ವಿಳಾಸ ಬದಲಾಯಿಸಿದ್ದೂ ತಲೆನೋವಾಗಿದೆ.
ರೈತರಿಂದ ಸಂಗ್ರಹಿಸಿದ ಅಂಕಿ ಅಂಶಗಳನ್ನು ಮೊದಲು ನಿಗದಿತ ಅರ್ಜಿ ನಮೂನೆಯಲ್ಲಿ ತುಂಬಿ ಅನಂತರ ಯಜಮಾನನ ಸಹಿ ಪಡೆಯಬೇಕು. ಈ ರೀತಿ ಪ್ರತಿ ಸಾಲಗಾರ ರೈತನ ಅರ್ಜಿ ಭರ್ತಿ ಮಾಡಲು ಅರ್ಧದಿಂದ ಮುಕ್ಕಾಲು ತಾಸು ಬೇಕು. ಅನಂತರ ವೆಬ್‌ಸೈಟ್‌ನಲ್ಲಿ ಫಾರ್ಮ್ ಭರ್ತಿ ಮಾಡಬೇಕು. ಕೊನೆಯಲ್ಲಿ ರೈತನ ಫೋಟೊ ಹಾಗೂ ಹಸ್ತಾಕ್ಷರ ಇರುವ ಅರ್ಜಿ ನಮೂನೆಯನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಬೇಕು. ಆಗ ಸರ್ವರ್‌ ಕೈಕೊಟ್ಟರೆ ಮತ್ತೆ ಖಾಲಿ ಫಾರಂ ಎದುರಾಗುತ್ತದೆ!

ಹೈರಾಣಾಗಿರುವ ಸಿಬಂದಿ
ಅರ್ಜಿ ಅಪ್ಲೋಡ್‌ಗಾಗಿ ಸಹಕಾರಿ ಸಂಘಗಳ ಸಿಬಂದಿ ರಾತ್ರಿ ಹಗಲೆನ್ನದೆ ಕೆಲಸ ಮಾಡುತ್ತಿದ್ದಾರೆ. ಅರ್ಜಿ ಸಲ್ಲಿಸಲು ಪ್ರತಿ ಪ್ರಾಥಮಿಕ ಸಂಘಕ್ಕೂ ಒಂದು ಕೋಡ್‌ ಕೊಡಲಾಗಿದೆ. ಈ ಕೋಡ್‌ ಹಾಕಿ ವೆಬ್‌ಸೈಟ್‌ ತೆರೆದರೆ ಮೂಲಮಾಹಿತಿ ತುಂಬುವ ಪೇಜ್‌ ತೆರೆದುಕೊಳ್ಳುತ್ತದೆ. ಇದಕ್ಕೆ ಕೆಲವೊಮ್ಮೆ ಗಂಟೆಗಟ್ಟಲೆ ಕಾಯಬೇಕಾಗುತ್ತದೆ ಅಥವಾ ಯಾವುದೇ ಕ್ಷಣ ಡಿಸ್ಕನೆಕ್ಟ್ ಆಗಬಹುದು. ಇನ್ನೇನು ಎಲ್ಲವನ್ನೂ ಭರ್ತಿ ಮಾಡಿ ಓಕೆ ಕೊಡುವ ಸಂದರ್ಭದಲ್ಲಿ ಸರ್ವರ್‌ ಕೈಕೊಡುವುದೂ ಇದೆ. ಗ್ರಾಮೀಣ ಪ್ರಾ.ಸ. ಸಂಘಗಳಲ್ಲಿ ಸಾಲ ಮನ್ನಾ ಅರ್ಹ ರೈತರು ದೊಡ್ಡ ಸಂಖ್ಯೆಯಲ್ಲಿರುತ್ತಾರೆ. 2ರಿಂದ 3 ಸಾವಿರ ರೈತರು ಇರುವ ಸಂಘಗಳೂ ಇವೆ.

ಅರ್ಜಿ ತುಂಬಿದ ಮೇಲೆ ಆಧಾರ್‌ ಲಿಂಕ್‌ ಪುಟ ತೆರೆದುಕೊಳ್ಳುತ್ತದೆ. ಮೇಲಿನ ಎರಡು ಹಂತಗಳಾದ ಅನಂತರ ಮೂರನೇ ಹಂತದಲ್ಲಿ ವಿಳಾಸ, ನಾಲ್ಕನೇ ಹಂತದಲ್ಲಿ ರೇಶನ್‌ ಕಾರ್ಡ್‌, ಐದನೇ ಹಂತದಲ್ಲಿ ಪಹಣಿ ಪತ್ರದ ಮಾಹಿತಿ ಭರ್ತಿ ಮಾಡಬೇಕಿದೆ. ಆರನೇ ಹಂತದಲ್ಲಿ ರೈತರ ಸ್ವಘೋಷಿತ ನಮೂನೆ ಯನ್ನು ಅಪ್ಲೋಡ್‌ ಮಾಡಬೇಕು. ಬೆಳೆ ವಿಮೆ ಕಂತು ಬಾಕಿಯಿದ್ದಲ್ಲಿ ಅದನ್ನು ಭರ್ತಿ ಮಾಡಿ ಮುಂದುವರಿಯಬೇಕು. ಮಾಹಿತಿ ಒದಗಿ ಸಿದ ಅನಂತರ ವೆರಿಫಿಕೇಶನ್‌ಗೆ ಸಮಯ ತೆಗೆದು ಕೊಳ್ಳುತ್ತದೆ. ತುಂಬಿದ ಅರ್ಜಿಗಳನ್ನು ವೆರಿಫಿಕೇಶನ್‌ ಮಾಡುವುದು ಸಿಬಂದಿಗೆ ಸವಾಲೇ ಸರಿ.

ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸದ ಬಿಎಸ್ಸೆನ್ನೆಲ್‌
ಕೇಂದ್ರ ಸರಕಾರವು ರಾಜ್ಯದ ಎಲ್ಲ ಗ್ರಾ.ಪಂ.ಗಳಿಗೆ ರಾಷ್ಟ್ರೀಯ ಆಪ್ಟಿಕಲ್‌ ಫೈಬರ್‌ ನೆಟ್‌ವರ್ಕ್‌ (NOಊN) ಯೋಜನೆಯಡಿ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಸಂಪರ್ಕ ಕಲ್ಪಿಸಿದ್ದು, ಪಂ. ವ್ಯಾಪ್ತಿಯ ಇತರ ಸರಕಾರಿ ಕಚೇರಿಗಳು ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೂ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಸೇವೆ ನೀಡುವಂತೆ ಬಿಎಸ್ಸೆನ್ನೆಲ್‌ಗೆ ಆದೇಶಿಸಿದೆ. ಅರ್ಜಿ ಸಲ್ಲಿಸಿ 2 ವರ್ಷ ಕಳೆದರೂ ಪ್ರಯೋಜನವಾಗಿಲ್ಲ. 

Advertisement

ಪೂರ್ವ ಸಿದ್ಧತೆ ಅಗತ್ಯ
ಸರಕಾರ ಇಂತಹ ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಿತ್ತು. ದುರ್ಬಲ ಇಂಟರ್ನೆಟ್‌, ಸರ್ವರ್‌ ಸಮಸ್ಯೆಗಳ ನಡುವೆ ಎಲ್ಲ ಕೆಲಸಗಳನ್ನು ಸಂಘಗಳ ಮೇಲೆಯೇ ಹೊರಿಸುವುದು ಸರಿಯಲ್ಲ. ನಮ್ಮಲ್ಲಿ 2,426 ಮಂದಿ ಸಾಲಮನ್ನಾ ಅರ್ಹ ರೈತರಿದ್ದಾರೆ. ನಮ್ಮ ಸಿಬಂದಿ ರಜೆ ಕೂಡ ಪಡೆಯದೆ ಇದೇ ಕೆಲಸದಲ್ಲಿದ್ದಾರೆ. ಸಂಘದ ದೈನಂದಿನ ಕೆಲಸಗಳಿಗೂ ತಡೆಯುಂಟಾಗಿದೆ.
-ರಮೇಶ್‌ ಕಲ್ಪುರೆ, ಅಧ್ಯಕ್ಷರು, ಕಡಬ ಸಿ.ಎ. ಬ್ಯಾಂಕ್‌

ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ
“ಸರ್ವರ್‌ ಸಮಸ್ಯೆ ಬಗ್ಗೆ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ಈ ಸಮಸ್ಯೆ ಯನ್ನು ಪರಿಹರಿಸಲು ಅಗತ್ಯವಿರುವ ಕ್ರಮ ತೆಗೆದು ಕೊಳ್ಳುತ್ತಿದ್ದಾರೆ.’
– ಕೃಷ್ಣಮೂರ್ತಿ ಕೆ.ಎಚ್‌. ಸಹಾಯಕ ಆಯುಕ್ತರು, ಪುತ್ತೂರು

– ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next