Advertisement

ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ

03:50 PM Dec 25, 2024 | Team Udayavani |

ಉದಯವಾಣಿ ಸಮಾಚಾರ 
ಜೋಯಿಡಾ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ರೈತರು ಬೆಳೆವಿಮೆ ತುಂಬಿದರು ಬೆಳೆಹಾನಿಯಾದ ವರಿಗೆ ಅದಕ್ಕೆ ಬರಬೇಕಾದ ಪರಿಹಾರ ಮಾತ್ರ ಬರದೆ ಇರುವುದು ರೈತರ ನಿದ್ದೆಗೆಡಿಸಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮುಖ್ಯವಾಗಿ ಹಿಂದುಳಿದ ತಾಲೂಕು ಜೋಯಿಡಾಕ್ಕೆ ವರ್ಷವೂ ಬೆಳೆವಿಮೆ ಹಾಗೂ ಇತರೆ ಕೃಷಿಗೆ ಹಾನಿಯಾದಾಗ ಯಾವ ಪರಿಹಾರವು ರೈತರಿಗೆ ಸಿಗುತ್ತಿಲ್ಲ ಎಂದರೆ ತಪ್ಪಾಗಲಾರದು.

Advertisement

ಹೌದು, ಜೋಯಿಡಾ ತಾಲೂಕಿನ ಜನ ಮುಗ್ಧರು ಎನ್ನುತ್ತ ಬೆಳೆ ಹಾನಿಯಾದಾಗಲು ರೈತರಿಗೆ ಪರಿಹಾರ ಒದಗಿಸದೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸುಮ್ಮನಿರುವುದು ಬೇಸರದ ಸಂಗತಿಯಾಗಿದೆ. ಈ ಬಾರಿ ಅಡಕೆ ಬೆಳೆ ಸಂಪೂರ್ಣ ಕೊಳೆ ರೋಗದಿಂದ ಹಾನಿಯಾಗಿ, ಬಹಳಷ್ಟು ರೈತರ ತೋಟವು ಸಾಯುತ್ತಿದೆ.

ಆದರೆ ಸರ್ಕಾರ ಮಾತ್ರ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ, ರೈತರು ಬೆಳೆ ಹಾಳಾದಾಗ ಬೆಳೆವಿಮೆ ಬರದೆ ಹೋದರೆ ಬೆಳೆವಿಮೆ ತುಂಬಿ
ಏನು ಲಾಭ ಎನ್ನುವುದು ರೈತರ ಪ್ರಶ್ನೆಯಾಗಿದೆ. ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ರೈತರಿಗೆ ಬೆಳೆವಿಮೆ ದೊರೆತಿದ್ದು, ನಮ್ಮ ಜಿಲ್ಲೆ ಅದರಲ್ಲೂ ಜೋಯಿಡಾ ತಾಲೂಕಿನ ಜನರಿಗೆ ಬೆಳೆವಿಮೆ ದೊರೆತಿಲ್ಲ. ಅಲ್ಲದೆ ಅಡಕೆ ಕೊಳೆ ರೋಗಕ್ಕೂ ಪರಿಹಾರ ಸಿಕ್ಕಿಲ್ಲ.

ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ಕೊಳೆ ರೋಗ ಬಂದ ರೈತರ ತೋಟಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಒಪ್ಪಿಸಲಾಗಿದೆ. ಆದರೆ ಕಳೆದ ಎರಡು ಮೂರು ವರ್ಷಗಳಿಂದ ರೈತರಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರೆ ವಿನಃ ಪರಿಹಾರ ಮಾತ್ರ ದೊರೆತಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ, ಅತಿವೃಷ್ಠಿಯಿಂದ ರೈತರ ಬೆಳೆಗಳು ಹಾಳಾಗಿವೆ ಇದನ್ನು ಗಮನದಲ್ಲಿ ಇಟ್ಟುಕೊಂಡು ಜಿಲ್ಲಾಡಳಿತ, ತಾಲೂಕು ಆಡಳಿತ ಸರ್ಕಾರಕ್ಕೆ ಕೂಡಲೇ ಬೆಳೆವಿಮೆ ಬಿಡುಗಡೆ ಮಾಡುವಂತೆ ಒತ್ತಾಯಿಸಬೇಕು.

ಸರ್ಕಾರ ಕೂಡಲೇ ರೈತರಿಗೆ ಬೆಳೆವಿಮೆ ಕೊಡಿಸಬೇಕು. ವಿಮಾ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಮಾತಾಗಿದ್ದು, ಸ್ಥಳೀಯ ಶಾಸಕರು, ಕೇಂದ್ರ ಸಚಿವರು ಈ ಬಗ್ಗೆ ಲಕ್ಷ್ಯ ವಹಿಸಿ ರೈತರ ಕಷ್ಟಕ್ಕೆ ಸ್ಪಂದಿಸಬೇಕಿದೆ ಎನ್ನುವುದು ರೈತರ ಮಾತಾಗಿದೆ.
*ಆರ್‌.ಆರ್‌. ಹೆಗಡೆ, ರೈತ ಸಮಾಜದ ಅಧ್ಯಕ್ಷರು, ಜೋಯಿಡಾ

Advertisement

ಬೆಳೆವಿಮೆ ಹಾಗೂ ಕೊಳೆ ಪರಿಹಾರ ರೈತರಿಗೆ ಸಿಕ್ಕಿಲ್ಲ, ಬಹಳಷ್ಟು ಅಡಕೆ ಬೆಳೆದ ರೈತರ ಪರಿಸ್ಥಿತಿ ಗಂಭೀರವಾಗಿದೆ. ಸರ್ಕಾರದ ಮತ್ತು ಜನಪತ್ರಿನಿಧಿಗಳು ಕಷ್ಟಕ್ಕೆ ಸ್ಪಂದಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.
*ಶ್ರೀಧರ ಭಾಗ್ವತ್‌ ಅನುಭವಿ ರೈತ ಜೋಯಿಡಾ

ಈ ಬಾರಿ ಅಡಕೆ, ಕಾಳುಮೆಣಸು ಕೊಳೆ ರೋಗದಿಂದ ಸಂಪೂರ್ಣ ಸರ್ವನಾಶವಾಗಿದೆ. ಮರಗಳು, ಬಳ್ಳಿಗಳು ಸತ್ತಿವೆ. ಮತ್ತೆ ಅಡಕೆ ಮರ ತಯಾರು ಮಾಡಲು ಹತ್ತು ವರ್ಷಗಳೇ ಬೇಕು. ಇಂತಹ ಸಂದರ್ಭಗಳಲ್ಲಿ ಸರ್ಕಾರ ರೈತರ ಕೈ ಹಿಡಿಯಬೇಕು, ಬೆಳೆವಿಮೆ ಕೂಡಲೇ ಬಿಡುಗಡೆ ಮಾಡಬೇಕು. ಈ ಬಗ್ಗೆ ತೋಟಗಾರಿಖೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಜಿಲ್ಲಾಡಳಿತಕ್ಕೆ ವರದಿ
ಸಲ್ಲಿಸುತ್ತೇನೆ. ರೈತರ ಕಷ್ಟಕ್ಕೆ ಸ್ಪಂದಿಸುತ್ತೇವೆ.
*ಮಂಜುನಾಥ ಮೊನ್ನೋಳಿ,
ತಹಶೀಲ್ದಾರ್‌ ಜೋಯಿಡಾ

*ಸಂದೇಶ ದೇಸಾಯಿ

Advertisement

Udayavani is now on Telegram. Click here to join our channel and stay updated with the latest news.

Next